ಕಮತಗಿ: ಸಮಾಜದ ಗುರುಗಳ, ಹಿರಿಯ ಸಮ್ಮುಖದಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಹಸೆಮಣೆ ಏರಿದ ನೂತನ ದಂಪತಿಗಳು ಸಮಾಜದಲ್ಲಿ ಆದರ್ಶ ದಂಪತಿಗಳಾಗಿ, ಮಾದರಿಯ ವ್ಯಕ್ತಿತ್ವದ ಜೀವನ ಸಾಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ವಧು-ವರರಿಗೆ ಕಿವಿಮಾತು ಹೇಳಿದರು.
ಅಂಬಲಿಕೊಪ್ಪ ಗ್ರಾಮದ ಅಂಬಲಿ ನಂದೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ನೂತನ ವಧು-ವರರಿಗೆ ಶುಭಕೋರಿ ಮಾತನಾಡಿದ ಅವರು, ಹೆಣ್ಣು ತ್ಯಾಗ, ಸಹನೆಯ ಪ್ರತೀಕವಾಗಿದ್ದಾಳೆ. ಒಂದು ಮನೆಯಲ್ಲಿ ಜನ್ಮ ತಳೆದು ಇನ್ನೊಂದು ಮನೆ ಬೆಳಗುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದಾಳೆ. ಮನೆಗೆ ಬರುವ ಸೊಸೆಯನ್ನು ಮಗಳಂತೆ ಕಂಡು ನೆಮ್ಮದಿಯ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು ಎಂದರು.
ಸಮಷ್ಠಿಯ ಹಿತವನ್ನು ಬಯಸಿ ಉಚಿತವಾಗಿ ಸಾಮೂಹಿಕ ವಿವಾಹ ನಡೆಸುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದೀರಿ. ಇದು ಮಾದರಿಯ ಕೆಲಸವಾಗಿದೆ. ಇಂತಹ ಸಮಾಜಕ್ಕೆ ಒಳಿತಾಗುವ ಕಾರ್ಯವು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ನಡೆಯುತ್ತದೆ. ಭಾರತೀಯ ಸಂಸ್ಕೃತಿ, ಸಂಸ್ಕಾರವು ಗ್ರಾಮೀಣ ಜನರಲ್ಲಿ ಇನ್ನೂ ಜೀವಂತವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಗುಳೇದಗುಡ್ಡ ಒಪ್ಪತ್ತೇಶ್ಚರ ಸ್ವಾಮೀಜಿ ಮಾತನಾಡಿ, ಇದ್ದುದ್ದರಲ್ಲಿಯೇ ತೃಪ್ತಿಪಟ್ಟುಕೊಂಡು ಜೀವನ ರೂಪಿಸಿಕೊಳ್ಳಬೇಕು. ಅತಿಯಾದ ಆಸೆ ಸರಿಯಲ್ಲ. ಪ್ರತಿಯೊಬ್ಬರು ಕೂಡಾ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿ, ಆಚಾರ-ವಿಚಾರವು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದರು.
Related Articles
ಅಮೀನಗಡ ಪ್ರಭುಶಂಕರೇಶ್ವರ ಗಜ್ಜಿನಮಠದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ, ಗುಳೇದಗುಡ್ಡ ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಲ್ಲನಗೌಡ ನಾಡಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಭುಗೌಡ ಪಾಟೀಲ, ಮುಗನೂರ ಪಿಕೆಪಿಎಸ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ. ಗಡೇದ, ಮುಖಂಡರಾದ ಕೆ.ಡಿ.ಓಲೇಕಾರ, ರಾಜು ಚಿತ್ತವಾಡಗಿ ಇದ್ದರು.
ಈ ಮುನ್ನ ಬೆಳಗ್ಗೆ ಕಮತಗಿ ಶ್ರೀ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಂಗಮ ವಟುಗಳಿಗೆ ದೀಕ್ಷೆ ಹಾಗೂ ಅಯ್ಯಚಾರ ಕಾರ್ಯಕ್ರಮ ನಡೆಯಿತು. ಅಖಂಡೇಶ್ವರ ಪತ್ತಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ. ಹಾಗಾಗಿ ಸಾಮೂಹಿಕ ವಿವಾಹಗಳು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ, ಸಮಾಜದಲ್ಲಿ ಬಡವರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕಿದೆ. –ಪಿ.ಎಚ್. ಪೂಜಾರ, ವಿಧಾನ ಪರಿಷತ್ ಸದಸ್ಯರು