Advertisement

ಕಲಿಕಾ ಚೇತರಿಕೆ ವರ್ಷ-ಕಲಿಕೆಗೆ ಹೊಸ ಸ್ಪರ್ಶ

01:12 AM May 16, 2022 | Team Udayavani |

ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಬರಲಾಗಿದೆ. ಕೋವಿಡ್‌ನ‌ ಅನಂತರ ಸರಕಾರಿ ಶಾಲೆಗಳ ಕಲಿಕಾ ವಿಧಾನದಲ್ಲಿ ಅನೇಕ ಬದಲಾವಣೆಗಳು ನಡೆದಿವೆ.ಕಲಿಕಾ ಚೇತರಿಕೆ ಉಪಕ್ರಮದ ಮೂಲಕ ಕಲಿಕಾಫ‌ಲಗಳನ್ನು ಪರಿಪೂರ್ಣವಾಗಿ ಕಲಿತು ಮುಂದಿನ ಶೈಕ್ಷಣಿಕ ಆರಂಭದ ವೇಳೆಗೆ ಪ್ರತೀ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆ ತಡೆ ಇಲ್ಲದೆ ಸಾಧಿಸಲು ಸಜ್ಜುಗೊಳಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.

Advertisement

ಕೋವಿಡ್‌ ಪರಿಣಾಮದಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಶಾಲೆಯಲ್ಲಿ ಮಗುವಿನ ಕಲಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎನ್ನುವುದು ಅಕ್ಷರಶಃ ಸತ್ಯ. ಎರಡು ವರ್ಷಗಳಲ್ಲಿ ಮಗು ಕಲಿಯಬೇಕಾದ ವಿಷಯ ವಸ್ತುವನ್ನು ಕಲಿತಿಲ್ಲ ಎಂದರೆ ಅದು ಶಿಕ್ಷಣ ಪದ್ಧತಿಗೆ ಮಾರಕವಾಗುವುದರೊಂದಿಗೆ ಒಂದು ಜನಾಂಗದ ಅಧಃಪತ‌ನಕ್ಕೂ ಕಾರಣವಾಗಬಹುದು. ಆದ್ದರಿಂದ ಕೋವಿಡ್‌ ಸಮಯದಲ್ಲಿ ಉಂಟಾದ ಕಲಿಕಾ ನಷ್ಟವನ್ನು ಸರಿದೂಗಿಸುವ ಹೊಣೆ ಶಿಕ್ಷಣ ವ್ಯವಸ್ಥೆಯ ಮೇಲಿದೆ. ಕೋವಿಡ್‌ನಿಂದ ಮುಖ್ಯವಾಗಿ ಸರಕಾರಿ ಶಾಲೆಗಳ ಮಕ್ಕಳ ಕಲಿಕೆಯ ಮೇಲೆ ಹೆಚ್ಚಿನ ಹೊಡೆತ ಬಿದ್ದಿರುವುದನ್ನು ನಾವು ನೋಡಿದ್ದೇವೆ.

