Advertisement

ಆಸ್ತಿ ಜಪ್ತಿ ತಡೆಗಾಗಿ ಕಾನೂನು; ಶೀಘ್ರ ಅನುಷ್ಠಾನಕ್ಕೆ ಬರಲಿ

10:43 PM Nov 06, 2022 | Team Udayavani |

“ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆ ಮಾತಿನಂತೆ “ಸಾಲ ಮಾಡದ ರೈತನಿಲ್ಲ’ ಅನ್ನುವಂಥ ಸ್ಥಿತಿ ಇದೆ. ಹೀಗಿದ್ದಾಗ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸದೆ ಸುಸ್ತಿದಾರರಾದರೆ ಅವರ ಆಸ್ತಿಯನ್ನು ಜಪ್ತಿ ಮಾಡದಂತೆ ನಿರ್ಬಂಧ ವಿಧಿಸಲು ಕಾನೂನು ಜಾರಿಗೆ ತರಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಘೋಷಣೆ ರೈತ ಸಮುದಾಯಕ್ಕೊಂದು ಭರವಸೆ ಸಿಕ್ಕಂತಾಗಿದೆ.

Advertisement

ಮಾಡಿದ ಸಾಲ ಮರು ಪಾವತಿಸಬೇಕು ಸರಿ. ಆದರೆ ಈ ಮರುಪಾವತಿ ಹೆಸರಲ್ಲಿ ಬ್ಯಾಂಕ್‌ಗಳು ರೈತರಿಗೆ ಕೊಡುವ ಕಿರುಕುಳ ಅಷ್ಟಿಷ್ಟಲ್ಲ. ಕೋಟಿ- ಕೋಟಿ ಸಾಲ ಬಾಕಿ ಉಳಿಸಿಕೊಂಡ “ಪ್ರಭಾವಿ’ ಸುಸ್ತಿದಾರರಿಗೆ ಅನ್ವಯ ವಾಗದ ನಿಯಮಗಳು ಸಾವಿರ, ಲಕ್ಷಗಳಲ್ಲಿ ಸಾಲ ಬಾಕಿ ಉಳಿಸಿಕೊಂಡ ಬಡ ರೈತರಿಗೆ ಮಾತ್ರ ಅನ್ವಯವಾಗುತ್ತವೆ ಎಂಬಂತಾಗಿದೆ. ಬ್ಯಾಂಕ್‌ನ ಕಿರುಕುಳ, ಒತ್ತಡ ಹಾಗೂ ನೋಟಿಸ್‌ಗಳಿಂದಾಗಿ ಮಾನಕ್ಕೆ ಅಂಜಿ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇತ್ತೀಚಿಗೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಲಾದ ಉತ್ತರದ ಪ್ರಕಾರ ಕಳೆದು ಐದು ವರ್ಷಗಳಲ್ಲಿ ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗಳಲ್ಲಿ ಸಾಲ ಮತ್ತು ಬ್ಯಾಂಕ್‌ನ ಕಿರುಕುಳದ್ದೆ ಸಿಂಹಪಾಲು ಇದೆ. ರೈತರನ್ನು ಸಾಲದ ಶೂಲಕ್ಕೆ ದೂಡುವುದನ್ನು ತಪ್ಪಿಸುವುದು ಸರಕಾರದ ಪ್ರಥಮ ಆದ್ಯತೆ ಆಗಬೇಕು ಎಂಬುದು ನಿಜ. ಆದರೆ ಕೃಷಿ ಮತ್ತು ವೈಯಕ್ತಿಕ ಉದ್ದೇಶಗಳಿಗೆ ರೈತರು ಸಾಲಕ್ಕೆ ಮೊರೆ ಹೋಗಲೇಬೇಕಾದ ವ್ಯವಸ್ಥೆಯಲ್ಲಿಂದು ನಾವಿದ್ದೇವೆ.

