Advertisement

Law: ಮೃತ ಪುತ್ರನ ಆಸ್ತಿಯಲ್ಲಿ ತಾಯಿಗೂ ಪಾಲು: ಹೈಕೋರ್ಟ್‌ ಮಹತ್ವದ ಆದೇಶ

10:06 PM Oct 27, 2023 | Team Udayavani |

ಬೆಂಗಳೂರು: ಮೃತ ಪುತ್ರನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಗೂ ಪಾಲಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ ಮೃತ ಪುತ್ರನ ಪಾಲಿನ ಪಿತ್ರಾರ್ಜಿತ ಆಸ್ತಿಗೆ ತಾಯಿಯೂ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ. ಹಾಗಾಗಿ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಅರ್ಹರಾಗುತ್ತಾರೆ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

Advertisement

ಮೃತಪಟ್ಟಿರುವ ಪುತ್ರನ ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಹಕ್ಕು ಹೊಂದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಟಿ.ಎನ್‌. ಸುಶೀಲಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರಿದ್ದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಮೃತ ಸಂತೋಷ್‌ ಪತ್ನಿ ಪರ ವಕೀಲರು, ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿಕೊಂಡರು. ಮೇಲ್ಮನವಿದಾರರಾದ ಸುಶೀಲಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಹಂಚಿಕೆ ಮಾಡುವ ವೇಳೆಗಾಗಲೇ ಅವರ ಮಗ ನಿಧನರಾಗಿದ್ದರು. ಹಾಗಾಗಿ ಸೆಷನ್ಸ್‌ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡುವ ಅಗತ್ಯವಿಲ್ಲ, ಸೆಷನ್ಸ್‌ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು.

ಈ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠ, ಮೂಲ ಅರ್ಜಿಯಲ್ಲಿ ಸುಶೀಲಮ್ಮ ಅವರನ್ನು ಒಮ್ಮೆ ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಪುತ್ರ ಸಂತೋಷ್‌ ಅವರ ಮೊದಲನೇ ವರ್ಗದ ವಾರಸುದಾರರು ಎನಿಸಲಿದ್ಧಾರೆ. ಸಂತೋಷ್‌ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ. ಹೀಗಾಗಿ, ಸಂತೋಷ್‌ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಸುಶೀಲಮ್ಮ ಅರ್ಹರಾಗಿದ್ಧಾರೆ. ಹಾಗಾಗಿ ಸೆಷನ್ಸ್‌ ನ್ಯಾಯಾಲಯದ ನಡೆ ದೋಷಪೂರಿತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಅಲ್ಲದೆ ಸೆಷನ್ಸ್‌ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿ ಮೃತ ಪುತ್ರ ಸಂತೋಷ್‌ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿ ಸುಶೀಲಮ್ಮ ಅವರಿಗೂ ಪಾಲು ಇದೆ. ಪತಿ ಇದ್ದರೂ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ ಎಂದು ಹೇಳಿದ ನ್ಯಾಯಪೀಠ ಸುಶೀಲಮ್ಮ ಅವರ ಮನವಿಯನ್ನು ಪುರಸ್ಕರಿಸಿತು.

Advertisement

ಹಿಂದೂ ಉತ್ತರಾಧಿಕಾರಿ ಕಾಯ್ದೆಯಂತೆ, ಅರ್ಜಿದಾರರಿಗೆ ಪತಿ ಇದ್ದರೂ ಕೂಡ ಮೃತ ಪುತ್ರನ ಆಸ್ತಿಗೆ ಅವರೇ ಮೊದಲ ವಾರಸುದಾರರು. ಇದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ. ತಾಯಿ ಕೂಡ ಆಸ್ತಿಯಲ್ಲಿ ಸಮಾನ ಪಾಲುದಾರರಾಗಿದ್ಧಾರೆ ಎಂದು ಕೋರ್ಟ್‌ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next