Advertisement

Laxmeshwar: ಅಂಚೆ ಇಲಾಖೆಗಿದೆ ಅತ್ಯುತ್ತಮ ಸಂಪರ್ಕ ಜಾಲ; ಶಾಸಕ ಲಮಾಣಿ

06:25 PM Oct 12, 2023 | Team Udayavani |

ಲಕ್ಷ್ಮೇಶ್ವರ: ಪ್ರಸ್ತುತ ಆಧುನಿಕ ದಿನಮಾನಗಳಲ್ಲಿ ಅಂಚೆ ಇಲಾಖೆ ವಿಶ್ವದಲ್ಲಿಯೇ ಉತ್ತಮ ಸಂಪರ್ಕ ಜಾಲ ಹೊಂದಿದ್ದು, ಜನರ ವಿಶ್ವಾಸ ಗಳಿಸಿರುವ  ಇಲಾಖೆಯಾಗಿದೆ ಎಂದು ಶಾಸಕ ಡಾ| ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಚನ್ನಮ್ಮನ ವನ ಕಲ್ಯಾಣ ಮಂಟಪದಲ್ಲಿ ಅಂಚೆ ಇಲಾಖೆ ಗದಗ ವಿಭಾಗ, ಗದಗ ಉಪ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಅಂಚೆ ಅಧಿಕಾರಿಗಳ ಸೇವೆ ಬಹು ದೊಡ್ಡದು. ದಕ್ಷತೆ, ಗೌರವಯುತವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಭ್ರಷ್ಟಾಚಾರ ರಹಿತ ವ್ಯವಸ್ಥೆ ಅಂಚೆ ಇಲಾಖೆಯಲ್ಲಿ ಮಾತ್ರ ಇದೆ. ಅಂಚೆ ಇಲಾಖೆಯ ಕಾರ್ಯ ಸಮಾಜಮುಖೀಯಾಗಿದೆ. ಸ್ಪರ್ಧಾತ್ಮಕ ಯುಗದ ಪೈಪೋಟಿಯಲ್ಲಿ ಅಂತರ್ಜಾಲ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಉತ್ತಮ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿದೆ. ಅದರಲ್ಲೂ ಅಂದಿನ ಯಾವುದೇ ಸೌಲಭ್ಯಗಳಿಲ್ಲದ ದಿನಗಳಲ್ಲಿ ಅಂಚೆಯಣ್ಣ ಮನೆ ಮನೆಗೆ ಪತ್ರ ತಲುಪಿಸುತ್ತಿದ್ದ ಪ್ರಾಮಾಣಿಕ ಸೇವೆ ಮಹತ್ವದ್ದಾಗಿದೆ. ಹೀಗಾಗಿ, ನೂರಾರು ವರ್ಷಗಳು ಕಳೆದರು ಅದರ ಮೇಲಿನ ವಿಶ್ವಾಸ ಕಡಿಮೆಯಾಗಿಲ್ಲ. ಇದೀಗ ಸಾಕಷ್ಟು ಯೋಜನೆಗಳನ್ನು ತಂದಿರುವ ಅಂಚೆ ಇಲಾಖೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗದಗ ಅಂಚೆ ವಿಭಾಗದ ಅಂಚೆ ಅಧಿಧೀಕ್ಷಕ ನಿಂಗನಗೌಡ ಭಂಗಿಗೌಡ್ರ ಮಾತನಾಡಿ, ಅಂಚೆ ಇಲಾಖೆ ಸಿಬ್ಬಂದಿ ಪ್ರಾಮಾಣಿಕವಾಗಿ, ಆದರ್ಶಪ್ರಾಯರಾಗಿ, ನಯ-ವಿನಯದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೌಲಭ್ಯಗಳಲ್ಲಿ ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ಬದಲಾವಣೆ ಅವಶ್ಯವಾಗಿದೆ.

ಅಂಚೆ ಕಚೇರಿಗೆ 250 ವರ್ಷಗಳ ಇತಿಹಾಸವಿದೆ. ವಿಶ್ವಾಸಕ್ಕೆ ಯೋಗ್ಯವಾದದ್ದಾಗಿದೆ. ಶಾಲಾ, ಕಾಲೇಜು ಮಕ್ಕಳಿಗೆ ಅಂಚೆ ಕಚೇರಿ ಸೇವೆ ಇಂದು ತುಂಬಾ ಸಹಾಯಕವಾಗಿದೆ. ಇದೀಗ ಠೇವಣಿ, ವಿಮೆ, ಉಳಿತಾಯ ಖಾತೆ ಇತ್ಯಾದಿಗಳ ಸೌಲಭ್ಯವಿದ್ದು, ಫೋನ್‌ ಮೂಲಕ ತಿಳಿಸಿದರೆ ಖಾತೆಯಲ್ಲಿನ ಹಣವನ್ನು ಮನೆಗೆ ತಲುಪಿಸುವ ಯೋಜನೆ ಸಹ ಇದೆ. ಅಂಚೆ ಇಲಾಖೆಯಲ್ಲಿರುವ ಹೊಸ ಹೊಸ ಯೋಜನೆಗಳ ಬಗ್ಗೆ ಜನರು ತಿಳಿದುಕೊಂಡು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು. ತಹಶೀಲ್ದಾರ್‌ ಕೆ.ಆನಂದಶೀಲ್‌ ಮಾತನಾಡಿದರು.

Advertisement

ಸಹಾಯಕ ಅಂಚೆ ಅಧಿಧೀಕ್ಷಕ ಶ್ರೀಕಾಂತ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರದಲ್ಲಿ ಅಂಚೆ ಇಲಾಖೆ ಈ ಮೊದಲು ಸಂಪರ್ಕ ಸಾಧನೆಗೆ ಮಾತ್ರ ಮೀಸಲಾಗಿತ್ತು. ಇಲಾಖೆ ಇದೀಗ ನೂರಕ್ಕೂ ಹೆಚ್ಚು ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದು
ಜಗತ್ತಿನಲ್ಲಿಯೇ ಹೆಮ್ಮೆಯ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಸಿ.ಜಿ.ಹಿರೇಮಠ, ಬಿ.ಎಸ್‌.ಬಾಳೇಶ್ವರಮಠ, ಶಕುಂತಲಾ ಹೊರಟ್ಟಿ, ಐಪಿಪಿಬಿ ವ್ಯವಸ್ಥಾಪಕ ಪಿ.ಆನಂದಸಾಗರ, ಪಟ್ಟಣದ ಅಂಚೆ ಪಾಲಕ ದೊಡ್ಡಪ್ಪ ಇಟಗಿ, ನಿವೃತ್ತ ಅಂಚೆ ಪಾಲಕ ಬಸವರಾಜ ಬಳ್ಳೊಳ್ಳಿ ಸೇರಿದಂತೆ ಅನೇಕರಿದ್ದರು.

ಇದೇ ಸಂದರ್ಭದಲ್ಲಿ ಅಂಚೆ ಕಚೇರಿ ಸಂಪರ್ಕ ಅಭಿಯಾನದ ಅಂಗವಾಗಿ ಸ್ಥಳೀಯ ಪುರಸಭೆ ಪೌರಕಾರ್ಮಿಕರು ಹಾಗೂ ಅಂಚೆ ಇಲಾಖೆಯಲ್ಲಿ ಉತ್ತಮ ಸಾಧನೆ ಮಾಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ದೊಡ್ಡಪ್ಪ ಇಟಗಿ ಸ್ವಾಗತಿಸಿ, ಈಶ್ವರ ಮೆಡ್ಲೆರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next