Advertisement

ಕಲೆಗೆ ಗೌರವ ಕೊಡುವುದನ್ನು ಕಲಿಯಿರಿ

09:52 AM Jan 28, 2019 | |

ಚಿಕ್ಕಮಗಳೂರು: ಕಲೆಯನ್ನು ಗೌರವಿಸುವ ಸಮಾಜ ಆರೋಗ್ಯ ಪೂರ್ಣವಾಗಿರುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಉಪಾಸನಾ ಮೋಹನ್‌ ಅಭಿಪ್ರಾಯಪಟ್ಟರು.

Advertisement

ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್‌ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನಗರದ ಶ್ರೀ ಶಂಕರಮಠ ಪ್ರವಚನಮಂದಿರದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ವರ್ಷ ಮಲ್ಲಿಗೆ ಸಮಾರಂಭದಲ್ಲಿ ನೀಡಲಾದ ಮಲ್ಲಿಗೆ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಕಲೆಗೆ ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು. ಕಲಾವಿದ ತನ್ನ ಜೀವನವನ್ನೆ ತನ್ನಿಷ್ಟದ ಕಲೆಗಾಗಿ ಸಮರ್ಪಿಸಿರುತ್ತಾನೆ. ಸಮಾಜ ಆ ಕಲೆಯನ್ನು ಆಸ್ವಾದಿಸಿ ಸಂತೋಷಪಟ್ಟಿರುತ್ತದೆ. ತಮಗಿಂದು ಸಂದಿರುವ ಪ್ರಶಸ್ತಿಯನ್ನು ಸುಗಮ ಸಂಗೀತಕ್ಕೆ ಸಮರ್ಪಿಸುವುದಾಗಿ ನುಡಿದರು.

ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎಸ್‌.ನರಸಿಂಹಸ್ವಾಮಿ ಅವರ ಹುಟ್ಟಿದ ಈ ದಿನವೇ ನೀಡಿರುವ ಮಲ್ಲಿಗೆ ಪುರಸ್ಕಾರ ಸುಗಮ ಸಂಗೀತಕ್ಕೆ ಗರಿ ಮೂಡಿಸಿದೆ. ತಮ್ಮ ಸಂಗೀತ ಗುರು ಜಿ.ವಿ.ಅತ್ರಿ ನೀಡಿದ ಭಿಕ್ಷೆ. ಅವರಿಂದ ಕಲಿತ ತಾವೂ ಸೇರಿದಂತೆ ಏಳೆಂಟು ತಂಡಗಳ ಸಂಗೀತದಿಂದ ಬೆಂಗಳೂರು ಮಹಾನಗರ ಹಸಿರಾಗಿದೆ. ಅತ್ರಿ ಅವರು ಎಲ್ಲೆಡೆ ಹಾಡುತ್ತಿದ್ದ ಗಂಗಾವತರಣ ಗೀತೆ ಹಾಡುವ ಮೂಲಕ ಗುರುವಿಗೆ ಗೌರವ ಸಲ್ಲಿಸಿದರು.

ಶಿಕ್ಷಣತಜ್ಞ ಎಂ.ಎನ್‌.ಷಡಕ್ಷರಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ನಾಗರಿಕತೆಯ ಉತ್ತುಂಗಕ್ಕೆ ಲಲಿತ ಕಲೆಗಳ ಕೊಡುಗೆ ಮಹತ್ವದ್ದು. ಬೇಸರವನ್ನು ಹೋಗಲಾಡಿಸಿ ಸಂತೋಷವನ್ನು ಹೊಮ್ಮಿಸುವ ಶಕ್ತಿ ಸಂಗೀತಕ್ಕಿದೆ. ಮೋಹನ್‌ರಿಂದ ಮಲ್ಲಿಗೆ ಪುರಸ್ಕಾರಕ್ಕೆ ಗೌರವ ಬಂದಿದೆ ಎಂದರು.

Advertisement

ಕಲ್ಕಟ್ಟೆ ಪುಸ್ತಕಮನೆಯ ಅಧ್ಯಕ್ಷ ಎಚ್.ಎಂ. ನಾಗರಾಜರಾವ್‌ ಅಭಿನಂದಿಸಿ ಮಾತನಾಡಿ, ಒಳ್ಳೆಯ ಮನಸ್ಸಿನ ಕಲಾವಿದರಲ್ಲಿ ಉಪಾಸನಾ ಮೋಹನ್‌ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಆಡಿಯೋ ಮತ್ತು ವಿಡಿಯೋದಲ್ಲಿ ಡಿಪ್ಲೊಮೋ ಪಡೆದು ಶಾಸ್ತ್ರಿಯ ಸಂಗೀತ, ಹಿಂದೂಸ್ತಾನಿ ಮತ್ತು ಸುಗಮ ಸಂಗೀತವನ್ನು ಅಭ್ಯಾಸ ಮಾಡಿದ್ದು ಸಂಗೀತ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದವರು. ರಾಜ್ಯಾದ್ಯಂತ 70ಕ್ಕೂ ಹೆಚ್ಚು ಸಂಗೀತ ಶಿಬಿರಗಳನ್ನು ನಡೆಸಿದ್ದು, 40 ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ಹಸಿರು ರಿಬ್ಬನ್‌ ಸೇರಿದಂತೆ ಯಶಸ್ವಿ ಚಲನಚಿತ್ರ ಸಂಗೀತ ನಿರ್ದೇಶಕರೂ ಹೌದು. ವರ್ಷದ ಗಾಯಕ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಮೋಹನ್‌ ಬಹುಮುಖ ಪ್ರತಿಭೆಯ ಗಾಯಕ ಎಂದು ಬಣ್ಣಿಸಿದರು.

ಕಾರ್ಯಕ್ರಮವನ್ನು ಪಲ್ಲವಿ ಸಿ.ಟಿ.ರವಿ ಉದ್ಘಾಟಿಸಿದರು. ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌, ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ ದೊಡ್ಡಯ್ಯ, ಪಾವನಿ ವೀಣಾ ಶಾಲೆಯ ಪ್ರಧಾನಗುರು ಮಾಲಿನಿ ರಮೇಶ್‌, ಬೀರೂರು ಮಲ್ಲಿಗೆಬಳಗದ ಅಧ್ಯಕ್ಷೆ ಸ್ವರ್ಣ ಮಾತನಾಡಿದರು.

ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್‌ ಅಧ್ಯಕ್ಷ ಮಲ್ಲಿಗೆ ಸುಧೀರ್‌ ಸ್ವಾಗತಿಸಿ, ಗೌರಿ ಮತ್ತು ನಾಗರಾಜರಾವ್‌ ನಿರೂಪಿಸಿ, ರೇಖಾ ನಾಗರಾಜ ರಾವ್‌ ವಂದಿಸಿದರು. ಗಾನಮಲ್ಲಿಗೆ-13 ಅಂಗವಾಗಿ ಉಪಾಸನಾ ಮೋಹನ್‌, ಮಲ್ಲಿಗೆ ಸುಧೀರ್‌, ನಾಗರಾಜರಾವ್‌ ಕಲ್ಕಟ್ಟೆ, ಅಭಿಷೇಕ್‌ ಮಲ್ಲಿಗೆ, ವಂದಿತಾ ಯಾಜಿ ಗೀತನಗಾಯನ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next