ಬೆಂಗಳೂರು: “ಇನ್ನು ಕೆಲ ದಿನಗಳಲ್ಲಿ ನೀವು ನಿವೃತ್ತರಾಗುತ್ತಿದ್ದೀರ. ಇನ್ನಾದರೂ ನನ್ನ ಹಿಂದೆ ಬೀಳುವುದನ್ನು ಬಿಡಿ’ ಹೀಗೆಂದು ಮೂರು ವರ್ಷಗಳ ಹಿಂದೆ ಆಗಿನ ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಧಮ್ಕಿ ಹಾಕಿದ್ದನಂತೆ!
ನಗರದಲ್ಲಿ ಶನಿವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ 2013ರ ಈ ಘಟನೆಯನ್ನು ಮೆಲುಕು ಹಾಕಿದ ನಿವೃತ್ತ ಪೊಲೀಸ್ ಆಯುಕ್ತ ನೀರಜ್‌ಕುಮಾರ್, ದಾವೂದ್ ಇಬ್ರಾಹಿಂ ಜತೆಗಿನ ಸಂಭಾಷಣೆಯನ್ನು ಮೆಲುಕು ಹಾಕಿದರು.
“ಡಯಲ್ ಡಿ ಫಾರ್’ ಎಂಬ ಆಂಗ್ಲ ಭಾಷೆಯ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿರುವ ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ಅವರ, “ದಾವೂದ್ ಇಬ್ರಾಹಿಂನ ಜತೆ ನನ್ನ ಟೆಲೆಫೋನ್ ಸಂಭಾಷಣೆ ಹಾಗೂ ಕೆಲ ರೋಚಕ ಸಿಬಿಐ ತನಿಖೆಗಳು’ ಪುಸ್ತಕ ಬಿಡುಗಡೆಗೊಳಿಸಿದ ಅವರು, “2013ರಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ತನಿಖೆ ವೇಳೆ ನನಗೆ ಕರೆ ಮಾಡಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ, “ಇನ್ನು ಕೆಲ ದಿನಗಳಲ್ಲಿ ನೀವು ನಿವೃತ್ತರಾಗುತ್ತಿದ್ದೀರ. ಇನ್ನಾದರೂ ನನ್ನ ಹಿಂದೆ ಬೀಳುವುದನ್ನು ಬಿಡಿ’ ಎಂದು ಹೇಳಿದ್ದ,” ಎಂದರು.
ಸ್ಫೋ
ಟದಲ್ಲಿ ಕೈವಾಡವಿರಲಿಲ್ಲವಂತೆ: “ಪ್ರಕರಣದ ತನಿಖೆ ವೇಳೆ ದಾವೂದ್‌ನ ಕಾನೂನು ಸಲಹೆಗಾರ ಮನೀಶ್ ಲಾಲ ಎಂಬಾತ ಒಂದು ದಿನ ನನ್ನನ್ನು ಭೇಟಿ ಮಾಡಿದ್ದ. “ಭಯ್ನಾ ನಿಮ್ಮ ಬಳಿ ದಾವೂದ್ ಮಾತನಾಡಬೇಕಂತೆ’ ಎಂದು ಫೋನ್ ಮಾಡಿಕೊಟ್ಟ. ಮೊದಲ ಬಾರಿಗೆ ನಾನು ದಾವೂದ್ ಜತೆ ಮಾತನಾಡಿದ್ದೆ. ಆ ಕಡೆಯಿಂದ ಮಾತನಾಡಿದ ದಾವೂದ್ “ನಾನು ಹಲವು ಅಧಿಕಾರಿಗಳೊಂದಿಗೆ ಮಾತನಾಡಲು ಯತ್ನಿಸುತ್ತಿದ್ದೇನೆ.
ಯಾರೊಬ್ಬರೂ ಮಾತನಾಡಲು ತಯಾರಿಲ್ಲ. ನನ್ನ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿವೆ. ಭಾರತದಲ್ಲಿ ನನ್ನ ಸಹಚರರಿದ್ದಾರೆ. ಮುಂಬೈ ಬ್ಲಾಸ್ಟ್‌ನಲ್ಲಿ ನನ್ನ ಪಾತ್ರ ಇಲ್ಲ. ನನ್ನ ತಾಯಿ ಮತ್ತು ಸಹೋದರಿಯನ್ನು ಅಲ್ಲೇ ಬಿಟ್ಟಿದ್ದೇನೆ. ನಾನು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿಲ್ಲ,’ ಎಂದು ಹೇಳಿದ್ದ,” ಎಂದು ದಾವೂದ್ ಜತೆಗಿನ ಸಂಭಾಷಣೆಯನ್ನು ಹಂಚಿಕೊಂಡರು.
“ದಾವೂದ್ ಸ್ವತಃ ತಾನೇ ಭಾರತಕ್ಕೆ ಬರುತ್ತೇನೆ ಎಂದರೂ ಪಾಕಿಸ್ತಾನ ಮತ್ತು ಐಎಸ್‌ಐ ಆತನನ್ನು ಬಿಡುವುದಿಲ್ಲ. ದಾವೂದ್ ತನ್ನ ಬಳಿ ಇಲ್ಲ ಎಂದು ಈಗಾಗಲೇ ಪಾಕಿಸ್ತಾನ ಹಲವಾರು ಬಾರಿ ಹೇಳಿದೆ. ಎಲ್ಲ ಹಂತದ ಪೊಲೀಸ್ ಅಧಿಕಾರಿಗಳು ಶ್ರಮ ಪಟ್ಟರೆ ದಾವೂದ್‌ನನ್ನು ಭಾರತಕ್ಕೆ ಕರೆತರುವುದು ಕಷ್ಟವೇನಲ್ಲ’ ಎಂದು ನೀರಜ್ ತಿಳಿಸಿದರು. ಲೇಖಕ ಡಿ.ವಿ.ಗುರುಪ್ರಸಾದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಸೇರಿದಂತೆ ಹಲವು ಹಿರಿಯ ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.