ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ 15 ಹಾಗೂ ಇಬ್ಬರು ಪಕ್ಷೇತರ ಶಾಸಕರ ರಾಜೀನಾಮೆ ಪ್ರಹಸನ ಸ್ಪೀಕರ್ ಕಚೇರಿ, ರಾಜಭವನ ಸುತ್ತಿ ಸುಪ್ರೀಂಕೋರ್ಟ್‌ಗೆ ತಲುಪಿದ ವೃತ್ತಾಂತ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ “ಸಂಘರ್ಷ’ದ ಚರ್ಚೆಗೆ ನಾಂದಿ ಹಾಡಿತು. ಈ ಎರಡು ಪರಮೋತ್ಛ ಅಂಗಗಳ “ಅಧಿಕಾರ ವ್ಯಾಪ್ತಿ’, ಕಾನೂನು ಜಿಜ್ಞಾಸೆ ಹುಟ್ಟು ಹಾಕಿ, ಸ್ಪೀಕರ್ ಮತ್ತು ರಾಜ್ಯಪಾಲರ “ಸಾಂವಿಧಾನಿಕ ಅಧಿಕಾರ’ದ ಕುರಿತು ಚರ್ಚೆ ಹುಟ್ಟು ಹಾಕಿತು.
ಮೈತ್ರಿ ಸರ್ಕಾರದ ರಾಜೀನಾಮೆ ಪರ್ವ ಆರಂಭವಾಗಿದ್ದು ಜುಲೈ 1ರಂದು. ಆ ದಿನ ವಿಜಯನಗರ (ಹೊಸಪೇಟೆ) ಕಾಂಗ್ರೆಸ್ ಶಾಸಕ ಆನಂದ್‌ಸಿಂಗ್ ರಾಜೀನಾಮೆ ನೀಡಿದರು. ನಂತರ ಜುಲೈ 5ರಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆದ ಮರು ದಿನ ಜುಲೈ 6ರಂದು ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್ ಸೇರಿ ಕಾಂಗ್ರೆಸ್‌ನ 7 ಹಾಗೂ ಜೆಡಿಎಸ್‌ನ ಮೂವರು ಶಾಸಕರು ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.
ಮೊದಲ ಹಂತದಲ್ಲಿ ರಾಜೀನಾಮೆ ಸಲ್ಲಿಸಿದ 14 ಮಂದಿ ಶಾಸಕರ ಪೈಕಿ 9 ನಾಮಪತ್ರಗಳನ್ನು ಜುಲೈ 9ರಂದು ಸ್ಪೀಕರ್ ರಮೇಶ್ ಕುಮಾರ್ ತಿರಸ್ಕರಿಸಿ, ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದ ಆನಂದ್‌ಸಿಂಗ್, ಪ್ರತಾಪಗೌಡ, ನಾರಾಯಣಗೌಡ, ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರನ್ನು ಪ್ರತ್ಯೇಕ ದಿನಾಂಕಗಳಲ್ಲಿ ವಿಚಾರಣೆಗೆ ಕರೆದರು. ಈ ಮಧ್ಯೆ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ ಅವರನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ದೂರು ನೀಡಿತು. ಜೊತೆಗೆ ವಿಪ್ ಉಲ್ಲಂ ಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಸಲ್ಲಿಸಿದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ಈ ಮಧ್ಯೆ ರಾಜೀನಾಮೆ ಸಲ್ಲಿಸಿದ ಅತೃಪ್ತ 10 ಮಂದಿ ಶಾಸಕರು ಜುಲೈ 10ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿ “ಸ್ವಯಂಪ್ರೇರಣೆಯಿಂದ ಕೊಟ್ಟಿರುವ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ’ ಕೋರಿದರು. ಜುಲೈ 11ರ ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಖುದ್ದು ಹಾಜರಾಗಿ ರಾಜೀನಾಮೆ ಪತ್ರ ಸಲ್ಲಿಸುವಂತೆ 9 ಶಾಸಕರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.