ಸರಕಾರಿ ಶಾಲೆಗಳಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿ ಕಲಿಕೆಯನ್ನು ನಡೆಸಲು ಅಸಾಧ್ಯವಾಗದಿದ್ದ ಸಂದರ್ಭದಲ್ಲೂ ವಿದ್ಯಾಗಮ, ವಠಾರ ಶಾಲೆ, ಇ-ಸಂವೇದ ವೀಡಿಯೋ ಪಾಠಗಳು, ಚಂದನ ಚಾನೆಲ್‌ ಮೂಲಕ ಟಿ.ವಿ ಪಾಠಗಳು, ಮಕ್ಕಳ ವಾಣಿ ಮೂಲಕ ವೀಡಿಯೋ ಪಾಠಗಳು… ಹೀಗೆ ಹಲವು ಪ್ರಯತ್ನಗಳನ್ನು ಉಚಿತವಾಗಿ ನಡೆಸಿರುವುದು ನಮ್ಮ ಸರಕಾರಿ ಶಾಲೆಯ ಹೆಮ್ಮೆಯನ್ನು ಉತ್ತುಂಗಕ್ಕೆ ಎರಿಸಿದೆ ಎಂದರೂ ಅತಿಶೋಕ್ತಿಯಲ್ಲ. ಇದರ ಫ‌ಲವಾಗಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಆದರೆ ಸರಕಾರಿ ಶಾಲೆಗಳಿಗೆ ತೀರಾ ಹಿಂದುಳಿದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚಿರುವುದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಈ ಕಲಿಕಾ ಪ್ರಯತ್ನಗಳು ತಲುಪಿಲ್ಲ ಎನ್ನುವ ಬೇಸರ ಎಲ್ಲರಿಗೂ ಇದೆ. ಆದರೆ ಇಂದು ಮಕ್ಕಳು ಭೌತಿಕ ತರಗತಿಗಳಲ್ಲಿ ಕಲಿಕೆಯನ್ನು ಪಡೆಯಲು ಮುಕ್ತರಾಗಿದ್ದಾರೆ. ಆದರೆ ಹಿಂದಿನ ವರ್ಷದಲ್ಲಿ ಮಕ್ಕಳಲ್ಲಿ ಆಗಾಬೇಕಾದ ಕಲಿಕೆ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ ಎಂಬ ವಿಚಾರವನ್ನು ಶಿಕ್ಷಣ ಇಲಾಖೆ ಕಂಡುಕೊಂಡಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಕೋವಿಡ್‌ನಿಂದಾಗಿ ಶಾಲೆಗಳ ವ್ಯವಸ್ಥಿತ ಬೋಧನಾ ಕಲಿಕಾ ಪ್ರಕ್ರಿಯೆಗಳ ಹಿನ್ನಡೆಯಿಂದಾಗಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಿ, ವಿದ್ಯಾರ್ಥಿಗಳಲ್ಲಿ ಮೂಲ ಕಲಿಕಾ ಸಾಮರ್ಥ್ಯಗಳನ್ನು ಪಕ್ವಗೊಳಿಸಲು 1-9ನೇ ತರಗತಿಗಳ ವರೆಗಿನ ಮಕ್ಕಳ ಕಲಿಕೆಗೆ ಚೇತರಿಕೆ ನೀಡಲು ಕಲಿಕಾ ಚೇತರಿಕೆ ಎಂಬ ಹೊಸ ಉಪಕ್ರಮವನ್ನು ಜಾರಿಗೊಳಿಸಿ, 2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಿಸಲಾಗಿದೆ. ಈ ಉಪಕ್ರಮದಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ, ಈ ಹಿಂದಿನ ಎರಡು ವರ್ಷಗಳ ಎರಡು ತರಗತಿಗಳಲ್ಲಿ ಮಕ್ಕಳು ಅತ್ಯಗತ್ಯವಾಗಿ ಗಳಿಸಬೇಕಿದ್ದ ಕಲಿಕಾ ಫ‌ಲಗಳು ಮತ್ತು ಪ್ರಸಕ್ತ ತರಗತಿಯ ಕಲಿಕಾ ಫ‌ಲಗಳನ್ನು ಪ್ರತೀ ವಿದ್ಯಾರ್ಥಿಗಳು ಸಾಧಿಸಲು ಈ ಒಂದು ಶೈಕ್ಷಣಿಕ ವರ್ಷವನ್ನು ಪೂರ್ಣವಾಗಿ ಮೀಸಲಿಡಲಾಗಿದೆ.

