ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಅಸ್ವಸ್ಥಗೊಂಡಿದ್ದು, ವಿದ್ಯಾರ್ಥಿಗಳ ಬೇಡಿಕೆಗೆ ವಿಶ್ವವಿದ್ಯಾಲಯ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರೊಂದಿಗೆ ಜಟಾಪಟಿ ನಡೆಸಿದ ಘಟನೆ ರವಿವಾರ ನಡೆಯಿತು.
ಆಫ್‌ಲೈನ್ ಪರೀಕ್ಷೆ ರದ್ದತಿಗೆ ಒತ್ತಾಯ, ತರಗತಿಗಳ ಆರಂಭ ವಿಳಂಬ ವಿರೋಧಿಸಿ ವಿವಿಧ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಕಳೆದ ಎಂಟು ದಿನಗಳಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಉಪವಾಸ ಸತ್ಯಾಗ್ರಹದಿಂದ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ವಿಶ್ವವಿದ್ಯಾಲಯದಿಂದ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕುಲಪತಿಗಳನ್ನು ಕರೆಸುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೊಲೀಸರು ಕುಲಪತಿಗಳನ್ನು ಸ್ಥಳಕ್ಕೆ ಕರೆಸಲಾಗುವುದು ಎಂದು ಭರವಸೆ ನೀಡಿದರು. ಕುಲಪತಿಗಳು ಕಚೇರಿಗೆ ಆಗಮಿಸಿದ್ದಾರೆಂದು ಸುಮಾರು 70 ಕ್ಕೂ ಹೆಚ್ಚಿದ್ದ ವಿದ್ಯಾರ್ಥಿಗಳು ವಿವಿಗೆ ಮುತ್ತಿಗೆ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಗೇಟು ದಾಟದಂತೆ ಪೊಲೀಸರು ತಡೆಯುವ ಯತ್ನ ಮಾಡಿದರು. ಆದರೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಒಳಪ್ರವೇಶ ಮಾಡದಂತೆ ತಡೆ ಹಿಡಿದಿದ್ದ ಗೇಟನ್ನು ನೂಕಿ ಒಳಪ್ರವೇಶ ಮಾಡಿದರು.
ನೂಕಾಟದಲ್ಲಿ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡ ಘಟನೆ ನಡೆಯಿತು. ಕುಲಪತಿ ಕಚೇರಿ ಮುಂಭಾಗದಲ್ಲಿ ಘೋಷಣೆ ಕೂಗುತ್ತಾ ಬಾಗಿಲು ಬಡೆದರು. ಪೊಲೀಸರು ಮಧ್ಯಪ್ರವೇಶಿಸಿ ಎಷ್ಟೇ ಸಮಾಧಾನ ಪಡಿಸಿದರೂ ವಿದ್ಯಾರ್ಥಿಗಳು ಹಿಂಜರಿಯಲಿಲ್ಲ. ಪೊಲೀಸರು ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆಂದು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
ಸ್ಥಳಕ್ಕಾಗಮಿಸಿದ ಡಿಸಿಪಿ ಸಾಹಿಲ್ ಬಾಗ್ಲಾ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ನಿಮ್ಮ ಪ್ರತಿಭಟನೆಗೆ ಪೊಲೀಸರು ಸಂಪೂರ್ಣ ಸಹಕಾರ ನೀಡಲಿದ್ದಾರೆ. ವಿನಾಕಾರಣ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಪ್ರತಿಭಟನಾ ಸ್ಥಳ ಬಿಟ್ಟು ಮತ್ತೂಂದೆಡೆ ಧರಣಿ ಮಾಡುವುದು ಸರಿಯಲ್ಲ. ನಿಮ್ಮ ಬೇಡಿಕೆ ಕುರಿತು ಕುಲಪತಿ ಅವರನ್ನು ಕರೆಯಿಸಿ ಮಾತನಾಡಿಸುವುದಾಗಿ ಭರವಸೆ ನೀಡಿದರು. ಇದರಿಂದ ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಆಗಮಿಸಿದ ಕುಲಪತಿ ಪ್ರೊ|ಈಶ್ವರ ಭಟ್ಟ ಅವರು ಆನ್ ಲೈನ್ ಪರೀಕ್ಷೆ ನಡೆಸಲು ಅವಕಾಶವಿಲ್ಲ. ಆಫ್‌ಲೈನ್ ಪರೀಕ್ಷೆ ಅನಿವಾರ್ಯ ಎಂದು ಹೊರಟು ಹೋದರು.ಇದನ್ನು ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ಕುಲಪತಿಗಳ ವಿರುದ್ಧ ಘೋಷಣೆ ಕೂಗಿದರು.
ವಿಶ್ವವಿದ್ಯಾಲಯ ಆವರಣದಲ್ಲಿ ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ, ವಿಶ್ವವಿದ್ಯಾಲಯದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿಲ್ಲ. ಹೀಗಾಗಿ ಬೆಳಗಾವಿ ಸುವರ್ಣ ಸೌಧಕ್ಕೆ ತೆರಳಿ ಸಂಬಂಧಿಸಿದವರ ಗಮನ ಸೆಳೆಯುವ ನಿರ್ಧಾರ ಕೈಗೊಂಡು ಕೆಲ ವಿದ್ಯಾರ್ಥಿಗಳು ಅಲ್ಲಿಗೆ ತೆರಳಿದರು. ಉಪವಾಸ ಸತ್ಯಾಗ್ರಹದಿಂದ ರವಿವಾರ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿ ರುದ್ರೇಶ ಅಸ್ಪತ್ರೆಯಿಂದ ಬಿಡುಗಡೆಗೊಂಡು ಪುನಃ ಪ್ರತಿಭಟನೆಯಲ್ಲಿ
ಪಾಲ್ಗೊಂಡರು.
ಸೋಮವಾರ ಮಹಾಂತೇಶ ಚಿಕ್ಕಣ್ಣವರ ಎನ್ನುವ ವಿದ್ಯಾರ್ಥಿ ಅಸ್ವಸ್ಥಗೊಳ್ಳುತ್ತಿದ್ದಂತೆ ಪೊಲೀಸ್ ವಾಹನ ಮೂಲಕ ಕಿಮ್ಸ್‌ಗೆ ದಾಖಲಿಸಲಾಯಿತು. ವಿದ್ಯಾರ್ಥಿ ಅಸ್ವಸ್ಥಗೊಂಡ ಸಂದರ್ಭದಲ್ಲಿ ಅಂಬ್ಯುಲೆನ್ಸ್ ದೊರೆಯದ ಹಿನ್ನೆಲೆಯಲ್ಲಿ ಪ್ರತಿಭಟನೆ ಪೂರ್ಣಗೊಳ್ಳುವವರೆಗೂ ಸ್ಥಳದಲ್ಲೇ ಆಂಬ್ಯುಲೆನ್ಸ್ ಇರುವ ವ್ಯವಸ್ಥೆ ಮಾಡಲಾಯಿತು. ಪ್ರಮುಖರಾದ ಚಂದ್ರನಾಯ್ಕ, ರಮೇಶ ನಾಯ್ಕ, ಬಳಿಗನೂರು ಕೊಟ್ರೇಶ, ಡಿ.ಎಚ್.ಅರುಣಕುಮಾರ, ಬಿ.ಶಿವರಾಜ, ಎ.ಎಸ್.ಪೀರಜಾದೆ ಇನ್ನಿತರಿದ್ದರು.