ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಇದೇ ಮಾದರಿಯಲ್ಲಿ ಕಾಮಗಾರಿ ನಡೆದರೆ 7-8 ವರ್ಷಗಳಾದರೂ ಜಿಲ್ಲೆಗೆ ನೀರು ನೀಡಲು ಸಾಧ್ಯವಿಲ್ಲ ಎಂದು ರೈತಸಂಘದ ಮುಖಂಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಸಜ್ಜನಕೆರೆ ಗ್ರಾಮದ ಕೆರೆಕೋಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಗ್ರಾಮಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗ್ಗದ ಪ್ರಚಾರಗಳನ್ನು ನಿಲ್ಲಿಸಿ ನೀರಾವರಿಗೆ ಆದ್ಯತೆ ನೀಡಬೇಕು. ಜಿಲ್ಲೆಯ ರೈತರು ಅಡಿಕೆ, ತೆಂಗು ಬೆಳೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಕೃಷಿ ಉತ್ಪನ್ನ ಬಳಕೆ ಮಾಡುವಂತೆ ಎಲ್ಲರಿಗೂ ಹೆಚ್ಚಿನ ತೆರಿಗೆ ವಿಧಿಸಿ ನೊಂದ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರೈತರು ಅಸಂಘಟಿತರಾಗಿರುವುದರಿಂದ ಬೇರೆ ವರ್ಗದ ಜನರು ರೈತರ ಮೇಲೆ ಸವಾರಿ ಮಾಡುತ್ತಿದ್ದಾರೆ. ಪ್ರಕೃತಿ ಕಳೆದ ಐದಾರು ವರ್ಷಗಳಿಂದ ರೈತರ ಮೇಲೆ ಮುನಿಸಿಕೊಂಡಿದೆ. ಬೆಳೆ ಇಲ್ಲದೆ ರೈತರು ಸಾಲ ಮರುಪಾವತಿ ಮಾಡಲಾಗದೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ರಿಜರ್ವ್ ಬ್ಯಾಂಕಿನ ನಿಯಮಾವಳಿಯ ಪ್ರಕಾರ ಮುಂಗಾರು ಮತ್ತು ಹಿಂಗಾರು ಕೈಕೊಟ್ಟ ಸಂದರ್ಭದಲ್ಲಿ ಬ್ಯಾಂಕ್ ಗಳು ಆ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಮಾರ್ಪಡಿಸಿ ರೈತರಿಗೆ ಬೆಳೆ ಬೆಳೆಯಲು ಹಾಗೂ ಬದುಕನ್ನು ರೂಪಿಸಿಕೊಳ್ಳಲು ಹೊಸ ಸಾಲ ನೀಡಬೇಕು. ಆದರೆ ಯಾವ ಬ್ಯಾಂಕುಗಳೂ ಅದನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರು ಸಾಲ ಮನ್ನಾ ಮಾಡಿ ಎಂದು ಕೇಳುವುದಿಲ್ಲ. ಬದಲಾಗಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಕೊಟ್ಟರೆ ಸರ್ಕಾರಕ್ಕೆ ನಾವೇ ಸಾಲ ಕೊಡುತ್ತೇವೆ ಎಂದ ಪುಟ್ಟಣ್ಣಯ್ಯ, ರಾಜ್ಯ ಸರ್ಕಾರ ಸಹಕಾರ ಸಂಘದ ಬ್ಯಾಂಕ್‌ಗಳಲ್ಲಿ 50 ಸಾವಿರ ರೂ. ಸಾಲ ಮನ್ನಾ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಅದೇ ರೀತಿ ಕೇಂದ್ರ ಸರ್ಕಾರ ರೈತರ ವಾಣಿಜ್ಯ ಬ್ಯಾಂಕ್ ಗಳಲ್ಲಿ ಇರಬಹುದಾದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ಎಂ.ಬಿ.ತಿಪ್ಪೇಸ್ವಾಮಿ, ಸಿ.ಆರ್. ತಿಮ್ಮಣ್ಣ, ಧನಂಜಯ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಆರ್ .ಸಿ. ಮಂಜಪ್ಪ, ಪ್ರವೀಣ್‌ಕುಮಾರ್, ಸಜ್ಜನಕೆರೆ ರೇವಣ್ಣ, ನಾಗರಾಜ, ಪಲ್ಲವಗೆರೆ ತಿಪ್ಪೇಸ್ವಾಮಿ, ಜೆ.ಎನ್. ಕೋಟೆ ಶಿರಗಿ ನಿಂಗಪ್ಪ, ಓಂಕಾರಪ್ಪ, ಲೋಕೇಶ್, ಸೋಮಗುದ್ದು ಸುರೇಶ್, ದೊಡ್ಡಬಸಪ್ಪ ಮತ್ತಿತರರು ಇದ್ದರು. ಸಜ್ಜನಕೆರೆ ತೋಟದ ಬಸಣ್ಣ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಗಳಿಗಿಲ್ಲ ಅನ್ನದಾತರ ಮೇಲೆ ಕಾಳಜಿ
ಉದ್ದಿಮೆದಾರರಿಗೆ ತೆರಿಗೆಯಲ್ಲಿ ವಿದ್ಯುತ್ ಶುಲ್ಕ, ನೀರು ನೀಡುವಲ್ಲಿ ಬೇಕಾದಷ್ಟು ರಿಯಾಯತಿ ನೀಡಲಾಗುತ್ತಿದೆ. ಆದರೆ ರೈತರ ಪ್ರಶ್ನೆ ಬಂದಾಗ ರಿಜರ್ವ್ ಬ್ಯಾಂಕ್ ಹಾಗೂ ಇತರೆ ಸರ್ಕಾರದ ಮುಖವಾಣಿಗಳು ಆರ್ಥಿಕ ಶಿಸ್ತು ಎನ್ನುವ ಸಬೂಬು ಮುಂದಿಡುತ್ತಿವೆ. ಒಂದು ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರ 2.4 ಲಕ್ಷ ಕೋಟಿ ರೂ.ಗಳ ಉದ್ದಿಮೆದಾರರ ಸಾಲವನ್ನು ಮನ್ನಾ ಮಾಡಿದೆ. ಆದರೆ ರೈತರ ಪ್ರಶ್ನೆಗೆ ಆರ್ಥಿಕ ಶಿಸ್ತು ಎಂದು ಸಬೂಬು ಹೇಳುತ್ತಾರೆಂದು ಕಿಡಿ ಕಾರಿದರು.