Advertisement

ಪಾದಯಾತ್ರೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ನಾಯಕತ್ವ ಚಿಂತೆ

02:28 PM Jan 13, 2022 | Team Udayavani |

ಬೆಂಗಳೂರು: ಅತ್ತ ಮೇಕೆದಾಟು ಯೋಜನೆಗಾಗಿ ಭರ್ಜರಿ ಪಾದಯಾತ್ರೆ ನಡುವೆಯೇ ಇತ್ತ ಕಾಂಗ್ರೆಸ್‌ನಲ್ಲಿ ನಾಯಕತ್ವದ ಚಿಂತೆ ಪ್ರಾರಂಭವಾಗಿದ್ದು, ಯಾತ್ರೆಯಿಂದ ಡಿ.ಕೆ.ಶಿವಕುಮಾರ್‌ ವರ್ಚಸ್ಸು ವೃದ್ಧಿಯಾಗುತ್ತಿರುವುದು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

Advertisement

ಪಾಂಚಜನ್ಯ ಯಾತ್ರೆಯಿಂದ ಎಸ್‌.ಎಂ.ಕೃಷ್ಣ, ಬಳ್ಳಾರಿ ಪಾದಯಾತ್ರೆಯಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು, ಇದೀಗ ಮೇಕೆದಾಟು ಪಾದಯಾತ್ರೆ ಯಶಸ್ವಿಯಾದರೆ 2023ಕ್ಕೆ
ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಗಾದಿಗೆ ಸನಿಹವಾಗಬಹುದು. ಆಗ ನಮ್ಮ ಕಥೆ ಏನು ಎಂಬುದು ಹಲವು ನಾಯಕರ ಚಿಂತೆಯಾಗಿದೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಅರ್ಧ ಡಜನ್‌ಗೂ ಹೆಚ್ಚು ನಾಯಕರು ಇದ್ದರೂ ಮುಂಚೂಣಿಯಲ್ಲಿರುವುದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌. ಅದರಲ್ಲೂ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ನಂತರ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡು ವರ್ಚಸ್ಸು ವೃದ್ಧಿಸಿಕೊಳ್ಳುವ ಯಾವ ಅವಕಾಶವನ್ನೂ ಬಿಡುತ್ತಿಲ್ಲ. ಇದು ಪಕ್ಷದಲ್ಲಿ ಮುಖ್ಯಮಂತ್ರಿ ಕನಸು
ಕಾಣುತ್ತಿರುವವರ ನಿದ್ದೆಗೆಡಿಸಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಎಸ್‌.ಎಂ.ಕೃಷ್ಣ ಅವರ ನಂತರ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ, ವೀರೇಂದ್ರ ಪಾಟೀಲ್‌ ನಂತರ ಲಿಂಗಾಯಿತ ಸಮುದಾಯಕ್ಕೆ ಸಿಕ್ಕಿಲ್ಲ. ದಲಿತ ಸಮುದಾಯದ
ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವ ಅವಕಾಶ ಇದ್ದರೂ ಸಾಧ್ಯವಾಗಲಿಲ್ಲ ಎಂಬ ಕೂಗು ಆಯಾ ಸಮುದಾಯದಲ್ಲಿದೆ. ಇದೇ ಹಿನ್ನೆಲೆಯಲ್ಲಿ ಮುಂದಿನ ವರ್ಷ ನಡೆಯಲಿರುವ
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದರು. ಆದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪರಿಸ್ಥಿತಿ
ಬದಲಾಗುವ ಲಕ್ಷಣಗಳು ಕಂಡುಬರುತ್ತಿವೆ.

ಇದನ್ನೂ ಓದಿ :ನಮ್ಮ ಮೆಟ್ರೋ 40 ಸಿಬ್ಬಂದಿಗೆ ಸೋಂಕು ! ಮನೆಗಳಲ್ಲೇ ಐಸೋಲೇಷನ್‌

ಕಾಂಗ್ರೆಸ್‌ನಲ್ಲಿ ಇದೀಗ ಮುಂದಿನ ಮುಖ್ಯ ಮಂತ್ರಿ ವಿಚಾರ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆಯೇ ಗಿರಕಿ ಹೊಡೆಯು ವಂತಾಗಿದೆ. ಮೇಕೆದಾಟು ಪಾದಯಾತ್ರೆಯಿಂದ
ಸಹಜವಾಗಿ ಡಿ.ಕೆ.ಶಿವಕುಮಾರ್‌ ವರ್ಚಸ್ಸು ವೃದ್ಧಿ ಹಾಗೂ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆ ಶಕ್ತಿ ಬಂದಂತಾಗಿದೆ. ಆದರೆ, ಇದು ಮತಗಳಿಕೆಯಾಗುತ್ತಾ ಎಂಬುದು ಈಗಲೇ
ಹೇಳಲು ಸಾಧ್ಯವಿಲ್ಲ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತ ಸಮುದಾಯ ಕಾಂಗ್ರೆಸ್‌ ಜತೆ ನಿಂತಾಗ ಅಧಿಕಾರ ಸಿಕ್ಕಿದೆ. ಆದರೆ, ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಸಮುದಾಯದ ಸಂಖ್ಯಾಬಲ ಹಾಗೂ ಹೈಕಮಾಂಡ್‌ ಅಭಯ ಆಧಾರದ ಮೇಲೆ ಮುಖ್ಯಮಂತ್ರಿ ಯಾರು ಎಂಬುದು ತೀರ್ಮಾನವಾಗಲಿದೆ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

Advertisement

ಕಾವು ಉಳಿಯುತ್ತಾ?: ಈ ಮಧ್ಯೆ, ಚುನಾವಣೆಗೆ ಹದಿನೈದು ತಿಂಗಳು ಇರುವಾಗ ಮೇಕೆದಾಟು ಪಾದಯಾತ್ರೆಯಿಂದಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಶುರುವಾಗಿರುವ ಕಾವು ಹಾಗೂ ಒಗ್ಗಟ್ಟು ಹೀಗೇ
ಇರುತ್ತಾ, ಡಿ.ಕೆ.ಶಿವಕುಮಾರ್‌ ಅವರಿಗೆ ಮುಂದೆಯೂ ಇದೇ ರೀತಿ ಎಷ್ಟರ ಮಟ್ಟಿಗೆ ನಾಯಕರು ಸಾಥ್‌ ನೀಡಬಹುದೆಂಬ ಪ್ರಶ್ನೆಯೂ ಇದೆ. ಇದು ಡಿ.ಕೆ.ಶಿವಕುಮಾರ್‌ ಅವರಿಗೂ
ಸವಾಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರು ಮೊದಲ ದಿನವೇ ಅನಾರೋಗ್ಯದಿಂದ ವಾಪಸ್‌ ಆಗಿದ್ದು ಎರಡು ದಿನದ ನಂತರ ಸೇರ್ಪಡೆಯಾಗಿದ್ದು ಮತ್ತೆ
ಬೆನ್ನುನೋವು ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದು, ಕೆಲವು ನಾಯಕರು ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾದ ಬಗ್ಗೆಯೂ ಚರ್ಚೆಗೆ ಗ್ರಾಸವಾಗಿದೆ.

ನಮ್ಮಲ್ಲೂ ಹೋರಾಟ ಮಾಡಿ ಎಂಬ ಡಿಮ್ಯಾಂಡ್‌
ಮೇಕೆದಾಟು ಪಾದಯಾತ್ರೆ ಬೆನ್ನಲ್ಲೇ ಇದೇ ರೀತಿಯ ಹೋರಾಟ ಇತರೆ ನೀರಾವರಿ ಯೋಜನೆಗಳಿಗೂ ಮಾಡಬೇಕೆಂಬ ಒತ್ತಡ ಪಕ್ಷದಲ್ಲಿ ಕೇಳಿಬರುತ್ತಿದೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತ, ಎತ್ತಿನಹೊಳೆ, ಭದ್ರಾ ಮೇಲ್ದಂಡೆ, ಮಹದಾಯಿ ಬಗ್ಗೆಯೂ ಹೋರಾಟ ಮಾಡೋಣ ಎಂದು ಆಯಾ ಭಾಗದ ನಾಯಕರು ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಪಕ್ಷದಲ್ಲಿ ಯಾವ ರೀತಿಯ ಸ್ಪಂದನೆ ಸಿಗುವುದೋ ಕಾದು ನೋಡಬೇಕಾಗಿದೆ.

– ಎಸ್‌.ಲಕ್ಷ್ಮಿನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next