ಕೋವಿಡ್ ಸಾಂಕ್ರಾಮಿಕ ರೋಗ ವ್ಯಾಪಕಗೊಳ್ಳುತ್ತಿದ್ದ ನಡುವೆಯೂ ಇತ್ತೀಚೆಗೆ ಅಮೆಜಾನ್ ಪ್ರೈಮ್‌ನಲ್ಲಿ “ಲಾ’ ಎಂಬ ಕನ್ನಡ ಸಿನೆಮಾ ತೆರೆಕಂಡಿತು. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆಯಿಂದ ನಿರ್ಮಾಣಗೊಂಡ “ಲಾ’ ಸಿನೆಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಗೊಂಡ ಕನ್ನಡದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನೆಮಾದ ನಾಯಕಿ ರಾಗಿಣಿ ಪ್ರಜ್ವಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
“ಲಾ’ ಹೆಸರೇ ಹೇಳುವಂತೆ ಇದು ಹೆಣ್ಣೊಬ್ಬಳ ಕಾನೂನು ಹೋರಾಟದ ಸಿನೆಮಾ. ಸಹಜವಾಗಿ ಇತರ ಸಿನೆಮಾಗಳ ಹಾಗೇ ರಾಜಕಾರಣಿಗಳ ಮಕ್ಕಳು ಯಾವ ರೀತಿಯಾಗಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ. ಮತ್ತು ಅದರಿಂದ ತಪ್ಪಿಸಿಕೊಳ್ಳಲು ಮಾಡುವ ಮತ್ತಷ್ಟು ತಪ್ಪುಗಳನ್ನು ಈ ಸಿನೆಮಾದಲ್ಲಿ ತೋರಿಸಲಾಗಿದೆ. ಸತ್ಯಕ್ಕಾಗಿ ನಡೆಯುವ ಹೋರಾಟ ಕೊನೆಗೆ ನ್ಯಾಯವನ್ನು ದೊರೆಸಿಕೊಳ್ಳುವ ರೋಚಕ ಹೋರಾಟವನ್ನು ಈ ಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ.
ಸಮಾಜದಲ್ಲಿ ಇಂದಿಗೂ ಬಗೆಹರಿಯದ ಸಮಸ್ಯೆಯಾಗಿ ಗಂಭೀರವಾದ ಸಮಸ್ಯೆಯೊಂದರ ಮೇಲೆ ಈ ಸಿನೆಮಾದ ಕಥೆಯೂ ಬೆಳಕು ಚೆಲ್ಲಿದೆ. ಎಲ್ಲರೂ ನೋಡಲೇಬೇಕಾದ ಸಿನೆಮಾಗಳ ಪಟ್ಟಿಯಲ್ಲಿ ಈ ಸಿನೆಮಾವನ್ನು ಸೇರಿಸಿದರೆ ತಪ್ಪೇನಿಲ್ಲ. ಬದುಕಿನಲ್ಲಿ ದಿನವಿಡೀ ಸಂಘರ್ಷಕ್ಕಿಳಿಯುವ ನಮಗೆ ಈ ಸಿನೆಮಾ ಹೋರಾಟದ ಬದುಕಿಗೆ ಸ್ಫೂರ್ತಿಯಾಗಬಲ್ಲದು.
ಸಿನೆಮಾ ಪ್ರಾರಂಭದಿಂದಲೂ ಕಾನೂನು ಹೋರಾಟವನ್ನೇ ಬಿಂಬಿಸುತ್ತದೆ. ಅತ್ಯಾಚಾರಕ್ಕೊಳಗಾದ ಓರ್ವ ನೊಂದ ಹೆಣ್ಣನ್ನು ಕಾನೂನಿನ ಕಟ್ಟಲೆಯಲ್ಲಿ ಯಾವ ರೀತಿಯಾಗಿ ತಾತ್ಸಾರ ಮಾಡಲಾಗುತ್ತದೆ. ಆಕೆ ಯಾವ ರೀತಿಯಾಗಿ ಸಂಘರ್ಷಿಕ್ಕಿಳಿದು ಅದನ್ನು ಎದುರಿಸುತ್ತಾಳೆ ಎಂಬುದು ಈ ಸಿನೆಮಾದ ಪ್ರಧಾನ ಕಥೆಯಾಗಿದೆ.
ಚಿತ್ರದ ನಾಯಕಿ ನಂದಿನಿ. ಕಾನೂನು ಪದವೀಧರೆ. ಆಕೆಯ ಮೇಲೆ ದುಷ್ಟರು ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ. ಇದರ ವಿರುದ್ಧ ಸಿಡಿದೆದ್ದು ಕಾನೂನು ಹೋರಾಟಕ್ಕಿಯುತ್ತಾಳೆ. ಆರಂಭದಲ್ಲಿ ತನಗೆ ವ್ಯವಸ್ಥೆಯಿಂದ ಸರಿಯಾದ ನ್ಯಾಯ ದೊರಕದಿರುವಾಗ ಸ್ವತಃ ಅವಳೇ ಕಾನೂನಿನ ಕೋಟ್ ಧರಿಸಿ ಹೋರಾಟಕ್ಕಿಳಿಯುತ್ತಾಳೆ. ಮುಂದೆ ದುಷ್ಟರಿಗೆ ಶಿಕ್ಷೆ ವಿಧಿಸಲು ಆಕೆಯ ಹೋರಾಟದ ಪರಿ, ಸಾಕ್ಷ್ಯ ಸಂಗ್ರಹಿಸುವ ಪರಿ ನಿಜಕ್ಕೂ ಕುತೂಹಲ ಮತ್ತು ರೋಚಕ ಎನಿಸುತ್ತದೆ. ಸಾಕ್ಷ್ಯ ಸಂಗ್ರಹಿಸುವ ಘಟನೆ ಮತ್ತು ದೃಶ್ಯಗಳನ್ನು ಕೇವಲ ಕಾನೂನು ವಿದ್ಯಾರ್ಥಿ ಮಾತ್ರವಲ್ಲ ಪ್ರತಿಯೋರ್ವರು ನೋಡಲೇಬೇಕಾಗುತ್ತದೆ. ಅಷ್ಟು ರೋಚಕವಾಗಿದೆೆ.
ಚಿತ್ರದ ತಾಂತ್ರಿಕತೆಯನ್ನು ಸರಿಯಾಗಿ ಪಯೋಗಿಸಿಕೊಂಡಿರುವುದು ಶ್ಲಾಘನೀಯವಾದುದು. ಇದು ರಾಗಿಣಿ ಪ್ರಜ್ವಲ್ ಅವರ ಮೊದಲ ಸಿನೆಮಾವಾಗಿದ್ದು, ನಾಯಕಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಘು ಸಮರ್ಥ್ ನಿರ್ದೇಶನದಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡದ ಹೆಸರಾಂತ ನಟರಾದ ಮುಖ್ಯಮಂತ್ರಿ ಚಂದ್ರು, ಅಚ್ಯುತ ಕುಮಾರ್, ಅವಿನಾಶ್, ಮಂಡ್ಯ ರಮೇಶ್, ನಟಿ ಸುಧಾರಾಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಿರುತೆರೆ ನಟನಟಿಯರು ಈ ಸಿನೆಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸ್ವಾದ ಎನ್ನುವಂತಿದೆ.
ಕೀರ್ತನಾ ವಿ. ಭಟ್, ಆಳ್ವಾಸ್ ಕಾಲೇಜು