ಹುಬ್ಬಳ್ಳಿ: ‘ಅನುಕಂಪ ಕೈ ಹಿಡಿದು ನಮ್ಮನ್ನು ಗೆಲ್ಲಿಸಲಿದೆ ಎಂಬ ಉದಾಸೀನ ಬೇಡ. ರಾಜಕೀಯ ವಿರೋಧಿಗಳಿಗೆ ಯಾವುದೇ ಹಂತದಲ್ಲೂ ಸಣ್ಣ ಅವಕಾಶ ನೀಡದೆ ಗೆಲುವು ನಮ್ಮದಾಗಿಸಿಕೊಳ್ಳಲೇಬೇಕು. ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಸಂಘಟಿತ ಶ್ರಮ-ಶಕ್ತಿ ತೋರಿ’
– ಹೀಗೆಂದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರು, ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಪ್ರಮುಖ ಕಾರ್ಯಕರ್ತರಿಗೆ ಕಿವಿಮಾತು ಹಾಗೂ ಖಡಕ್ ಸಂದೇಶ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ನಾಮಪತ್ರ ಸಲ್ಲಿಕೆ ನಂತರ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರ ಸಭೆ ನಡೆಸಿದ ಇಬ್ಬರು ನಾಯಕರು ಶಿಸ್ತಿನ ಪಾಠ ಮಾಡಿದ್ದಾರೆ. ಸಿ.ಎಸ್.ಶಿವಳ್ಳಿ ಅವರ ಅಕಾಲಿಕ ನಿಧನದಿಂದ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದೆ. ಪಕ್ಷ ಶಿವಳ್ಳಿ ಅವರ ಪತ್ನಿಗೆ ಟಿಕೆಟ್ ನೀಡಿದ್ದರಿಂದ ಸಹಜವಾಗಿಯೇ ಅನುಕಂಪದ ಅಲೆ ಪಕ್ಷದ ಅಭ್ಯರ್ಥಿ ಗೆಲುವಿಗೆ ನೆರವಾಗಲಿದೆ. ಏನಿದ್ದರೂ ಗೆಲುವಿನ ಸಂಭ್ರಮಾಚರಣೆ ಎಂಬ ಅತಿಯಾದ ಆತ್ಮವಿಶ್ವಾಸ ಬೇಡ. ಕೊನೆ ಕ್ಷಣದವರೆಗೂ ರಾಜಕೀಯ ವಿರೋಧಿಗಳಿಗೆ ಯಾವುದೇ ಅವಕಾಶ ನೀಡದೆ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಬಂಡಾಯ ಶಮನ?: ಕಾಂಗ್ರೆಸ್‌ನಿಂದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಲ್ಲಿ ಕೆಲವರು ಬಂಡಾಯದ ಸೂಚನೆ ನೀಡಿದ್ದರಾದರೂ ಶಮನ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಬಹುತೇಕ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡರಾದ ಶಿವಾನಂದ ಬೆಂತೂರ, ವಿಶ್ವನಾಥ ಕೂಬಿಹಾಳ, ಜಿ.ಡಿ.ಘೋರ್ಪಡೆ, ಜಗನ್ನಾಥ ಸಿದ್ದನಗೌಡ್ರ, ಚಂದ್ರಶೇಖರ ಜುಟ್ಟಲ, ಸುರೇಶ ಸವಣೂರು, ಎಚ್.ಎನ್.ನದಾಫ್, ಎಸ್.ಟಿ.ಹಿರೇಗೌಡ್ರ ಅವರು ಕುಸುಮಾತಿ ಅವರಿಗೆ ಪಕ್ಷ ಟಿಕೆಟ್ ನೀಡಿದ್ದರ ಬಗ್ಗೆ ಪ್ರತ್ಯೇಕ್ಷ-ಪರೋಕ್ಷವಾಗಿ ಆಕ್ಷೇಪ ತೋರಿದ್ದರು. ಸಮಾನ ಮನಸ್ಕರ ಗುಂಪು ಮಾಡಿಕೊಂಡು ನಮ್ಮಲ್ಲಿ ಒಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿಯುತ್ತೇವೆ ಎಂದು ಘೋಷಿಸಿದ್ದರು. ಕಾಂಗ್ರೆಸ್ ನಾಯಕರು ಅಸಮಾಧಾನ ಸರಿಪಡಿಸಿದ್ದಾರೆ.