ಅದರಂತೆ, ಜುಲೈ 11ರಂದು ಸ್ಪೀಕರ್ ಮುಂದೆ ಖುದ್ದು ಹಾಜರಾಗಿ ಶಾಸಕರು ಪುನ: ರಾಜೀನಾಮೆ ಪತ್ರ ಸಲ್ಲಿಸಿದರು. ಜುಲೈ 12ರಂದು ಅತೃಪ್ತ ಶಾಸಕರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠ, “ರಾಜೀನಾಮೆ ಹಾಗೂ ಅನರ್ಹತೆ’ ವಿಚಾರದಲ್ಲಿ ಜುಲೈ 16ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಿತು. ಬಳಿಕ ಜುಲೈ 16ರಂದು ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಪೀಠ ರಾಜೀನಾಮೆ ಸಲ್ಲಿಸಿದ ಶಾಸಕರ ರಾಜೀನಾಮೆ ಅಂಗೀಕರಿಸುವ ಅಥವಾ ಅನರ್ಹಗೊಳಿಸುವ ವಿವೇಚನಾಧಿಕಾರ ಸ್ಪೀಕರ್ ಅವರಿಗಿದೆ. ಕಾಲಮಿತಿಯೊಳಗೆ ಅವರು ಕ್ರಮ ಜರುಗಿಸಬೇಕು ಎಂದು ಹೇಳಿತು. ಆದರೆ, ಇಂತಿಷ್ಟೇ ಕಾಲಮಿತಿಯೆಂದು ಹೇಳಿಲ್ಲ. ಅತೃಪ್ತ ಶಾಸಕರ ಅರ್ಜಿಯ ಅಂತಿಮ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ.
ರಾಜ್ಯಪಾಲರ ಪ್ರವೇಶ: ಜುಲೈ 18ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆ ಪ್ರಸ್ತಾವನೆ ಮಂಡಿಸಿ ಚರ್ಚೆ ಆರಂಭಿಸಿದರು. ಅದೇ ದಿನ ವಿಶ್ವಾಸಮತ ಯಾಚನೆ ಪೂರ್ಣಗೊಳಿಸಿ ಎಂಬ ಸಂದೇಶವನ್ನು ರಾಜ್ಯಪಾಲರು ಸ್ಪೀಕರ್‌ಗೆ ರವಾನಿಸಿದರು. ಆದರೆ, ಕಲಾಪ ಮುಂದುವರಿದ ಕಾರಣ ಜುಲೈ 19ರಂದು ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತಯಾಚನೆ ಪೂರ್ಣಗೊಳಿಸುವಂತೆ ರಾಜ್ಯಪಾಲರು ನೇರವಾಗಿ ಮುಖ್ಯಮಂತ್ರಿಯವರಿಗೆ ಸೂಚನೆ ನೀಡಿದರು. ಅದು ಪಾಲನೆಯಾಗಿಲ್ಲ. ಈ ದಿನದ (ಜು.19) ಮುಕ್ತಾಯದೊಳಗೆ ಬಹಮತ ಸಾಬೀತುಪಡಿಸಿ ಎಂದು ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಎರಡನೇ ಬಾರಿಗೆ ಸೂಚನೆ ನೀಡಿದರು. ಅದೂ ಸಹ ಪಾಲನೆಯಾಗಿಲ್ಲ. ಚರ್ಚೆ ಯಥಾಪ್ರಕಾರ ಮುಂದುವರಿಯಿತು.
ಪುನಃ ಸುಪ್ರೀಂಕೋರ್ಟ್ ಅಂಗಳಕ್ಕೆ ವಿಶ್ವಾಸಮತ: ಈ ನಡುವೆ ಜುಲೈ 16ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿ “ರಾಜೀನಾಮೆ ಕೊಟ್ಟ ಶಾಸಕರಿಗೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಬಗ್ಗೆ ಬಲವಂತಪಡಿಸುವಂತಿಲ್ಲ’ ಎಂದು ಹೇಳಿದ ಪರಿಣಾಮ ಪಕ್ಷ ಜಾರಿಗೊಳಿಸಿದ ವಿಪ್ ಬಗ್ಗೆ ಉಂಟಾದ ಗೊಂದಲದ ಬಗ್ಗೆ ಸ್ಪಷ್ಟೀಕರಣ ಕೋರಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಈ ಮಧ್ಯೆ, ಅಧಿವೇಶನದ ಮಧ್ಯದಲ್ಲಿ ರಾಜ್ಯಪಾಲರು ಸದನಕ್ಕೆ ಸೂಚನೆ ನೀಡಲು ಬರುವುದಿಲ್ಲ ಎಂದು ಆಕ್ಷೇಪಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಸುಪ್ರೀಂ ಮೆಟ್ಟಿಲೇರಿದ್ದಾರೆ. ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿಪಡಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕು ಎಂದು ಪಕ್ಷೇತರ ಶಾಸಕರಾದ ಆರ್. ಶಂಕರ್ ಹಾಗೂ ಎಚ್.ನಾಗೇಶ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲ ಅರ್ಜಿಗಳು ವಿಚಾರಣಾ ಹಂತದಲ್ಲಿವೆ.
* ರಫೀಕ್ ಅಹ್ಮದ್