Advertisement

ಗಣ್ಯರ ಬಗ್ಗೆ ಆನ್‌ಲೈನ್‌ ಕಲಿಕೆ

12:51 PM Oct 07, 2018 | |

ಬೆಂಗಳೂರು: ಕಾಲೇಜುಗಳಲ್ಲೇ ಅಧ್ಯಯನ ಕೇಂದ್ರ ತೆರೆದು ಆನ್‌ಲೈನ್‌ ಮೂಲಕ ಡಿಪ್ಲೊಮಾ ಕೋರ್ಸ್‌ ಆರಂಭಿಸಲು ಬೆಂಗಳೂರು ವಿಶ್ವವಿದ್ಯಾಲಯದ ನಿರ್ಧರಿಸಿದೆ. ಬುದ್ಧ, ಸ್ವಾಮಿ ವಿವೇಕಾನಂದ, ನಾಡಪ್ರಭು ಕೆಂಪೇಗೌಡ, ಮಹತ್ಮಾ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಮಹನೀಯರ ಕುರಿತು ಅಧ್ಯಯನ ನಡೆಸಲು ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆಯಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲೇ ಅಧ್ಯಯನ ಕೇಂದ್ರ ತೆರೆದು ಆನ್‌ಲೈನ್‌ ಮೂಲಕ ಕೋರ್ಸ್‌ಗೆ ಅವಕಾಸ ಕಲ್ಪಿಸಲು ಬೆಂವಿವಿ ಮುಂದಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ಕೇಂದ್ರ, ಯೋಗ ಅಧ್ಯಯನ ಕೇಂದ್ರ, ಗಾಂಧಿ ಅಧ್ಯಯನ ಕೇಂದ್ರದಲ್ಲಿ ಕ್ರಮವಾಗಿ ದಲಿತ ಚಳವಳಿ, ಮಾನಹಕ್ಕುಗಳು ಮತ್ತು ಕರ್ತವ್ಯ, ಯೋಗ ಬೋಧನೆ ಹಾಗೂ ಗಾಂಧಿ ಅಧ್ಯಯನ ಪ್ರಮಾಣಪತ್ರ ಡಿಪ್ಲೊಮಾ ಕೋರ್ಸ್‌ ನೀಡಲಾಗುತ್ತಿದೆ.

ಇದರಲ್ಲಿ ಒಂದು ವರ್ಷ, ಆರು ತಿಂಗಳು ಹಾಗೂ ಮೂರು ತಿಂಗಳ ಕೋರ್ಸ್‌ ಸೇರಿವೆ. ಆದರೆ, ಈ ಕೋರ್ಸ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಕೋರ್ಸ್‌ನ ಸ್ವರೂಪ ಬದಲಿಸದೆ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳ ಸ್ವಯಂ ಅಧ್ಯಯನಕ್ಕೆ ಪ್ರೇರೇಪಿಸಲು ಬೆಂವಿವಿ ತೀರ್ಮಾನಿಸಿದೆ.

ಕಾಲೇಜುಗಳಲ್ಲೇ ಅಧ್ಯಯನ ಕೇಂದ್ರ: ಬೆಂಗಳೂರು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲೂ ಡಾ.ಬಿ.ಆರ್‌.ಅಂಬೇಡ್ಕರ್‌, ಸ್ವಾಮಿ ವಿವೇಕಾನಂದ, ಗಾಂಧೀಜಿ ಹಾಗೂ ಬುದ್ಧ ಅಧ್ಯಯನ ಕೇಂದ್ರ ತೆರೆಯಬೇಕು ಎಂದು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಆಡಳಿತ ಮಂಡಳಿ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ರಚಿಸಲು ಎಲ್ಲ ಕಾಲೇಜುಗಳಿಗೂ ವಿವಿಯಿಂದ ಸೂಚನೆ ನೀಡಲಾಗಿದೆ.

