ಚಿಂತಾಮಣಿ: ಜನರಿಗಾಗಿ ಕೆಲಸ ಮಾಡುವ ನಾವುಗಳು ಎಲ್ಲರೊಂದಿರೂ ಬೆರೆತು ಕೆಲಸ ಮಾಡಬೇಕು. ವ್ಯಕ್ತಿ ಪ್ರತಿಷ್ಠೆಯನ್ನು ತೋರಿದರೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಾಯತಿ ಇಒ ಶ್ರೀನಿವಾಸನ್ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಕವಿತಾ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಂಘಜೀವಿಗಳಾಗಿ ಬದುಕುತ್ತಿರುವ ನಾವುಗಳು ನಮ್ಮ ಕೆಲಸಗಳನ್ನು ಅದೇ ದಾಟಿಯಲ್ಲಿ ಮಾಡಬೇಕು. ಸರ್ಕಾರದಿಂದ ಸಾಮಾನ್ಯ ಜನರಿಗೆ ಬರುವ ಹಲವು ಕಾರ್ಯಕ್ರಮಗಳನ್ನು ತಪ್ಪದಂತೆ ಗ್ರಾಮೀಣ ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಇಲ್ಲವಾದಲ್ಲಿ ನಮ್ಮ ವೃತ್ತಿಗೆ ಮೋಸ ಮಾಡಿದಂತಾಗುತ್ತದೆ ಎಂದರು.
ಬಯೋಮೆಟ್ರಿಕ್ ಅಳವಡಿಸಿ: ತಾಲೂಕಿನ ಹಲವು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಅವ್ಯವಹಾರ ಹೆಚ್ಚಿದ್ದು, ಕಳಪೆ ಆಹಾರ ಪೂರೈಸುವ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚಿಗೆ ಲೆಕ್ಕ ತೋರಿಸುವ ಮೂಲಕ ಸರ್ಕಾರಿ ಅನುದಾನವನ್ನು ನಿಲಯ ಪಾಲಕರು ಸೇರಿದಂತೆ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆಂಬ ದೂರು ಕೇಳಿ ಬಂದಿದೆ. ಕೂಡಲೇ ವಿದ್ಯಾರ್ಥಿ ನಿಲಯಗಳಿಗೆ ಬಯೋಮೆಟ್ರಿಕ್ ಅಳವಡಿಸಿ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾಬ ನಾಗರಾಜು ಸೂಚಿಸಿದರು.
ರೈತರಿಗೆ ಸಹಕರಿಸಿ: ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅವರು ತೋಟಗಾರಿಕೆ ಇಲಾಖೆಯಿಂದ ಉಳ್ಳವರಿಗೆ ಮಾತ್ರ ಸೌಲಭ್ಯಗಳು ನೀಡುತ್ತಿದ್ದು, ಬಡವರಿಗೆ ಇಲಾಖೆಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದರು. ತಾಲೂಕಿನಲ್ಲಿ ನೀರಿನ ಅಭಾವ ಹೆಚ್ಚಿದ್ದು, ಕಡಿಮೆ ನೀರಾವರಿಗೆ ಹೊಂದಿಕೊಳ್ಳುವಂತಹ ಗೋಡಂಬಿ ಬೆಳೆಯನ್ನು ರೈತರಿಗೆ ಪರಿಚಯಿಸಿ ಆಗ್ನೇಯ ಅರಣ್ಯ ಇಲಾಖೆ ವತಿಯಿಂದ ಉಚಿತ ಗಿಡಗಳನ್ನು ವಿತರಿಸುವ ಮೂಲಕ ತಾಲೂಕಿನ ರೈತರಿಗೆ ಸಹಕರಿಸಿ ಎಂದು ಸೂಚಿಸಿದರು.
ಶಿಕ್ಷಕರನ್ನು ರಾಜಕೀಯ ಬಿಡಕ್ಕೇಳಿ: ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರು ಶಾಲೆಗಳಲ್ಲಿ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ನಗರದ ಟೀ ಸ್ಟಾಲ್‌ಗಳ ಬಳಿ ಜಮಾಯಿಸಿ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿ ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಹೆಚ್ಚಾಗಿದೆ. ಶಿಕ್ಷಕರು ರಾಜಕೀಯ ಕ್ಷೇತ್ರ ಬಿಟ್ಟು ಸಕ್ರಿಯವಾಗಿ ಶಾಲೆಗಳಿಗೆ ತೆರಳಿ ಪಾಠ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಶಿಕ್ಷಣ ಇಲಾಖೆಯ ಇಸಿಒ ರಾಜಣ್ಣ ಅವರಿಗೆ ಸಭೆಯ ಅಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ತಾಕೀತು ಮಾಡಿದರು.
ಸಿಡಿಪಿಒಗೆ ತರಾಟೆ: ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಸರ್ಕಾರದಿಂದ ನೀಡುತ್ತಿರುವ ಪೌಷ್ಠಿಕಾಂಶ ಪದಾರ್ಥಗಳು ಸಮಯಕ್ಕೆ ಸರಿಯಾಗಿ ವಿತರಿಸುತ್ತಿಲ್ಲ ಹಾಗೂ ಮಕ್ಕಳಿಗೆ ಅರ್ಧ ಮೊಟ್ಟೆ ನೀಡುತ್ತಿದ್ದಾರೆ. ಗರ್ಭಿಣಿಯರಿಗೆ ನೀಡುವ ದವಸ, ಧಾನ್ಯಗಳ ತೂಕದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಸಿಡಿಪಿಒ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಡಾಬ ನಾಗರಾಜ್ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ತಾಪಂ ಮಾಜಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್ ಮಾತನಾಡಿ, ಸಿಡಿಪಿಒ ಇಲಾಖೆಯಿಂದ ಬೀದಿ ಬದಿಯ ವ್ಯಾಪಾರಸ್ಥರಿಗೆ ಆರ್ಥಿಕ ನೆರವು ನೀಡುವಂತ ಯೋಜನೆಗಳಿವೆ. ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳುವ ವೇಳೆ ತಾಪಂ ಅಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಉಪಾದ್ಯಕ್ಷರನ್ನು ಪರಿಗಣನೆಗೆ ತೆಗೆದುಕೊಂಡು ಆಯ್ಕೆ ಮಾಡಬೇಕೆಂದು ಹೇಳಿದರು.
ನಿದ್ದೆಗೆ ಜಾರಿದ ಎಇಇ: ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ತಾಪಂ ಅಧ್ಯಕ್ಷೆ ಕವಿತಾ ಅಧ್ಯಕ್ಷೆತಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಮತ್ತು ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಇಲಾಖೆಯ ಎಇಇ ರವೀಂದ್ರ ಕುಮಾರ್ ನಿದ್ರೆಗೆ ಜಾರಿದ್ದರು.