ಹುಬ್ಬಳ್ಳಿ: ಅಂಗಾಂಗ ದಾನಿಗಳು ಹಾಗೂ ಪಡೆದುಕೊಳ್ಳುವವರ ಮಧ್ಯೆ ವೈದ್ಯ ಸಿಬ್ಬಂದಿ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದು ಅವಶ್ಯಕವಾಗಿದೆ ಎಂದು ಮೋಹನ ಫೌಂಡೇಶನ್ ನಿರ್ದೇಶಕಿ ಲಲಿತಾ ರಘುರಾಮ ಹೇಳಿದರು.
ಶುಕ್ರವಾರ ಕಿಮ್ಸ್ ನ ನೆಫ್ರಾಲಜಿ ವಿಭಾಗದ ವತಿಯಿಂದ ಆಯೋಜಿಸಿದ ಟ್ರಾನ್ಸ್‌ಪ್ಲಾಂಟ್ ಕೋಆರ್ಡಿನೇಟರ್ ಟ್ರೇನಿಂಗ್ ಪ್ರೊಗ್ರಾಮ್ ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂಗಾಂಗ ದಾನ ಎಲ್ಲ ದಾನಗಳಲ್ಲಿಯೂ ಶ್ರೇಷ್ಠವಾದುದು. ಬ್ರೇನ್ ಡೆತ್ ಆಗಿ ಜೀವತ್ಛವದಂತಿರುವ ವ್ಯಕ್ತಿಯ ಅಂಗಾಂಗಗಳನ್ನು ಪಡೆದುಕೊಂಡು ಅವಶ್ಯಕತೆ ಇರುವವರಿಗೆ ನೀಡುವುದು ಅಗತ್ಯ. ಈ ದಿಸೆಯಲ್ಲಿ ವೈದ್ಯ ಸಿಬ್ಬಂದಿ ಕಾರ್ಯ ಮಹತ್ವದ್ದಾಗಿದೆ. ಬ್ರೇನ್ ಡೆತ್ ಆಗಿರುವ ವ್ಯಕ್ತಿಯ ಸಂಬಂಧಿಕರಿಗೆ ಅಂಗಾಂಗ ದಾನದ ಮಹತ್ವ ತಿಳಿಸಿಕೊಟ್ಟು ದಾನ ನಡೆಯುವಂತೆ ಮಾಡಬೇಕು ಎಂದರು.
ಅಂಗಾಂಗ ದಾನದ ಬಗ್ಗೆ ಜನರಲ್ಲಿ ಇತೀಚೆಗೆ ಜಾಗೃತಿ ಮೂಡುತ್ತಿದೆ. ಉತ್ತರ ಕರ್ನಾಟಕದ ದೊಡ್ಡ ಸರಕಾರಿ ಆಸ್ಪತ್ರೆಗಳಲ್ಲಿ ದಾನ ಮಾಡಿದ ಅಂಗಾಂಗ ಜೋಡಿಸಲು ಸಮರ್ಪಕ ವ್ಯವಸ್ಥೆಯಾಗಬೇಕು. ಇದಕ್ಕೆ ಬೇಕಾಗುವ ತಜ್ಞ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕೆಂದರು.
ಅಂಗಾಂಗ ದಾನ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಕಾನೂನು ರೀತಿ ಇದೆ ಎಂಬುದು ಮನವರಿಕೆಯಾದರೆ
ಅಂಗಾಂಗ ದಾನ ಹೆಚ್ಚುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಕಳೆದ 5 ದಿನಗಳ ಕಾಲ ನಡೆದ ತರಬೇತಿ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅಂಗಾಂಗ ದಾನದ ಮಹತ್ವ ಅರಿಯಲು ಪೂರಕವಾಗಿದೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯಿದೆ ಎಂದು ನುಡಿದರು.
ಡಾ| ಅರುಣಕುಮಾರ ಸಿ, ಡಾ| ಎಂ.ಸಿ. ಚಂದ್ರು, ಬಸವರಾಜ ಸೋಮಣ್ಣವರ, ಡಾ| ಎಸ್.ಎಸ್. ಕಟ್ಕೊಳ, ಆಶೀರ್ವಾದಮ್ಮ
ಡೊಕ್ಕಾ, ಅನ್ನಪೂರ್ಣಾ ಜಿ., ಡಾ| ವೆಂಕಟೇಶ ಮೊಗೇರ, ಡಾ| ಮಹಾಬಳೇಶ್ವರ ಮಯ್ಯ ಇದ್ದರು.