Advertisement
ಸರ್ವೋಚ್ಚ ನ್ಯಾಯಾಲಯ ಕೆಲವು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಡುವ ಆದೇಶ ಮತ್ತು ತೀರ್ಪುಗಳು ತನಗೆ ಅನನುಕೂಲಕರವಾಗಿ ಪರಿಣಮಿಸುತ್ತಿದೆ ಎನ್ನುವುದೇ ಕೇಂದ್ರದ ದೂರು. ವೇಣುಗೋಪಾಲ್ ಇದನ್ನು ನ್ಯಾ| ಮದನ್ ಲೋಕುರ್ ನೇತೃತ್ವದ ತ್ರಿಸದಸ್ಯ ಪೀಠದ ಎದುರು ಬಹಿರಂಗವಾಗಿಯೇ ಹೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನ್ಯಾಯಪೀಠ ಜನರ ಹಕ್ಕುಗಳನ್ನು ಮಾತ್ರ ಅನುಷ್ಠಾನಗೊಳಿಸುತ್ತಿದೇವೆ ಎಂದು ಹೇಳಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಹೀಗೆ ಸರಕಾರ ಮತ್ತು ನ್ಯಾಯಾಲಯ ಪರಸ್ಪರ ಮುಖಾಮುಖೀಯಾಗಿರುವುದು ಇದೇ ಮೊದಲೇನಲ್ಲವಾದರೂ ಇಂಥ ಮುಖಾಮುಖೀಗಳು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾಗುತ್ತಿವೆ ಎನ್ನುವುದೇ ಚಿಂತೆಗೆ ಕಾರಣವಾಗಿರುವ ವಿಚಾರ.
ಕೆಲ ಸಮಯದ ಹಿಂದೆ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಪ್ರಧಾನಿ ಮೋದಿ ಎದುರಲ್ಲೇ ನ್ಯಾಯಾಂಗದ ಕಾರ್ಯವೈಖರಿಯ ಬಗ್ಗೆ ಆಕ್ಷೇಪ ಎತ್ತಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಪ್ರಜಾತಂತ್ರದ ಎಲ್ಲ ಮೂರು ಅಂಗಗಳಿಗೂ ಸಮಾನ ಮಹತ್ವವಿದೆ. ಯಾರೂ ಯಾರ ಮೇಲೂ ಪ್ರಭುತ್ವವನ್ನು ಸಾಧಿಸಲು ಸಂವಿಧಾನ ಅವಕಾಶ ನೀಡಿಲ್ಲ. ಪ್ರತಿ ಅಂಗಗಳಿಗೂ ಅದರದ್ದೇ ಆದ ಕರ್ತವ್ಯ ಮತ್ತು ಹೊಣೆಗಾರಿಕೆಗಳಿವೆ. ಈ ಮೂರೂ ಅಂಗಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಿದಾಗಲೇ ಪ್ರಜಾತಂತ್ರ ಆರೋಗ್ಯಕರವಾಗಿರುತ್ತದೆ ಎಂಬ ಹಿತವಚನವನ್ನು ಆಗಲೇ ಜಸ್ಟಿಸ್ ಮಿಶ್ರಾ ಹೇಳಿದ್ದರು.ಆದರೆ ಸರಕಾರ ಇನ್ನೂ ಈ ಮಾತನ್ನು ಅರ್ಥ ಮಾಡಿಕೊಂಡಿರುವಂತೆ ಕಾಣಿಸುತ್ತಿಲ್ಲ.
