ಪ್ರತೀ ವರ್ಷ ಸೆಪ್ಟಂಬರ್ 28ನ್ನು ವಿಶ್ವ ರೇಬೀಸ್ ದಿನವನ್ನಾಗಿ ಆಚರಿಸಲಾಗುತ್ತದೆ. 4 ಸಾವಿರ ವರ್ಷಗಳ ಹಿಂದಿನಿಂದಲೂ ಮನುಕುಲಕ್ಕೆ ಪರಿಚಿತವಾಗಿದ್ದ ಈ ಮಾರಕ ರೋಗಕ್ಕೆ ತುತ್ತಾದರೆ ಸಾವು ಖಚಿತ. ಆದರೆ ರೇಬೀಸ್ ವೈರಾಣುಗಳು ದೇಹ ಪ್ರವೇಶಿಸಿದರೂ ರೋಗಕ್ಕೀಡಾಗುವುದನ್ನು ಪರಿಣಾಮಕಾರಿಯಾಗಿ ತಡೆಯಬಲ್ಲ ಲಸಿಕೆಗಳು ನಮ್ಮ ಬಳಿ ಇವೆ. ಈ ಬಗ್ಗೆ ತಿಳಿಯುವುದರಿಂದ ರೇಬೀಸ್ ರೋಗದಿಂದ ಉಂಟಾಗುವ ಸಾವಿನ ಪ್ರಮಾಣವನ್ನು ತಗ್ಗಿಸಬಹುದಾಗಿದೆ.
ಆರಂಭಿಕ ಬೆಳವಣಿಗೆ
ರೇಬೀಸ್ ಅಥವಾ ಹುಚ್ಚುನಾಯಿ ರೋಗದ ಬಗ್ಗೆ ನಮಗೆ ಸುಮಾರು 4 ಸಾವಿರ ವರ್ಷಗಳ ಹಿಂದಿನಿಂದಲೂ ತಿಳಿದಿತ್ತು. ಮನುಷ್ಯ ಕುಲ ತುಂಬಾ ಭಯಪಡುತ್ತಿದ್ದ ಪುರಾತನ ಕಾಯಿಲೆಗಳಲ್ಲಿ ಇದೂ ಒಂದಾಗಿದೆ. ರೇಬೀಸ್ ಕಾಯಿಲೆಯನ್ನು ನಿಯಂತ್ರಿಸಲು ಸದ್ಯ ಬಳಕೆಯಲ್ಲಿರುವ ಪರಿಕಲ್ಪನೆಗಳು 19ನೇ ಶತಮಾನದ ಅಂತ್ಯದ ವೇಳೆಗೆ ಅಭಿವೃದ್ಧಿಗೊಂಡವು. ಇವುಗಳಲ್ಲಿ ಮನುಷ್ಯರಿಗಾಗಿ ಅಭಿವೃದ್ಧಿಪಡಿಸಿದ ಮೊದಲ ಸಜೀವ, ನಿಷ್ಕ್ರಿಯಗೊಳಿಸಿದ ಲಸಿಕೆ ಮತ್ತು ಮೊದಲ ಪೋಸ್ಟ್ ಎಕ್ಸ್‌ಪೋಷರ್ ಪ್ರೊಫಿಲ್ಯಾಕ್ಸಿಸ್ (ಪಿಇಪಿ) ಸೇರಿವೆ. 1885ರ ಜುಲೈ ತಿಂಗಳಿನಲ್ಲಿ 9 ವರ್ಷ ವಯಸ್ಸಿನ ಜೋಸೆಫ್ ಮೇಸ್ಟರ್ ಎಂಬ ಬಾಲಕನಿಗೆ ಹುಚ್ಚು ನಾಯಿಯೊಂದು 14 ಬಾರಿ ಕಚ್ಚಿತು. ಅವನಿಗೆ ಲೂಯಿ ಪ್ಯಾಶ್ಚರ್ ರೇಬೀಸ್ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಿ ತಯಾರಿಸಿದ್ದ ಲಸಿಕೆಯ ಸರಣಿಯನ್ನು ಚುಚ್ಚುಮದ್ದಾಗಿ ನೀಡಿದರು. ರೇಬೀಸ್ ರೋಗಕ್ಕೆ ಇದು ಮೊತ್ತಮೊದಲ ಲಸಿಕೆಯಾಗಿದ್ದು, ಯಶಸ್ವಿಯಾಯಿತು; ಹುಚ್ಚು ನಾಯಿ ಕಡಿತದಿಂದ ರೇಬೀಸ್ ವೈರಾಣುಗಳು ಆ ಬಾಲಕನ ದೇಹವನ್ನು ಪ್ರವೇಶಿಸಿದ್ದರೂ ಆತ ರೋಗಕ್ಕೀಡಾಗದೆ ಬದುಕುಳಿದ.
-ಮುಂದಿನ ವಾರಕ್ಕೆ
-ಶ್ರೀಲತಾ ಮರಾಠೆ, ಸೀನಿಯರ್ ರಿಸರ್ಚ್ ಫೆಲೋ
–
ಅಮೃತಾ ಪಟ್ಟನಾಯಕ್, ವೈರಾಲಜಿಸ್ಟ್, ಅಸಿಸ್ಟೆಂಟ್ ಪ್ರೊಫೆಸರ್, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ)