Advertisement

ನಾಯಕರ ಏಟು-ತಿರುಗೇಟು: ಜಾತಿ ಸಂಘರ್ಷಕ್ಕೆ ಕಾರಣವಾಗದಿರಲಿ

06:00 AM May 05, 2018 | |

ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಸಮುದಾಯಗಳ ಬೆಂಬಲ ಪಡೆಯುವ ನಿಟ್ಟಿನಲ್ಲಿ ನಾಯಕರು ಪ್ರತ್ಯಕ್ಷ-ಪರೋಕ್ಷ ಪ್ರೀತಿ ವಾತ್ಸಲ್ಯ, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಹೊಗಳಿದ್ದು, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್‌ ಅನ್ಯಾಯ ಮಾಡಿದೆ ಎಂದು ಹೇಳಿದ್ದು ಒಂದೆಡೆಯಾದರೆ ಮತ್ತೂಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಸಹಿತ ಹೇಳಿಕೆಗಳ ಮೂಲಕ ತಿರುಗೇಟು ನೀಡಿದ್ದು ವಿಶೇಷ.

ಕರ್ನಾಟಕ ರಾಜ್ಯದ ಚುನಾವಣೆ ಎಂದರೆ ಅಭ್ಯರ್ಥಿಯ ಜಾತಿ, ಹಣ, ವೈಯುಕ್ತಿಕ ವರ್ಚಸ್ಸು, ಗೆಲ್ಲುವ ಸಾಮರ್ಥ್ಯ ಇದರ ಸುತ್ತಲೇ ಗಿರಕಿ ಹೊಡೆಯುತ್ತದೆ ಎಂಬುದು ಎಷ್ಟು ಸತ್ಯವೋ ಪಕ್ಷಕ್ಕೆ  ಒಟ್ಟಾರೆ ಸಮುದಾಯದ ಬೆಂಬಲ ಸಗಟು ಮತಬ್ಯಾಂಕ್‌ ಆಗಿ ಪಡೆಯುವ ತಂತ್ರಗಾರಿಕೆಯೂ ಇದೆ. ಇಷ್ಟು ದಿನ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿದ್ದ ನಾಯಕರು ಇದೀಗ ಆ ನಿಟ್ಟಿನಲ್ಲಿ ಚಿತ್ತ ಹರಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. 

ಒಂದು ಸಮುದಾಯದ ಬಗ್ಗೆ ಆಡುವ ಮಾತು ಎಷ್ಟು ಪ್ರಮಾಣದ ಮತ ತರಬಲ್ಲದು, ಪ್ರತಿಸ್ಪರ್ಧಿಗಳು ಅಥವಾ ಮತ್ತೂಂದು ಪಕ್ಷದ ವರ್ತನೆ ತಮಗೆಷ್ಟು ಲಾಭ ತರಬಲ್ಲದು ಎಂಬುದರ ಲೆಕ್ಕಾಚಾರದ ಮೇಲೆಯೇ ಪ್ರತಿ ಮಾತು ನಾಯಕರ ಬಾಯಿಂದ ಹೊರ ಬೀಳುತ್ತದೆ.

ಅದು ಒಂದೆರಡು ದಿನ ಚರ್ಚೆಗೆ ಗ್ರಾಸವಾಗಿ ಒಂದೊಮ್ಮೆ ಪಕ್ಷಕ್ಕೆ ನಷ್ಟ ಆಗುತ್ತದೆ ಎಂಬ ಆತಂಕ ಎದುರಾದರೆ ತಕ್ಷಣ ಡ್ಯಾಮೇಜ್‌ ಕಂಟ್ರೋಲ್‌ ಕ್ರಮಗಳಿಗೂ ಮುಂದಾಗುವುದು ಹೌದು. ನರೇಂದ್ರ ಮೋದಿಯವರು “ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್‌ನವರು ದೇವೇಗೌಡರನ್ನು ಅವಮಾನ ಮಾಡಿದ್ದಾರೆ’ ಎಂದು ಹೇಳಿ ಹೋದ ತಕ್ಷಣ ದೆಹಲಿಯಿಂದ ಆಗಮಿಸಿದ ಕಾಂಗ್ರೆಸ್‌ನ ಆನಂದ್‌ ಶರ್ಮಾ, ರಣದೀಪ್‌ ಸಿಂಗ್‌ ಸುರ್ಜೆವಾಲಾ “ರಾಹುಲ್‌ಗಾಂಧಿ ಎಂದಿಗೂ ದೇವೇಗೌಡರನ್ನು ಅವಮಾನ ಮಾಡಿರಲಿಲ್ಲ, ಅವರ ಬಗ್ಗೆ ಲಘುವಾಗಿಯೂ ಮಾತನಾಡಿರಲಿಲ್ಲ. ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದಷ್ಟೇ ಕರೆದಿದ್ದರು’ ಎಂದು ಸಮಜಾಯಿಷಿ ನೀಡಿದರು. ಖುದ್ದು ಸಿಎಂ ಸಿದ್ದರಾಮಯ್ಯ ಅವರು, ರಾಜಕೀಯವಾಗಿ ಆರೋಪ ಮಾಡಲಾಗಿದೆಯೇ ಹೊರತು ವೈಯಕ್ತಿಕವಾಗಿ  ಎಂದೂ ಟೀಕಿಸಿಲ್ಲ ಎಂದು ಹೇಳಿದರು. ಜತೆಗೆ ಡಿ.ಕೆ.ಶಿವಕುಮಾರ್‌ ಸಹ ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯ ನಿರ್ಲಕ್ಷ್ಯವಾಗಿಲ್ಲ. ಸೂಕ್ತ ಸ್ಥಾನಮಾನ ನೀಡಲಾಗಿದೆ ಎಂದು ಹೇಳಿ ಸಮುದಾಯದ ಆಕ್ರೋಶ ತಣಿಸುವ ಕೆಲಸ ಮಾಡಿದರು.

