ಯಾದಗಿರಿ: ವೇದ ಉಪನಿಷತ್ತುಗಳ ಸಾರವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಉತ್ತಮ ಜೀವನ ನಡೆಸಬಹುದು ಎಂದು ಪಂ. ರಾಘವೇಂದ್ರಚಾರ್ಯ ಬಳಿಚಕ್ರ ಹೇಳಿದರು.
ನಗರದ ಮಾತಾಮಾಣಿಕೇಶ್ವರ ಬಡಾವಣೆಯ ವೀರಾಂಜನೆಯ ಮಂದಿರದಲ್ಲಿ ಶಂಕರ ಸೇವಾ ಸಮಿತಿ ಯಾದಗಿರಿ ವತಿಯಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವೇದ ಉಪನಿಷತ್ತುಗಳು ನಮ್ಮ ಬದುಕಿಗೆ ಮಾರ್ಗದರ್ಶನ ನೀಡುವ ಸಮಗ್ರ ಗ್ರಂಥಗಳಾಗಿವೆ. ಅವುಗಳನ್ನು ಅರ್ಥಮಾಡಿಕೊಂಡು ಜೀವನ ಸಾಗಿಸಿದಾಗ ಮೋಕ್ಷ ಹೊಂದಲು ಸಾಧ್ಯ ಎಂದರು.
ಪ. ನರಸಿಂಹಾಚಾರ್ಯ ಪುರಾಣಿಕ ಮಾತನಾಡಿ, ಯಾರು ಕರ್ಮವನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತಾರು, ಅವರಿಗೆ ಭಗವಂತನ ಕೃಪೆ ಸಿಗುತ್ತದೆ ಎಂದು ತಿಳಿಸಿದರು.
ತೈತ್ತರೀಯ ಉಪನಿಷತ್ತು ಕುರಿತು ಉಪನ್ಯಾಸ ನೀಡಿದ ಡಾ| ಯೋಗೀಶ ಭಟ್, ರಾಮಕೃಷ್ಣ ಆಶ್ರಮದ ಪ್ರಚಾರಕ ವೇಣುಗೋಪಾಲ, ಶಂಕರ ಸೇವಾ ಸಮಿತಿ ಅಧ್ಯಕ್ಷ ಗೋರಕನಾಥ ಜೋಶಿ ಮತ್ತು ದೇವಸ್ಥಾನದ ಗೌರವ ಅಧ್ಯಕ್ಷ ವೆಂಕಟೇಶ ಇದ್ದರು.
ಸಮಿತಿ ತಾಲೂಕು ಸಂಚಾಲಕ ರವೀಂದ್ರ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿಲ ದೇಶಪಾಂಡೆ ವಂದಿಸಿದರು. ಸಮಾರಂಭದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.