ಹರಿಹರ: ತಾಲೂಕಿನ ಭಾನುವಳ್ಳಿ ಗ್ರಾಮದ ಪುನರ್‌ನಿರ್ಮಿತ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಫೆ. 5 ಮತ್ತು 6ರಂದು ಹಮ್ಮಿಕೊಳ್ಳಲಾಗಿದೆ. ಫೆ. 5ರ ಬೆಳಗ್ಗೆ 8ರಿಂದ ದೇವರಿಗೆ ಫಲ ಸಮರ್ಪಣೆ, ಮಹಾ ಸಂಕಲ್ಪ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಪೂಜೆ, ಮಾತೃಕಾ ಪೂಜೆ, ಪ್ರಧಾನ ದೇವತಾ ಕಲಶ ಸ್ಥಾಪನೆ ಹಾಗೂ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಮೂರ್ತಿಗೆ ಪುನಃ ಪ್ರಾಣಪ್ರತಿಷ್ಠಾಪನೆ, ನಂತರ ಸ್ವಾಮಿಯ ಮೂಲ ಮಂತ್ರದಿಂದ ಹೋಮ-ಹವನ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
6ರಂದು ಬೆಳಗ್ಗೆ 9ಗಂಟೆಗೆ ಕಳಸಾರೋಹಣ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಶೃಂಗೇರಿ ಶಂಕರಾಚಾರ್ಯ ಮಹಾ ಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀ ಕಳಸಾರೋಹಣ ನೆರವೇರಿಸುವರು.
ಸಿರಿಗೆರೆ ಬೃಹನ್ಮಠದ ಡಾ| ಶಿವಮೂರ್ತಿ ಶ್ರೀ, ಮುರುಘಾಮಠದ ಡಾ| ಶಿವಮೂರ್ತಿ ಶರಣರು, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಕನಕಪೀಠದ ನಿರಂಜನಾನಂದಪುರಿ ಶ್ರೀ, ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶ್ರೀ, ವೇಮನ ಪೀಠದ ವೇಮನಾನಂದ ಶ್ರೀ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ, ಸಾವಿತ್ರ ಪೀಠದ ಶಂಕರಾತ್ಮನ ಸರಸ್ವತಿ ಶ್ರೀ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ, ಚಿತ್ರದುರ್ಗದ ಬಸವರಾಜ ಮಾಚಿದೇವ ಶ್ರೀ, ಚಿತ್ರದುರ್ಗ ಮಾದಾರಚನ್ನಯ್ಯ ಶ್ರೀ, ಛಲವಾದಿ ಪೀಠದ ಬಸವ ನಾಗಿದೇವ ಶ್ರೀ, ಮುಧೋಳ ಕುಂಬಾರ ಬಸವ ಗುಂಡಯ್ಯ ಶ್ರೀ ಸಾನ್ನಿಧ್ಯ ವಹಿಸುವರು.
ಎಸ್.ರಾಮಪ್ಪ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಉದ್ಘಾಟಿಸುವರು. ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ನಾಮಫಲಕ ಅನಾವರಣ ಮಾಡುವರು. ಸಂಸದ ಜಿ.ಎಂ. ಸಿದ್ದೇಶ್ವರ, ಗ್ರಾಪಂ ಅಧ್ಯಕ್ಷ ಬಸವನಗೌಡ ಪಾಟೀಲ್, ಎಂಎಲ್ಸಿಗಳಾದ ರಘು ಆಚಾರ್ಯ, ಮೋಹನ್ ಕೊಂಡಜ್ಜಿ, ಚೌಡರೆಡ್ಡಿ ಆರ್.ತೂಪಲಿ, ವೈ.ಎ. ನಾರಾಯಣಸ್ವಾಮಿ, ಕೆ.ಅಬ್ದುಲ್ ಜಬ್ಟಾರ್, ಮಾಜಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಡಾ| ವೈ.ನಾಗಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಎಚ್.ಎಂ. ರೇವಣ್ಣ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ಡಿಸಿ ಬಗಾದಿ ಗೌತಮ್, ಎಸ್ಪಿ ಆರ್.ಚೇತನ್ ಮತ್ತಿತರರು ಭಾಗವಹಿಸುವರು.
ಹೊಯ್ಸಳ ಕಾಲದ ದೇವಾಲಯ
ಹೊಯ್ಸಳ ಚಕ್ರವರ್ತಿ ವೀರಸೋಮೇಶ್ವರರ ಪ್ರಧಾನ ಅಮಾತ್ಯ ಪೊಲಾಳ್ವ ದಂಡನಾಥನು ಕ್ರಿ.ಶ 1223ರಲ್ಲಿ ಹರಿಹರದ ದೇವಾಲಯ ಕಟ್ಟಿಸುವ ಸಂದರ್ಭದಲ್ಲೇ ಲಕ್ಷ್ಮೀನಾರಾಯಣಪುರ (ಭಾನುವಳ್ಳಿ) ನಿರ್ಮಿಸಿ ಲಕ್ಷ್ಮೀನಾರಾಯಣ ದೇಗುಲ ಕಟ್ಟಿಸಿದನೆಂದು ಹರಿಹರೇಶ್ವರ ದೇವಸ್ಥಾನದ ಶಾಸನದಲ್ಲಿ ಉಲ್ಲೇಖವಾಗಿದೆ. 12 ಅಡಿ ಎತ್ತರದ ಲಕ್ಷ್ಮೀನಾರಾಯಣ ಸ್ವಾಮಿ ಮೂರ್ತಿಯಿದ್ದು, ಎಡತೊಡೆಯ ಮೇಲೆ ಲಕ್ಷ್ಮೀ ಆಸೀನಳಾಗಿದ್ದಾಳೆ. ಸ್ವಾಮಿಯ ಪ್ರಭಾವಳಿ ಸುತ್ತಲೂ ಆಕರ್ಷಕ ದಶಾವತಾರಗಳಿವೆ. ಹಿಂದಿದ್ದ ದೇವಾಲಯ ಚಿಕ್ಕದಾಗಿದ್ದರಿಂದ ಗರ್ಭಗುಡಿ ಹಾಗೆ ಉಳಿಸಿಕೊಂಡು ಭಕ್ತರು, ಮುಜರಾಯಿ ಇಲಾಖೆ ಸಹಕಾರದಿಂದ ಭವ್ಯ ದೇಗುಲ ನಿರ್ಮಿಸಲಾಗಿದೆ.