Advertisement

ಸಾಲ ಮನ್ನಾ ಷರತ್ತು ಬಿಡಿ, ಸಂಪೂರ್ಣ ಮನ್ನಾ ಮಾಡಿ

12:38 PM Jun 26, 2017 | |

ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಸಿಂಹಘರ್ಜನೆಗೆ ಹೆದರಿ ರಾಜ್ಯ ಸರ್ಕಾರ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರತಿಪಾದಿಸಿದ್ದಾರೆ. 

Advertisement

ಸತತ ಬರದ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಯಡಿಯೂರಪ್ಪ ಕೈಗೊಂಡಿದ್ದ ಹೋರಾಟ ಹಾಗೂ ಜು. 10 ರಂದು 5 ಲಕ್ಷ ರೈತರೊಂದಿಗೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಗೆ ಮಣಿದ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಸಹಕಾರ ಸಂಘಗಳ ಮೂಲಕ ರೈತರು ಪಡೆದಿರುವ ಸಾಲದ ಮೊತ್ತದಲ್ಲಿ 50 ಸಾವಿರದವರೆಗೆ ಮನ್ನಾ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಸಾಲ ಮನ್ನಾಕ್ಕೆ ವಿಧ ವಿಧವಾದ ಷರತ್ತು ಹಾಕಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಈ ಕೂಡಲೇ ಎಲ್ಲ ಷರತ್ತುಗಳನ್ನು ಹಿಂದಕ್ಕೆ ಪಡೆದು, ಎಲ್ಲ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದರು. 

ರಾಜ್ಯದ್ಯಾಂತ ಪ್ರವಾಸ ಕೈಗೊಂಡಿರುವ ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಜು. 7 ರಿಂದ 9ರವರೆಗೆ ಬೆಂಗಳೂರಿನಲ್ಲಿ ರೈತರ ನಿರಂತರ ಹೋರಾಟ, 10 ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದರ ಫಲವಾಗಿಯೇ ಈ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದರು. 

ರಾಜ್ಯದಲ್ಲಿ ಸತತ ನಾಲ್ಕು ವರ್ಷದಿಂದ ಭೀಕರ ಬರಗಾಲ ಇದೆ. ಬೆಳೆ ಪರಿಹಾರನ್ನೂ ಸರಿಯಾಗಿ ನೀಡದ ಸರ್ಕಾರ ಮುಂದಿನ ಚುನಾವಣೆಯಲ್ಲಿ ಧೂಳೀಪಟವಾಗುವ ಆತಂಕದಿಂದ ಸಾಲ ಮನ್ನಾ ಮಾಡಿದೆ. ಆದರೂ, ವಿಧಿಸಿರುವ ಷರತ್ತುಗಳಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಒಂದು ಕಡೆಯ ಸಾಲ ಮಾತ್ರ ಮನ್ನಾ ಮಾಡುವುದು ಯಾವ ನ್ಯಾಯ ಎಂಬುದೇ ಅರ್ಥವಾಗುತ್ತಿಲ್ಲ. 

Advertisement

ರಾಜ್ಯ ಸರ್ಕಾರ ಸಾಲ ಮನ್ನಾ ವಿಷಯದಲ್ಲಿ ಅನುಸರಿಸುತ್ತಿರುವ ದ್ವಿಮುಖ ನೀತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಹೈನುಗಾರಿಕೆಯ ಸಾಲ ಮನ್ನಾಕ್ಕೆ ಸರ್ಕಾರ ಮುಂದಾಗಿಲ್ಲ. ಹೈನುಗಾರಿಕೆ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು.

ರಾಜ್ಯ ಸರ್ಕಾರ ಸಾಲ ಮನ್ನಾಕ್ಕೆ ಹಾಕಿರುವ ಷರತ್ತು ರದ್ದುಪಡಿಸಿ, ಸಂಪೂರ್ಣ ಸಾಲ ಮನ್ನಾ ಮಾಡದೇ ಹೋದಲ್ಲಿ ಬಿಜೆಪಿಯಿಂದ ರಾಜ್ಯದ್ಯಾಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು. ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ, ಜಗದೀಶ್‌ ಶೆಟ್ಟರ್‌ ಅಧಿಕಾರವಧಿಯಲ್ಲಿ 25 ಸಾವಿರ ರೂ., ಸಾಲ ಮನ್ನಾ ಮಾಡಲಾಗಿತ್ತು.

ಆಗಿನ 25 ಸಾವಿರವನ್ನು ಈಗ ಲೆಕ್ಕಕ್ಕೆ ತೆಗೆದುಕೊಂಡರೆ 1 ಲಕ್ಷ ರೂಪಾಯಿಗೆ ಸಮವಾಗುತ್ತದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕಾಂಗ್ರೆಸ್‌ ಸರ್ಕಾರವೇ ಇರುವ ಪಂಜಾಬ್‌ನಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿರುವಂತೆ ಕರ್ನಾಟಕ ಸರ್ಕಾರವೂ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿಯವರು ರಾಷ್ಟ್ರೀಕೃತ ಬ್ಯಾಂಕ್‌ ಗಳ ಶೇ. 4 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವ ಹಾಗೂ ಸಮರ್ಪಕವಾಗಿ ರಸಗೊಬ್ಬರ ಪೂರೈಕೆಯ ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ ಎಂದ ಅವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವ ಬಗ್ಗೆ ದೊಡ್ಡವರು ಮಾತನಾಡುತ್ತಾರೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್‌, ಯಕ್ಕನಹಳ್ಳಿ ಜಗದೀಶ್‌, ನರಸಗೊಂಡನಹಳ್ಳಿ ರಘು, ಅರಕೆರೆ ನಾಗರಾಜ್‌, ಕೂಲಂಬಿ ಬಸವರಾಜ್‌, ಯಕ್ಕನಹಳ್ಳಿ ಗಣೇಶಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next