ಕುಂದಗೋಳ ಕ್ಷೇತ್ರದಲ್ಲಿ ಗೆಲುವಿಗಾಗಿ ಕಾಂಗ್ರೆಸ್, ಕ್ಷೇತ್ರ ವ್ಯಾಪ್ತಿಯ ಆರು ಜಿಪಂ ಕ್ಷೇತ್ರಗಳಿಗೆ ಒಬ್ಬರು ಸಚಿವರ ನೇತೃತ್ವದಲ್ಲಿ ಸಮಿತಿ ರಚಿಸಲಿದೆ. ಜಿಪಂ ವ್ಯಾಪ್ತಿಯಲ್ಲಿ ಯಾವ ಸಮಾಜಗಳು ಪ್ರಬಲವಾಗಿವೆ ಎಂಬುದನ್ನು ಪರಿಗಣಿಸಿ ಆಯಾ ಸಮಾಜದ ಸಚಿವರು, ಮಾಜಿ ಸಚಿವರ ತಂಡಕ್ಕೆ ಕ್ಷೇತ್ರದ ಉಸ್ತುವಾರಿ ನೀಡಲಾಗುತ್ತದೆ. ಅದೇ ರೀತಿ ಗ್ರಾಮ ಪಂಚಾಯತಗೆ ಒಬ್ಬರು ಶಾಸಕರು ಹಾಗೂ ಮಾಜಿ ಶಾಸಕರ ನೇತೃತ್ವದ ತಂಡ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಪ್ರತಿ ಹತ್ತು ಮನೆಗೆ ಒಬ್ಬರ ಕಾರ್ಯಕರ್ತನನ್ನು ನೇಮಿಸಿ, ಚುನಾವಣೆ ಮುಗಿಯವವರೆಗೂ ಆ ಮನೆಗಳೊಂದಿಗೆ ಸಂಪರ್ಕ ಹೊಂದಬೇಕು, ಪಕ್ಷದ ಪರ ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮೇ 3ರ ನಂತರ ಇನ್ನಷ್ಟು ಚುರುಕು: ಮೇ 3ರಂದು ಕಾಂಗ್ರೆಸ್ ಪಕ್ಷ ಸಂಶಿಯಲ್ಲಿ ಬಹಿರಂಗ ಸಭೆ ಹಮ್ಮಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದು, ನಂತರ ಚುನಾವಣೆ ಕಾರ್ಯತಂತ್ರವನ್ನು ಇನ್ನಷ್ಟು ಚುರುಕುಗೊಳಿಸಲು ಪಕ್ಷ ಯೋಜಿಸಿದೆ ಎಂದು ಹೇಳಲಾಗುತ್ತಿದೆ.
ದಿನೇಶ-ಸಿದ್ದು -ಡಿಕೆಶಿ ಠಿಕಾಣಿ ಹೂಡ್ತಾರಂತೆ..
ಕುಂದಗೋಳ ಉಪ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಲೇಬೇಕೆಂದು ಘಟಾನುಘಟಿ ನಾಯಕರು ಕ್ಷೇತ್ರಕ್ಕೆ ಲಗ್ಗೆ ಇರಿಸಲು ಮುಂದಾಗಿದ್ದಾರೆ. ಮೇ 3ರಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 14ರಿಂದ 17ರವರೆಗೆ ಕ್ಷೇತ್ರದಲ್ಲೇ ಠಿಕಾಣಿ ಹೂಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ಮೇ 3ರಿಂದ ಸಚಿವ ಡಿ.ಕೆ.ಶಿವಕುಮಾರ ಅವರು ರಂಗ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ.
•ಅಮರೇಗೌಡ ಗೋನವಾರ