Advertisement

ವಕೀಲರಿಗೆ ಆದರ್ಶ ವ್ಯಕ್ತಿತ್ವ ಅಗತ್ಯ: ನ್ಯಾ|ವಿಶ್ವನಾಥ ಶೆಟಿ

05:23 PM Aug 20, 2017 | |

ತೀರ್ಥಹಳ್ಳಿ: ಕಾನೂನಿನ ಮೂಲಕ ಸಮಾಜಕ್ಕೆ ಒಳ್ಳೆಯದಾಗುವಂತೆ ಕಾರ್ಯ ನಿರ್ವಹಿಸಿದ ಶ್ರೇಷ್ಟ ನ್ಯಾಯಮೂರ್ತಿ ರಾಮಾ ಜೋಯ್ಸ ದೇಶ ಕಂಡ ಶ್ರೇಷ್ಟ ನ್ಯಾಯಾಧೀಶರ ಸಾಲಿನಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ತಮ್ಮ ಬರವಣಿಗೆಯ ಮೂಲಕ ಸಮಾಜಕ್ಕೆ ಜ್ಞಾನದ ಸಂಪತ್ತನ್ನು ನೀಡಿದ ಮೇದಾವಿ ವ್ಯಕ್ತಿಯಾಗಿದ್ದಾರೆ ಎಂದು
ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಹೇಳಿದರು. ಪಟ್ಟಣದ ಗೋಪಾಲಗೌಡ ರಂಗ ಮಂದಿರದಲ್ಲಿ ಪಪಂ ತೀರ್ಥಹಳ್ಳಿ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಪುರಂದರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ಮಾಜಿ ರಾಜ್ಯಪಾಲ
ವಿಶ್ರಾಂತ ನ್ಯಾಯಮೂರ್ತಿ ರಾಮಾ ಜೋಯಿಸ್‌ ಅವರ ಪೌರ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಮಾಜೋಯಿಸ್‌ ಅವರು ಬದುಕಿನಲ್ಲಿ ವ್ಯಕ್ತಿನಿಷ್ಠೆಯನ್ನು ಬೆಳೆಸಿಕೊಂಡವರು. ನ್ಯಾಯದ ಹಾದಿಯಲ್ಲಿ ನ್ಯಾಯ ನೀಡುವ ಮುಖಾಂತರ ಶ್ರೇಷ್ಠ ವಕೀಲರಾಗಿ ಧರ್ಮ ಹಾಗೂ ಕರ್ತವ್ಯ ತೋರಿದವರು. ಒಬ್ಬ ಆದರ್ಶ ವ್ಯಕ್ತಿತ್ವದ ವಕೀಲರಾಗಿ ನನಗೆ ಪ್ರೇರಣೆ ನೀಡಿದವರು ಎಂದರು. ತಮ್ಮ ಬರವಣಿಗೆಯ ಮೂಲಕ ರಾಜಧರ್ಮವನ್ನು ಬಿಂಬಿಸುತ್ತ ತಮ್ಮ ಕಾರ್ಯದಲ್ಲೂ ಧರ್ಮನಿಷ್ಠೆ ಹಾಗೂ ಕರ್ತವ್ಯನಿಷ್ಠೆ ತೋರಿದ ವಿಶಿಷ್ಟ ವ್ಯಕ್ತಿತ್ವದವರಾಗಿದ್ದರು. ರಾಮಾಜೋಯಿಸ್‌ ಸಮಾಜಕ್ಕೆ ನೀಡಿದ ಕಾಣಿಕೆ ಯುವ ಪೀಳಿಗೆಗೆ ಉತ್ತೇಜನವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದಲ್ಲಿ ಬೆಳೆಯುವ ಅವಕಾಶ ಪ್ರತಿಯೊಬ್ಬರಿಗೂ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸಭಾಪತಿ, ಮಾಜಿ ಸಚಿವ ಬಿ.ಎಲ್‌. ಶಂಕರ್‌, ಆಧ್ಯಾತ್ಮ, ಧರ್ಮ ಹಾಗೂ ರಾಜಧರ್ಮದ ಬಗ್ಗೆ ಸಾಹಿತ್ಯ ಕೃಷಿಯ ಹಾದಿಯಲ್ಲಿ ನಡೆದುಬಂದ ರಾಮಾಜೋಯಿಸ್‌ ನಂಬಿದ ಸಿದ್ಧಾಂತಗಳಿಗೆ ಬದ್ಧರಾಗಿ ನಡೆದವರು. ರಾಜ್ಯ ಕಂಡ ಅತ್ಯುತ್ತಮ ನ್ಯಾಯಾಧೀಶರ ಒಬ್ಬರಾಗಿದ್ದ ಅವರು ರಾಜಧರ್ಮದ ಹಾದಿಯಲ್ಲಿ ನೈತಿಕತೆಯ ನೆಲೆದಲ್ಲಿ ಬದುಕಿ ನ್ಯಾಯಾಂಗಕ್ಕೆ ಹೆಚ್ಚಿನ ಗೌರವ ಮೂಡುವಂತೆ ಮಾಡಿದ ವ್ಯಕ್ತಿಯಾಗಿದ್ದರು ಎಂದರು. ಪೌರ ಸನ್ಮಾನ ಹಾಗೂ ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಶ್ರಾಂತಿ ನ್ಯಾಯಮೂರ್ತಿ ರಾಮಾ ಜೋಯಿಸ್‌, ಇಂದಿನ ದಿನಗಳಲ್ಲಿ ಸನ್ಮಾನ, ಪುರಸ್ಕಾರಗಳು ವ್ಯವಹಾರದ ಕೆಲಸವಾಗಿದೆ. ಹುಟ್ಟೂರಿನಲ್ಲಿ ನನಗೆ ಮಾಡಿದ ಸನ್ಮಾನ ಹೆಮ್ಮೆ ಎನಿಸುತ್ತದೆ. ಧರ್ಮಕ್ಕಿಂತ ಹೆಚ್ಚಿನ ಸ್ಥಾನಮಾನ ಸಂಸ್ಕೃತಿಯಲ್ಲಿಂದಿಲ್ಲ. ವಕೀಲರೆಂದರೆ ಕೇವಲ ಹಣ ಮಾಡುವ ವೃತ್ತಿಯಲ್ಲ. ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸೇವೆ ಮಾಡುವ ವೃತ್ತಿ ಎಂದು ಭಾವಿಸಿ ಕಾರ್ಯ ನಿರ್ವಹಿಸಬೇಕು ಎಂದರು. ಮನುಷ್ಯನಾಗಿ ಹುಟ್ಟಿದ ಮೇಲೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಜೀವನವೇ ಧರ್ಮ. ಧರ್ಮವೆಂದರೆ ಜೀವನದ ಗುಣಗಳು. 1947ರಲ್ಲಿ ನಾನು ಎಸ್ಸೆಸ್ಸೆಲ್ಸಿ ಪೂರೈಸಿದ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ದುಸ್ತರವಾಗಿತ್ತು. ಬದುಕು ಸಾಗಿಸಲು ಆಗುಂಬೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದೆ. ನಂತರ ನಾನು ಹಂತ ಹಂತವಾಗಿ ಬದುಕಿನ ಸವಾಲುಗಳನ್ನು ಸ್ವೀಕರಿಸುತ್ತಾ ಸಾಗಿದೆ. ನಾನು ವಕೀಲನಾಗಿದ್ದಾಗ ಶಿಕ್ಷಣವೆಂಬುದು ಮೂಲಭೂತ ಹಕ್ಕು ಆಗಿರಬೇಕೆಂಬುದರ ಬಗ್ಗೆ ನ್ಯಾಯಾಲಯದಲ್ಲಿ 5 ಮಂದಿ ನ್ಯಾಯಾಧೀಶರ ಮುಂದೆ ಮಾಡಿದ ವಾದದಲ್ಲಿ ಜಯ ದಕ್ಕಿಸಿಕೊಂಡು ಸಂವಿಧಾನದಲ್ಲಿ ಸೇರಿಸುವಂತೆ ಮಾಡಿದ ಪ್ರಯತ್ನ ನಾನೆಂದೂ ಮರೆಯಲಾರೆ. ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಶಿಕ್ಷಣದಲ್ಲಿ ಅಸಾಮಾನತೆ ತೆಗೆಯಬೇಕು. ನಾನು ವಕೀಲನಾಗಿದ್ದಾಗ ತುಮಕೂರಿನಲ್ಲಿ 150 ಜನ ಹರಿಜನರಿಗೆ ನಿವೇಶನದ ವಿಚಾರದಲ್ಲಿ ಆದ ಅನ್ಯಾಯದ ಪ್ರಕರಣದಲ್ಲಿ ಅವರಿಗೆ ದೊರಕಿಸಿಕೊಟ್ಟ ಜಯ ವೃತ್ತಿಯಲ್ಲಿ ಮಾಡಿದ ಅಪಾರ ಸಾಧನೆ ಎಂದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಮಾತನಾಡಿ, ಅರ್ಹತೆ, ಯೋಗ್ಯತೆ, ಶುದ್ಧ ಚಾರಿತ್ರ್ಯ ಹಾಗೂ ದಕ್ಷತೆಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಕಾಲ ಬರಲಿದೆ. ಕೋಮು ಸೌಹಾರ್ದ, ಸಂವಿಧಾನದ ಬಗ್ಗೆ ಚಾಣಕ್ಯ ನೀತಿಯ ಬಗ್ಗೆ ತಮ್ಮ ಪುಸ್ತಕಗಳ ಮೂಲಕ ಅದ್ಭುತ ಲೇಖನಗಳನ್ನು ಬರೆದ ರಾಮಾ ಜೋಯಿಸ್‌ ಸಮಾಜಕ್ಕೆ ಅಪಾರ ಕಾಣಿಕೆ ನೀಡಿದ್ದಾರೆ. ಸಮಾಜದ ಕಣ್ಣು ತೆರೆಸುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಬಗ್ಗೆ ಅವರ ಪುಸ್ತಕದಲ್ಲಿ ಬೆಳಕು ಚೆಲ್ಲಿದ್ದಾರೆ. ಒಬ್ಬ ನ್ಯಾಯಮೂರ್ತಿ ನೈತಿಕತೆ ಹಾಗೂ ಮಾನವೀಯತೆ ಮೌಲ್ಯಗಳೊಂದಿಗೆ ಹೇಗೆ ಬದುಕಬೇಕು ಎಂಬುದಕ್ಕೆ ರಾಮಾಜೋಯಿಸ್‌ ಒಬ್ಬ ಮರೆಯಲಾಗದ ವ್ಯಕ್ತಿಯಾಗಿದ್ದಾರೆ ಎಂದರು. ಶಾಸಕ ಕಿಮ್ಮನೆ ರತ್ನಾಕರ್‌ ಅಧ್ಯಕ್ಷತೆ ಸಮಾರಂಭದ ವಹಿಸಿದ್ದರು. ಮಾಜಿ ಶಾಸಕ ಆರಗ ಜ್ಞಾನೇಂದ್ರ, ಕೋಣಂದೂರು ಲಿಂಗಪ್ಪ, ಪಪಂ ಅಧ್ಯಕ್ಷ ಸಂದೇಶ್‌ ಜವಳಿ, ಉಪಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ಪಪಂ ಅಧಿಕಾರಿ ನಟರಾಜ್‌ ಇದ್ದರು. ಇಮಿಯಾಜ್‌ ಪ್ರಾರ್ಥಿಸಿದರು. ಸಂದೇಶ್‌ ಜವಳಿ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next