ದಾಂಡೇಲಿ: ಮದುವೆ ಮನೆಯಲ್ಲಿ ಎಡಗೈ ನಲ್ಲಿ ಊಟ ಮಾಡಿದಳೆಂಬ ಕಾರಣಕ್ಕೆ ವರನ ಕಡೆಯವರೆಲ್ಲ ಸೇರಿ ಮದುಮಗಳನ್ನೇ ಬಿಟ್ಟು ಹೊರಟ ಘಟನೆ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದಿದೆ.
ಈ ಘಟನೆಯಿಂದ ಉದ್ರಿಕ್ತರಾದ ಸ್ಥಳೀಯರು ವರನ ಕಡೆಯವರನ್ನು ತಕ್ಷಣ ತಡೆದು ನಿಲ್ಲಿಸಿದರಲ್ಲದೆ, ವಧು-ವರರನ್ನು ಮಹಿಳಾ ಕೇಂದ್ರದ ಕಚೇರಿಗೆ ಕರೆದುಕೊಂಡು ಹೋಗಿ, ಕೌಟುಂಬಿಕ ಸಲಹೆ ನೀಡಿ, ಮುಚ್ಚಳಿಕೆ ಪತ್ರ ಬರೆದು ನವ ಜೋಡಿಯನ್ನು ಒಂದುಗೂಡಿಸಿದ್ದಾರೆ.
ತಾಲೂಕಿನ ವಿಕಲಚೇತನ ಯುವತಿ ಮತ್ತು ದಾಂಡೇಲಿಗೆ ಹತ್ತಿರದ ತಾಲೂಕಿನ ಯುವಕನ ಮದುವೆ ಬುಧವಾರ ಈಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿತ್ತು. ಯುವಕ ಮಧ್ಯವರ್ತಿ ಮೂಲಕ ಯುವತಿಯನ್ನು ನೋಡಿ ಬಂದಿದ್ದ. ನೋಡಲು ಹೋದಾಗಲೇ ಯುವತಿಗೆ ಪೋಲಿಯೋ ಇರುವುದನ್ನು ಕುಟುಂಬಸ್ಥರು ತಿಳಿಸಿದ್ದರು. ಆದರೂ ಯುವಕ ಒಪ್ಪಿ ಮಾನವೀಯತೆ ಮೆರೆದಿದ್ದ. ಇದಾದ ಮೂರೇ ದಿನಕ್ಕೆ ಮಾ.9ರಂದು ಮದುವೆ ಶಾಸ್ತ್ರ ಮುಗಿಸಲಾಯಿತು.
ಇದನ್ನೂ ಓದಿ:ಪಂಜಾಬ್ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನಾಶ ಮಾಡಿದ ಸಿದ್ದು!: ಶೆಟ್ಟರ್ ವ್ಯಂಗ್ಯ
ಊಟದ ಸಮಯದಲ್ಲಿ ಮದುಮಗಳು ಎಡಗೈಯಲ್ಲಿ ಊಟ ಮಾಡುತ್ತಿರುವುದನ್ನು ಗಮನಿಸಿದ ಮದುಮಗ ತಕ್ಷಣವೇ ಮದುಮಗಳನ್ನು ಬಿಟ್ಟು ವಾಹನವನ್ನೇರಿ ಹೋಗಲು ಯತ್ನಿಸಿದ. ಆಗ ಸ್ಥಳೀಯರು ಆತನನ್ನು ತಡೆದು ನಿಲ್ಲಿಸಿ ಪೊಲೀಸರು ಮತ್ತು ಮಹಿಳಾ ಕೇಂದ್ರಕ್ಕೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ತಿಳಿ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ.