Advertisement

ಮಠಗಳ ನಿಯಂತ್ರಣಕ್ಕೆ ಕಾನೂನು: ಮನವಿ ನಿರಾಕರಿಸಿದ ಹೈಕೋರ್ಟ್‌

09:35 PM Sep 29, 2022 | Team Udayavani |

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠವೂ ಸೇರಿ ರಾಜ್ಯದಲ್ಲಿರುವ ಎಲ್ಲ ಮಠಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂಬ ಮನವಿ ಪುರಸ್ಕರಿಸಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಮಠಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ರಾಮಚಂದ್ರಾಪುರ ಮಠದ ಪೀಠಾಧಿಪತಿ ಸ್ಥಾನದಿಂದ ರಾಘವೇಶ್ವರ ಭಾರತೀ ಶ್ರೀಗಳನ್ನು ಕೆಳಗಿಳಿಸಿ, ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಹಾಗೂ ಮಠದ ಆಡಳಿತದಲ್ಲಿ ನಡೆದಿದೆ ಎನ್ನಲಾದ ಅವ್ಯಹವಾರಗಳ ಕುರಿತು ತನಿಖೆಗೆ ಆದೇಶಿಸಬೇಕು ಎಂದು ಕೋರಿ ಎದುರ್ಕಳ ಈಶ್ವರ ಭಟ್‌, ಎ.ಕೆ. ಜೈಕೃಷ್ಣ ಸೇರಿ 6 ಮಂದಿ 2016ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್‌ ಈ ನಿಲುವು ವ್ಯಕ್ತಪಡಿಸಿದೆ.

ಪ್ರಕರಣ ಸಂಬಂಧ ಸುದೀರ್ಘ‌ ವಾದ-ಪ್ರತಿವಾದ ಆಲಿಸಿ ಸೆ.22ರಂದು ಕಾಯ್ದಿರಿಸಿದ್ದ ತೀರ್ಪನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್‌ ಆರಾಧೆ ಮತ್ತು ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.

ಮಠಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ಮನವಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ, ಒಂದೊಮ್ಮೆ ಯಾರಾದರೂ ಬಾಧಿತರಾದರೆ ಅಥವಾ ತೊಂದರೆಗೊಳಗಾಗಿದ್ದರೆ ಅಂಥವರು ಸಿವಿಲ್‌ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಹೈಕೋರ್ಟ್‌ ಹೇಳಿದ್ದು? 
ಮಠಗಳ ನಿಯಂತ್ರಣಕ್ಕೆ ಕಾನೂನು ರೂಪಿಸಲು ಶಾಸನಸಭೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಆದರೆ, ಸಂವಿಧಾನದ ಪರಿಚ್ಛೇದ 226ರ ಅಡಿಯಲ್ಲಿ ನ್ಯಾಯಾಲಯ ತನ್ನ ಪರಮಾಧಿಕಾರವನ್ನು ಬಳಸಿ, ಮಠಗಳ ಆಡಳಿತ ನಿಯಂತ್ರಣಕ್ಕಾಗಿ ಕಾನೂನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ. ಮಠಗಳು ಹಾಗೂ ಅವುಗಳಿಗೆ ಹೊಂದಿಕೊಂಡ ದೇವಾಲಯಗಳು ಮಠಾಧಿಪತಿಗಳಿಂದ ನಿರ್ವಹಿಸಲ್ಪಡುವುದರಿಂದ ಶಾಸನಸಭೆ ಅವುಗಳನ್ನು ಕರ್ನಾಟಕ ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಕಾಯ್ದೆ-1997ರ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಆದಾಗ್ಯೂ ಅರ್ಜಿದಾರರಿಗೆ ಪರ್ಯಾಯ ಪರಿಹಾರ ಪಡೆಯಲು ಸಿಪಿಸಿ ಸೆಕ್ಷನ್‌ 92ರ ಅಡಿಯಲ್ಲಿ ಅವಕಾಶವಿದೆ. ಆದ್ದರಿಂದ, ಈ ಅರ್ಜಿ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next