ಈ ಉಪಕ್ರಮವನ್ನು ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಮ್‌ಜೀ ಫೌಂಡೇಶನ್‌ನ ಸಹಯೋಗದಲ್ಲಿ ನಿರ್ವಹಿಸಲಾಗಿದೆ. ರಾಜ್ಯದ ಸರಕಾರಿ ಶಾಲೆಯಲ್ಲಿನ ಹಲವು ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ, ವಿವಿಧ ಡಯಟ್‌ಗಳಿಗೆ ಬೇರೆ ಬೇರೆ ವಿಷಯಗಳನ್ನು ಹಂಚಿ ಮಕ್ಕಳ ಮನಃಸ್ಥಿತಿಗೆ ಸರಿಹೊಂದುವಂತೆ ಮತ್ತು ಮಕ್ಕಳಿಗೆ ಕಲಿಕಾ ಫ‌ಲಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಹಾಗೂ ಎಲ್ಲ ಸ್ತರದ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವ ಕಲಿಕಾ ಹಾಳೆಗಳನ್ನು ರಚಿಸಿ ಚಟುವಟಿಕೆ ಆಧಾರಿತ ಅಭ್ಯಾಸ ಹಾಳೆಗಳನ್ನು ಸಂಪನ್ಮೂಲ ತಂಡವು ರಚಿಸಿದೆ. ಇದರ ಜತೆ ಕಲಿಕಾ ಹಾಳೆಗಳನ್ನು ಹೇಗೆ ತರಗತಿಗಳಲ್ಲಿ ಬಳಸಬೇಕು ಎಂಬುದರ ಬಗ್ಗೆ ವಿಸ್ತೃತವಾದ ಶಿಕ್ಷಕರ ಕೈಪಿಡಿಯನ್ನು ಪ್ರತೀ ಶಿಕ್ಷಕರಿಗೆ ನೀಡಲಾಗುತ್ತದೆ. ಒಂದು ವರ್ಷಕ್ಕೆ ಬೇಕಾಗುವಷ್ಟು ಕಲಿಕಾ ಹಾಳೆಗಳ ಪುಸ್ತಕವನ್ನು ಪ್ರತೀ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳು ಗಳಿಸುವ ಸಾಮರ್ಥ್ಯಗಳ ಮೇಲೆ ಮಕ್ಕಳ ಮೌಲ್ಯಮಾಪನ ಮಾಡಲಾಗುತ್ತದೆ.

Advertisement

ಇನ್ನೂ ಮುಂದುವರಿದು ರಾಜ್ಯ ಹಂತದಲ್ಲಿ ವಿಷಯವಾರು ಶಿಕ್ಷಕರಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ, ಜಿಲ್ಲಾ ಹಂತದಲ್ಲಿ ವಿಷಯವಾರು ಶಿಕ್ಷಕರಿಗೆ ತರಬೇತಿ, ತಾಲೂಕು ಮತ್ತು ಕ್ಲಸ್ಟರ್‌ ಹಂತದಲ್ಲಿಯು ತರಬೇತಿಗಳನ್ನು ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ರಜಾವಧಿಯಲ್ಲಿಯೇ ನೀಡಲಾಗಿದೆ. ಇದರಿಂದ ತರಬೇತಿಯ ನೆಪದಲ್ಲಿ ಶೈಕ್ಷಣಿಕ ವರ್ಷದ ಮಧ್ಯ ಮಕ್ಕಳ ಕಲಿಕೆಯ ಅಪವ್ಯಯವಾಗುವುದನ್ನು ಸಂಪೂರ್ಣವಾಗಿ ತಪ್ಪಿಸಿದಂತಾಗಿದೆ. ಒಟ್ಟಾರೆಯಾಗಿ 2022-23 ಶೈಕ್ಷಣಿಕ ವರ್ಷವನ್ನು ಮಕ್ಕಳ ಕಲಿಕೆಗೆ ಮಾತ್ರ ಸೀಮಿತವಾಗಿಸಿ, ಮಕ್ಕಳಲ್ಲಿ ಮೂಲ ಸಾಮರ್ಥ್ಯಗಳನ್ನು ಗಟ್ಟಿಗೊಳಿಸುವ ಕಡೆ ಹೆಚ್ಚು ಒತ್ತು ನೀಡಲಾಗಿದೆ. ಈ ಉಪಕ್ರಮದಲ್ಲಿ ಪಠ್ಯಪುಸ್ತಕಗಳನ್ನು ನೇರವಾಗಿ ಬೋಧನೆಗೆ ಬಳಸದೆ ಅಗತ್ಯಾನುಸಾರವಾಗಿ ಕಲಿಕಾ ಹಾಳೆಗಳಿಗೆ ಪೂರಕವಾಗಿ ಬಳಸಲು ಪ್ರೇರೇಪಿಸಲಾಗಿದೆ.