ಈ ಸಮಿತಿ ಮೂಲಕವೇ ಮಹನೀಯರ ಜೀವನ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುತ್ತದೆ. ಇದರ ಜತೆಗೆ ಕಾರ್ಯಗಾರಗಳನ್ನು ನಡೆಸಲು ಬೇಕಾದ ಪುಸ್ತಕಗಳನ್ನು ಬೆಂ.ವಿವಿ ಅಧ್ಯಯನ ಕೇಂದ್ರಗಳಿಂದಲೇ ಒದಗಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ವಿದ್ಯಾರ್ಥಿಗಳು ತಮ್ಮ ಪದವಿ ಅಧ್ಯಯನದ ಜತೆಗೆ ಮ್ಯಾಸಿವ್‌ ಒಪನ್‌ ಆನ್‌ಲೈನ್‌ ಕೋರ್ಸ್‌ (ಮೂಕ್ಸ್‌) ಪಡೆಯುವುದನ್ನು ಯುಜಿಸಿ ಕಡ್ಡಾಯ ಮಾಡಿದೆ. ಆನ್‌ಲೈನ್‌ ಮೂಲಕ ವಿದ್ಯಾರ್ಥಿ ತನಗೆ ಬೇಕಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮೂಕ್ಸ್‌ ಅಡಿಯಲ್ಲಿ ಮಹನೀಯರ ಜೀವನ, ಸಾಧನೆ ಅಧ್ಯಯನಕ್ಕೆ ಉತ್ತೇಜನ ನೀಡಲಾಗುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ, ಹಿಂದಿ, ಇತಿಹಾಸ, ಗ್ರಾಮೀಣಾಭಿವೃದ್ಧಿ, ಸಂಸ್ಕೃತ, ಭೌಗೋಳಿಕ ಅಧ್ಯಯನ ಹಾಗೂ ಮನಃಶಾಸ್ತ್ರ ವಿಭಾಗದಿಂದ ನೀಡುವ ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಡಿಪ್ಲೊಮಾಗಳು ಯಾವುದೇ ಸಮಸ್ಯೆ ಇಲ್ಲದೇ ಮುಂದುವರಿಯಲಿದೆ.

ಅಧ್ಯಯನ ಕೇಂದ್ರಗಳಲ್ಲಿ ನಡೆಯುವ ಪ್ರಮಾಣ ಪತ್ರದ ಡಿಪ್ಲೊಮಾ ಕೋರ್ಸ್‌ಗೆ ವಿದ್ಯಾರ್ಥಿಗಳು ದಾಖಲಾದರೆ ಮಾತ್ರ ಮುಂದುವರಿಯುತ್ತದೆ. ಇಲ್ಲವಾದರೆ ಅದನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳ ಪ್ರವೇಶದ ಆಧಾರದಲ್ಲಿ ಪುನರ್‌ ಆರಂಭಿಸಲಾಗುತ್ತದೆ ಎಂದು ವಿವರ ನೀಡಿದರು.

ವಿವಿಯಿಂದಲೇ ಪರಿಶೀಲನೆ: ಕಾಲೇಜುಗಳಲ್ಲಿ ಅಧ್ಯಯನ ಕೇಂದ್ರ ತೆರೆಯಲಾಗಿದೆಯೇ, ಇಲ್ಲವೇ ಎಂಬುದನ್ನು ವಿಶ್ವವಿದ್ಯಾಲಯದಿಂದಲೇ ಪರಿಶೀಲನೆ ಮಾಡಲಾಗುತ್ತದೆ. ಕಾಲೇಜಿನ ಮಾನ್ಯತೆ ಹಾಗೂ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ವಿಚಾರಣಾ ಸಮಿತಿ(ಎಲ್‌ಐಸಿ) ಕಾಲೇಜುಗಳಿಗೆ ಭೇಟಿ ನೀಡಲಿದೆ. ಆ ಸಂದರ್ಭದಲ್ಲಿ ಕಾಲೇಜಿನ ಸೌಲಭ್ಯ, ವಿದ್ಯಾರ್ಥಿಗಳ ಪ್ರಮಾಣದ ಜತೆಗೆ ಅಧ್ಯಯನ ಕೇಂದ್ರ ಸ್ಥಾಪನೆ ಮತ್ತು ಕಾರ್ಯವಿಧಾನದ ಬಗ್ಗೆಯೂ ಪರಿಶೀಲನೆ ನಡೆಸಲಿದೆ.

ಮಹನೀಯರ ಕುರಿತು ನೀಡುತ್ತಿರುವ ಡಿಪ್ಲೊಮಾ ಕೋರ್ಸ್‌ ಪ್ರವೇಶಕ್ಕೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಾಲೇಜುಗಳಲ್ಲೇ ಅಧ್ಯಯನ ಕೇಂದ್ರ ಆರಂಭಿಸಿ, ಮೂಕ್ಸ್‌ ಅಡಿಯಲ್ಲಿ ಅಧ್ಯಯನಕ್ಕೆ ಪ್ರೋತ್ಸಾಹಿಸಲಾಗುತ್ತದೆ.
-ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂಗಳೂರು ವಿವಿ ಕುಲಪತಿ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next