ಹಾಗಾಗಿ ಸಾಲ ಮಾಡಿದ ರೈತರು ಆತ್ಮಹತ್ಯೆಗೆ ಶರಣಾಗಿ ಅವರ ಕುಟುಂಬಗಳು ಬೀದಿಪಾಲಾಗುವುದನ್ನು ತಡೆಗಟ್ಟಬೇಕಾದರೆ ಭರವಸೆ, ಆಶ್ವಾಸನೆಗಳನ್ನು ಮೀರಿ ಸರಕಾರ ಕಾನೂನಾತ್ಮಕ ದೃಷ್ಟಿಯಲ್ಲಿ ಯೋಚಿ ಸಬೇಕಿದೆ. ಈಗ ಅಂತಹ ಹೆಜ್ಜೆಯೊಂದನ್ನು ಇಡಲು ಸಿಎಂ ಬೊಮ್ಮಾಯಿ ಮುಂದಾಗಿರುವುದು ಸ್ವಾಗತಾರ್ಹ. ಅವರ ಈ ನಿರ್ಧಾರದ ಹಿಂದೆ ದೂರಗಾಮಿ ಪರಿಣಾಮ ಮತ್ತು ಫ‌ಲಿತಾಂಶಗಳು ಮೂಡಿಬರಲಿ.

ಮುಖ್ಯಮಂತ್ರಿಯವರ ಈ ಘೋಷಣೆಯು ಕೃಷಿ ಕುರಿತು ಅವರಲ್ಲಿನ ಭವಿಷ್ಯದ ಆತಂಕವನ್ನು ಮುಂದಿಟ್ಟಿದೆ. ದಿನದಿಂದ ದಿನಕ್ಕೆ ಕೃಷಿ ಚಟುವಟಿಕೆ ಕಡಿಮೆಯಾಗುತ್ತಿದೆ. ಅದರ ಜತೆಗೆ ರೈತರ ಆದಾಯದಲ್ಲೂ ಕುಸಿತ ಕಾಣುತ್ತಿದೆ. ಅದಕ್ಕಾಗಿಯೇ ಕೇಂದ್ರ ಸರಕಾರ ಕೃಷಿ ಸಮ್ಮಾನ್‌ ಯೊಜನೆ ಜಾರಿಗೊಳಿಸಿದ್ದು, ರಾಜ್ಯ ಸರಕಾರವೂ ಅದಕ್ಕೆ ನೆರವಾಗುತ್ತಿದೆ. ಕೊರೊನಾ, ಬೆಳ ನಷ್ಟ ಸೇರಿ ಇನ್ನಿತರ ಕಾರಣಗಳಿಂದಾಗಿ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸಲು ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳು ರೈತರ ಆಸ್ತಿ ಜಪ್ತಿ ಮಾಡಲು ಮುಂದಾಗುತ್ತಿವೆ. ಇದರಿಂದ ರೈತರನ್ನು ಕಾಪಾಡಲು ಬೆಳೆ ಸಾಲ ಸೇರಿ ಇನ್ನಿತರ ಕಾರಣಕ್ಕಾಗಿ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರುಪಾವತಿಸದೆ ಸುಸ್ತಿದಾರರಾದರೂ ಅವರ ಆಸ್ತಿಯನ್ನು ಜಪ್ತಿ ಮಾಡಬಾರದು ಎಂಬ ಮಾತನ್ನು ಮುಖ್ಯಮಂತ್ರಿ ಹೇಳಿದ್ದಾರೆ.

ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ತರುವುದಾಗಿ ಸಿಎಂ ಘೋಷಿಸಿದ್ದು ಈ ಕೂಡಲೇ ಅಧಿಕಾರಿಗಳಿಗೆ ಈ ಬಗ್ಗೆ ಕಾರ್ಯೋನ್ಮುಖರಾಗುವಂತೆ ಸೂಚಿಸಬೇಕು. ಈ ವರ್ಷದ ಆರಂಭದಿಂದಲೂ ರಾಜ್ಯದಲ್ಲಿ ಮಳೆ ಕಾಟ ಹೆಚ್ಚಾಗಿದ್ದು, ರೈತಾಪಿ ವರ್ಗವಂತೂ ತೀರಾ ಕಷ್ಟ ಅನುಭವಿಸುತ್ತಿದೆ. ಇಂಥ ಸಂದರ್ಭದಲ್ಲಿ ಆಸ್ತಿ ಜಪ್ತಿ ಮಾಡದಿರುವ ಕ್ರಮದಿಂದ ರೈತರಿಗೆ ಕಿಂಚಿತ್ತಾದರೂ ಸಮಾಧಾನ ಸಿಗುವುದು ಸುಳ್ಳಲ್ಲ. ಘೋಷಣೆ ಜಾರಿ ಬಗ್ಗೆ ಸರಕಾರ ಗಮನಹರಿಸಲಿ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next