ಪ್ರಸಕ್ತದ ಶೈಕ್ಷಣಿಕ ವರ್ಷ ಪ್ರಾರಂಭದ 15 ದಿನಗಳ ಕಾಲ ಮಕ್ಕಳ ಪೂರ್ವ ಜ್ಞಾನ ಮತ್ತು ಕಲಿಕಾ ಮಟ್ಟವನ್ನು ಅಂದಾಜಿಸಲು ಪ್ರತೀ ವಿಷಯದಲ್ಲೂ ನೈದಾನಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು ಮಕ್ಕಳ ಪೂರ್ವ ಕಲಿಕಾ ಜ್ಞಾನವನ್ನು ತಿಳಿಯಲು ಇರುವ ಸಾಧನವಾಗಿದೆ. ಇದು ಮಕ್ಕಳ ಕಲಿಕಾ ಅಗತ್ಯಗಳನ್ನು ತಿಳಿದುಕೊಳ್ಳುವುದರ ಜತೆಗೆ ಅದನ್ನು ಪೂರೈಸಲು ಯಾವ ರೀತಿ ಯೋಜನೆಗಳನ್ನು ಶಿಕ್ಷಕರು ಹಾಕಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಶಿಕ್ಷಣ ಇಲಾಖೆ ಮಕ್ಕಳ ಕಲಿಕೆಯನ್ನು ಅರ್ಥಪೂರ್ಣಗೊಳಿಸಲು ಕಲಿಕಾ ಚೇತರಿಕೆ ಉಪಕ್ರಮವನ್ನು ಮನೋವೈಜ್ಞಾನಿಕ ಹಾಗೂ ಶಿಕ್ಷಣ ಶಾಸ್ತ್ರೀಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಪರಿಪೂರ್ಣವಾಗಿ ಆಯೋಜಿಸಿದೆ ಎಂದು ಹೆಮ್ಮೆಯಿಂದ ಹೇಳಬಹುದು. ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಉಪಕ್ರಮವು ಒಂದು ದೊಡ್ಡ ಮೈಲಿಗಲ್ಲಾಗಿದೆ.

ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಬರಲಾಗಿದೆ. ಕೋವಿಡ್‌ನ‌ ಅನಂತರ ಸರಕಾರಿ ಶಾಲೆಗಳ ಕಲಿಕಾ ವಿಧಾನದಲ್ಲಿ ಅನೇಕ ಬದಲಾವಣೆಗಳು ನಡೆದಿವೆ. ಕಲಿಕಾ ಚೇತರಿಕೆ ಉಪಕ್ರಮದ ಮೂಲಕ ಕಲಿಕಾಫ‌ಲಗಳನ್ನು ಪರಿಪೂರ್ಣವಾಗಿ ಕಲಿತು ಮುಂದಿನ ಶೈಕ್ಷಣಿಕ ಆರಂಭದ ವೇಳೆಗೆ ಪ್ರತೀ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆ ತಡೆ ಇಲ್ಲದೆ ಸಾಧಿಸಲು ಸಜ್ಜುಗೊಳಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.

ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ವಿಚಾರದಲ್ಲಿ ಹೊಸ ಹೊಸ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ಆದರೆ ಕಲಿಕಾ ಚೇತರಿಕೆ ಒಂದು ಉಪಕ್ರಮವಾಗಿರುವುದರಿಂದ ಇದರ ವ್ಯಾಪ್ತಿ ವಿಸ್ತಾರವಾಗಿದೆ. ಇದರ ಮೂಲಕ ಮಕ್ಕಳ ಸಾಮರ್ಥ್ಯವನ್ನು ಗಟ್ಟಿಯಾಗಿಸಿ, ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶಗಳನ್ನು ಈಡೇರಿಸಲು ನಾವೆಲ್ಲರೂ ನಮ್ಮ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಕಲಿಕಾ ಚೇತರಿಕೆಯ ಮೂಲಕ ಹೊಸ ಶೈಕ್ಷಣಿಕ ಸ್ಪರ್ಶವನ್ನು ನೀಡುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂಬುದನ್ನು ನಾವು ಮರೆಯಬಾರದು.

-ದಿಲೀಪ್‌ ಕುಮಾರ್‌ ಸಂಪಡ್ಕ

 

Advertisement

Udayavani is now on Telegram. Click here to join our channel and stay updated with the latest news.

Next