ನ್ಯಾಯಾಲಯ ನೀಡುವ ಕೆಲವು ತೀರ್ಪುಗಳನ್ನು ಅನುಷ್ಠಾನಿಸಲು ಸಂಪನ್ಮೂಲದ ಕೊರತೆ ಎದುರಾಗುತ್ತದೆ ಎನ್ನುವುದು ಸರಕಾರದ ಅಳಲು. ಆದರೆ ಸರಕಾರವಿರುವುದೇ ಇಂಥ ಸಮಸ್ಯೆಗಳನ್ನು ಬಗೆಹರಿಸಲು. ಸಂಪನ್ಮೂಲ ಕ್ರೊಢೀಕರಿಸಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದೇ ಜನರು ಮತ ಕೊಟ್ಟು ಅಧಿಕಾರಕ್ಕೆ ತಂದಿರುತ್ತಾರೆ. ಹೀಗಿರುವಾಗ ಸಂಪನ್ಮೂಲ ಕ್ರೊಢೀಕರಣ ಸಮರ್ಥ ಮತ್ತು ಸಮರ್ಪಕ ನಿರ್ವಹಣೆ ಅಸಾಧ್ಯ ಎಂದು ವಾದಿಸುವುದು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದಂತೆ. ಇದೇ ವೇಳೆ ಶಾಸಕಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ಸಂವಿಧಾನದ ನೀತಿಗೆ ನ್ಯಾಯಾಂಗವೂ ಬದ್ಧವಾಗಿರುವುದು ಅಗತ್ಯ. ಎರಡೂ ಅಂಗಗಳಿಗೆ ಪ್ರತ್ಯೇಕವಾದ ಜವಾಬ್ದಾರಿಗಳಿದ್ದು, ಅವುಗಳನ್ನು ಸಮರ್ಪಕವಾಗಿ ನಿಭಾಯಿಸುವುದರಿಂದ ಈ ರೀತಿಯ ಬಹಿರಂಗ ಸಂಘರ್ಷಗಳನ್ನು ತಪ್ಪಿಸಬಹುದು. ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ವೈಮನಸು ಬೇರೆಯದ್ದೇ ಆದ ಸಂದೇಶ ವನ್ನು ರವಾನಿಸುವ ಅಪಾಯವಿದೆ. ಒಟ್ಟಾರೆಯಾಗಿ ಪ್ರಜಾತಂತ್ರದ ಮೇಲೆ ಜನರಿಟ್ಟಿರುವ ನಂಬಿಕೆಗೆ ಹಾನಿಯಾಗಲೂಬಹುದು. ಕನಿಷ್ಠ ಈ ದೃಷ್ಟಿ ಯಿಂದಲಾದರೂ ಉಭಯರು ಸಂಯಮವನ್ನು ಪಾಲಿಸುವುದು ಅಗತ್ಯ.
ಸಂವಿಧಾನದಲ್ಲಿ ನ್ಯಾಯಾಂಗಕ್ಕೂ ನಿರ್ದಿಷ್ಟ ಹೊಣೆಗಾರಿಕೆಯಿದೆ ಮತ್ತು ಶಾಸಕಾಂಗವನ್ನು ಪ್ರಶ್ನಿಸುವ ಹಕ್ಕು ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ಹಾಗೂ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡುವುದು ತನ್ನ ದಾಯಿತ್ವ ಎನ್ನುವುದನ್ನು ಸರಕಾರ ತಿಳಿದುಕೊಂಡಿರಬೇಕು. ಅಂತೆಯೇ ಸರಕಾರದ ಪ್ರತಿಯೊಂದು ನಡೆಯನ್ನು ಪ್ರಶ್ನಿಸುವುದು ತನ್ನ ಕೆಲಸವಲ್ಲ. ಜನರ ಹಿತಾಸಕ್ತಿಗೆ ವಿರುದ್ಧವಾದ ನಡೆ ಇದ್ದರೆ ಮಾತ್ರ ಸೂಕ್ತ ಕಾಲದಲ್ಲಿ ಮಧ್ಯ ಪ್ರವೇಶ ಮಾಡಬೇಕೆಂಬ ವಿವೇಚನೆಯಿಂದಲೇ ನ್ಯಾಯಾಂಗವೂ ಕಾರ್ಯನಿರ್ವಹಿಸಬೇಕು. ಎರಡೂ ಅಂಗಗಳು ತಮ್ಮ ಅಧಿಕಾರ ವ್ಯಾಪ್ತಿಗೊಂದು ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳುವುದು ಪ್ರಜಾತಂತ್ರದ ಅಗತ್ಯ.