ಲಾಹೋರ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದ ವಕೀಲ ಖವಾರ್ ಖುರೇಷಿ ಅವರು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಲಾಹೋರ್ ನಲ್ಲಿ ಟಿ.ವಿ. ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಖುರೇಷಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಪಾಕಿಸ್ತಾನದ 92 ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಖುರೇಷಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾಶ್ಮೀರ ವಿಚಾರದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳ ಬೆಂಬಲವನ್ನು ಪಡೆದುಕೊಳ್ಳಲು ಪಾಕಿಸ್ತಾನ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದೆ.
ಆದರೆ ಇನ್ನೊಂದು ಕಡೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಭೂಭಾಗವೂ ಸೇರಿದಂತೆ ಅವಿಭಾಜ್ಯ ಕಾಶ್ಮರ ತನ್ನ ಅವಿಭಾಜ್ಯ ಅಂಗ ಎಂದು ಜಾಗತಿಕ ಮಟ್ಟದಲ್ಲಿ ಪ್ರತಿಪಾದಿಸುತ್ತಿದೆ ಹಾಗೂ ಈ ವಿಚಾರದಲ್ಲಿ ತೃತೀಯ ರಾಷ್ಟ್ರದ ಮಧ್ಯಸ್ಥಿಕೆಯನ್ನು ಅದು ಸ್ಪಷ್ಟವಾಗಿ ತಿರಸ್ಕರಿಸುತ್ತಿದೆ.
ಕಾಶ್ಮೀರ ವಿಚಾರವನ್ನು ಪಾಕಿಸ್ತಾನೀಯರು ನೋಡುವುದಕ್ಕಿಂತ ಭಿನ್ನವಾಗಿ ಜಾಗತಿಕ ಮಟ್ಟದಲ್ಲಿ ನೋಡಲಾಗುತ್ತದೆ. ನಮ್ಮಷ್ಟು ಸ್ಪಷ್ಟವಾಗಿ ಈ ವಿಚಾರವನ್ನು ಪರಾಮರ್ಶಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಹಾಗಾಗಿ ಭಾರತ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಬೇರಿನ್ಯಾವುದೇ ರಾಷ್ಟ್ರದ ಜನರು ಕಾಶ್ಮೀರ ವಿಚಾರವನ್ನು ಬೇರೆಯದೇ ದೃಷ್ಟಿಕೋನದಲ್ಲಿ ನೋಡುತ್ತಾರೆ ಮತ್ತು ಅವರ ಅಭಿಪ್ರಾಯದಲ್ಲಿ ಕಾಶ್ಮೀರವು ಭಾರತದ್ದೇ ಅವಿಭಾಜ್ಯ ಭೂಪ್ರದೇಶ ಎಂಬ ಅಭಿಪ್ರಾಯ ಮೂಡಬಹುದು ಎಂದು ಖುರೇಷಿ ಅವರು ಅಭಿಪ್ರಾಯಪಟ್ಟರು.
ಖವಾರ್ ಖುರೇಷಿ ಅವರು ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು.