Advertisement

ಅರ್ಜಿ ಸಲ್ಲಿಸಿದ ತಕ್ಷಣ ವಿದ್ಯುತ್‌ ನೀಡಲು ಕಾನೂನು; ಮುಖ್ಯಮಂತ್ರಿ ಬೊಮ್ಮಾಯಿ

01:05 PM Jul 21, 2022 | Team Udayavani |

ಬೆಂಗಳೂರು: ಈ ಹಿಂದೆ ವಿದ್ಯುತ್‌ ಸಂಪರ್ಕಕ್ಕಾಗಿ ವಿವಿಧ ದಾಖಲೆ ಕೊಡಬೇಕಿತ್ತು. ಮುಂದೆ ವಿದ್ಯುತ್‌ ಸಂಪರ್ಕ ಸುಲಲಿತವಾಗಿ ಸಿಗುವಂತೆ ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಮಿಲ್ಲರ್‌ ರಸ್ತೆಯ ಅಂಬೇಡ್ಕರ್‌ ಭವನದಲ್ಲಿ ಬುಧವಾರ ಆಯೋಜಿಸಲಾದ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾರೂ ವಿದ್ಯುತ್‌ ಸಂಪರ್ಕದಿಂದ ವಂಚಿತರಾಗ ಬಾರದು ಎಂಬ ಉದ್ದೇಶದಿಂದಾಗಿ ಯಾವುದೇ ಪ್ರದೇಶದಲ್ಲಿ ಮನೆ ಹೊಂದಿದ್ದರೂ, ವಿದ್ಯುತ್‌ಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ಸಂಪರ್ಕ ನೀಡುವ ಕಾನೂನು ರೂಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಪವರ್‌ ಸ್ಟೋರೇಜ್‌ ಯೋಜನೆ: ಪವರ್‌ ಸ್ಟೋರೇಜ್‌ ಯೋಜನೆಯನ್ನು ಈಗಾಗಲೇ ಶರಾವತಿಯಲ್ಲಿ ಆರಂಭಿಸಲು ಅನುಮತಿ ಕೊಟ್ಟಿದ್ದು, ಖಾಸಗಿಯವರಿಗೂ ಸಹ ಈ ವ್ಯವಸ್ಥೆಗಾಗಿ ಯೋಜನೆ ರೂಪಿಸಲು ಹೊಸ ನೀತಿ ತರಲಾಗುವುದು. ಇದರಿಂದ ವಿದ್ಯುತ್‌ ಸಂಗ್ರಹಿಸಲು ಸಹಕಾರಿಯಾಗುತ್ತದೆ. ಗ್ಲೋಬಲ್‌ ಎನರ್ಜಿ ವಿಭಾಗದಲ್ಲಿ ಹೊಸತಾದ ತಂತ್ರಜ್ಞಾನಗಳನ್ನು ರಾಜ್ಯದಲ್ಲೇ ಮೊದಲು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಪ್ರಸ್ತುತ ನಾವು 30 ಸಾವಿರ ಮೆಗಾವ್ಯಾಟ್‌ ಉತ್ಪಾದಿಸುತ್ತಿದ್ದು, ಸೌರ ವಿದ್ಯುತ್‌ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಹೀಗಾಗಿ, ವಿದ್ಯುತ್‌ ವಲಯದಲ್ಲಿ ಸ್ವಾವಲಂಬಿಯಾಗಿದ್ದೇವೆ ಎಂದು ಹೇಳಿದರು.

75 ಯೂನಿಟ್ಸ್‌ ಉಚಿತ: ಬಿಪಿಎಲ್‌ ಕಾರ್ಡ್‌ ಹೊಂದಿರುವ ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಶೇ.75 ಯೂನಿಟ್ಸ್‌ ಉಚಿತ ವಿದ್ಯುತ್‌ ಕೊಡಲು ಸರ್ಕಾರ ತೀರ್ಮಾನಿಸಿ ಆದೇಶಿಸಿದ್ದು ಬರುವ ತಿಂಗಳಿನಿಂದ ಜಾರಿಗೆ ಬರಲಿದೆ. ಜತೆಗೆ ರೈತರಿಗೆ ಹಾಗೂ ಕಾಫಿ ಬೆಳೆಗಾರರಿಗೂ 10 ಎಚ್‌.ಪಿವರೆಗೂ ಉಚಿತ ವಿದ್ಯುತ್‌ ಕೊಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಪ್ರತಿ ವರ್ಷ 14 ಸಾವಿರ ಕೋಟಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.

Advertisement

ಇಂಧನ ಸಚಿವ ವಿ.ಸುನಿಲ್‌ಕುಮಾರ್‌ ಮಾತನಾಡಿ, ವಿದ್ಯುತ್‌ಗೆ ಬೇಡಿಕೆಯೂ ಬಹಳ ದೊಡ್ಡ ಪ್ರಮಾಣದಲ್ಲಿದೆ. ಬೇಡಿಕೆಗೆ ತಕ್ಕಂತೆ ನಿಗಮದ ಕಡೆಯಿಂದ ಉತ್ಪಾದನೆ ಹೆಚ್ಚಿಸುತ್ತಿದ್ದೇವೆ. ಹಸಿರು ಇಂಧನ ಇನ್ನಷ್ಟು ಉತ್ಪಾದಿಸಬೇಕೆಂಬ ಕಾರಣಕ್ಕೆ ಹೈಬ್ರೆಡ್‌ ಪಾರ್ಕ್‌ ನಿರ್ಮಿಸಲು ಕಲ್ಪನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ. ಶರಾವತಿಯಲ್ಲಿ ವಿದ್ಯುತ್‌ ಸಂಗ್ರಹಿಸುವ ಸ್ಟೋರೇಜ್‌ ನಿರ್ಣಯವನ್ನು ತೆಗೆದುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್‌ ನಾಯಕ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್‌ ಸೇರಿದಂತೆ ಮತ್ತಿತರರು ಉಪ ಸ್ಥಿತರಿದ್ದರು.

ಪವರ್‌ ಪಾಲಿಟಿಕ್ಸ್‌ ಮತ್ತು ಪೀಪಲ್‌ ಪಾಲಿಟಿಕ್ಸ್‌
ಪವರ್‌ ಪಾಲಿಟಿಕ್ಸ್‌ ಮತ್ತು ಪೀಪಲ್‌ ಪಾಲಿಟಿಕ್ಸ್‌ ಎಂಬ ಎರಡು ಆಯ್ಕೆಗಳು ನಮ್ಮ ಮುಂದಿದೆ. ಅಧಿಕಾರಿದಲ್ಲಿರುವುದು ಒಂದು ರಾಜಕೀಯವಾದರೆ, ಅದೇ ಅಧಿಕಾರವನ್ನು ಜನರ ಪರವಾಗಿ ಬಳಸಿದರೆ ಅದು ಪೀಪಲ್‌ ಪಾಲಿಟಿಕ್ಸ್‌ ಆಗುತ್ತದೆ. ಜನ ಸಾಮಾನ್ಯರು ಶ್ರೀಮಂತರಿದ್ದರೆ ಸರ್ಕಾರಕ್ಕೆ ತೆರಿಗೆ ಬರುತ್ತದೆ. ಸರ್ಕಾರ ಮಾತ್ರ ಶ್ರೀಮಂತವಿದ್ದರೆ ಪ್ರಯೋಜನವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next