Advertisement

ಇನ್ನು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್‌ ಅನ್ಯಾಯ ಮಾಡಿದೆ ಎಂಬ ಪ್ರಧಾನಿ ನರೇಂದ್ರಮೋದಿ ಹೇಳಿಕೆಯಿಂದಲೂ ಆತಂಕಗೊಂಡ ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳ ಮೂಲಕ ತಕ್ಷಣ ಪ್ರತಿಕ್ರಿಯೆ ರವಾನಿಸಿತು. ಮಲ್ಲಿಕಾರ್ಜುನ ಖರ್ಗೆ ಅವರೂ “ದಲಿತರ ಬಗ್ಗೆ ನಿಮಗೆಷ್ಟು ಪ್ರೀತಿಯಿದೆ? ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ನೀವು ಸಿದ್ಧರಿಲ್ಲ. ಮತ್ಯಾಕೆ ಕಾಂಗ್ರೆಸ್‌ ಬಗ್ಗೆ ಮಾತನಾ ಡುತ್ತೀರಿ?’ ಎಂದು ತಿರುಗೇಟು ನೀಡಿ ಆ ಸಮುದಾಯ ಆಕ್ರೋಶ ಏಳದಂತೆಯೂ ಮಾಡಿದರು.

ರಾಜ್ಯದ ರಾಜಕೀಯ ಚಿತ್ರಣ ನಿರ್ಧರಿಸುವುದು ಪ್ರಮುಖವಾಗಿ ಒಕ್ಕಲಿಗ, ಲಿಂಗಾಯಿತ, ಮುಸ್ಲಿಂ, ದಲಿತ, ಕುರುಬ, ಈಡಿಗ ಸಮುದಾ ಯಗಳು ಎಂಬ ಹಿನ್ನೆಲೆಯಲ್ಲಿ ಆ ವರ್ಗದ ಮತಗಳನ್ನು ಸೆಳೆಯಲು ಮೂರೂ ಪಕ್ಷಗಳು ಇನ್ನಿಲ್ಲದ ಕಸರತ್ತು ಮಾಡುವ ಸಂದರ್ಭದಲ್ಲಿ ಒಂದು ಪಕ್ಷದ ಜತೆ ಇರುವ ಸಮುದಾಯವನ್ನು ಸೆಳೆಯಲು ನಾನಾ ರೀತಿಯ ತಂತ್ರಗಾರಿಕೆ ಉಪಯೋಗಿಸುತ್ತಿವೆ. ಆದರೆ, ಇದು ಜಾತಿ ಸಂಘರ್ಷಕ್ಕೆ ಕಾರಣವಾಗಬಾರದು. ಚುನಾವಣೆ ಸಲುವಾಗಿ ಯಾವುದೇ ಜಾತಿ ಹಾಗೂ ಸಮುದಾಯದ ನಡುವೆ ಬಿರುಕು ಸೃಷ್ಟಿಸುವ ಕೆಲಸವನ್ನೂ ಮಾಡಬಾರದು.  ಈ ಬಗ್ಗೆ  ಎಲ್ಲ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು  ಎಚ್ಚರಿಕೆ ವಹಿಸಿಬೇಕು. 

ಏಕೆಂದರೆ, ಕರ್ನಾಟಕ ಎಂದಿಗೂ ಸಾಮರಸ್ಯ, ಜಾತ್ಯತೀತ ನೆಲೆಗಟ್ಟಿನ ಚಿಂತನೆಯುಳ್ಳ ರಾಜ್ಯ.  ಇಲ್ಲಿನ ಜನರು  ಮಠ ಮಂದಿರಗಳ ಬಗ್ಗೆ ಅಪಾರ ಗೌರವ, ಪ್ರೀತಿ ಹೊಂದಿದ್ದಾರೆ. ಉಡುಪಿ, ಧರ್ಮಸ್ಥಳ, ಕಟೀಲು, ಕೊಲ್ಲೂರು, ಶೃಂಗೇರಿ, ಹೊರನಾಡು, ಮೈಸೂರು ಚಾಮುಂಡಿ, ನಂಜನಗೂಡು, ಮಲೆ ಮಹದೇಶ್ವರ,  ನಿಮಿಷಾಂಬ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ಇದಕ್ಕೆ ಸಾಕ್ಷಿ ಎನ್ನಬಹುದು.  ಇಲ್ಲಿಗೆ ಬರುವ ಭಕ್ತರಲ್ಲಿ ಯಾವುದೇ ಜಾತಿಗಳ ಗೆರೆ ಇರುವುದಿಲ್ಲ. ಹೀಗಾಗಿ, ರಾಜಕಾರಣಿಗಳು ಸಹ ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಗುವ, ಸಾಮರಸ್ಯಕ್ಕೆ ಧಕ್ಕೆ ಬರುವಂತಹ ಹೇಳಿಕೆಗಳಿಂದ ದೂರ ಇದ್ದರೆ ಪ್ರಜಾಪ್ರಭುತ್ವಕ್ಕೂ ಒಳ್ಳೆಯದು, ಸಾಮಾಜಿಕ ಸಾಮರಸ್ಯಕ್ಕೂ ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next