Advertisement

ಥಳಿತ ತಡೆಗೆ ಕಾನೂನು?

06:00 AM Jul 20, 2018 | Team Udayavani |

ನವದೆಹಲಿ: ವದಂತಿಗಳನ್ನು ನಂಬಿ ಸಾಮೂಹಿಕ ಥಳಿತ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗಿದೆ. ಅದಕ್ಕೆ ಪೂರಕವಾಗಿ ಆರಂಭಿಕ ಚರ್ಚೆಗಳು ಸರ್ಕಾರದ ಮಟ್ಟದಲ್ಲಿ ಶುರುವಾಗಿದೆ ಎಂದು ಮೂಲಗಳು ದೃಢಪಡಿಸಿವೆ.ಅದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ “ಸಾಮೂಹಿಕವಾಗಿ ಥಳಿಸಿ ಹತ್ಯೆ’ ಯನ್ನು ದಂಡನೀಯ ಅಪರಾಧ ಎಂದು ಉಲ್ಲೇಖೀಸಲು ಚಿಂತನೆ ನಡೆಸಲಾಗುತ್ತಿದೆ. 

Advertisement

ಜತೆಗೆ ರಾಜ್ಯಗಳ ಮಟ್ಟದಲ್ಲಿಯೂ ಮಾದರಿ ಕಾನೂನು ಜಾರಿಗೊಳಿಸುವ ಅವಕಾಶವನ್ನು ಪರಿಶೀಲಿಸಲಾಗುತ್ತಿದೆ. ಇದೆಲ್ಲವೂ ತೀರಾ ಪ್ರಾಥಮಿಕ ಹಂತದಲ್ಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿ ಹೇಳಿದ್ದಾರೆ. ಇದರ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಫೇಕ್‌ ನ್ಯೂಸ್‌, ವದಂತಿಗಳ ತಡೆಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಸಾಮೂಹಿಕವಾಗಿ ಥಳಿತದ ಬಗ್ಗೆ ಸಂಸತ್‌ನಲ್ಲಿ ವಿಶೇಷ ಕಾನೂನು ರಚನೆಯಾಗಬೇಕು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಸೂಚನೆ ಹಿನ್ನೆಲೆಯಲ್ಲಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

ಲೋಕಸಭೆಯಲ್ಲಿ ಕೋಲಾಹಲ: ಇದಕ್ಕೂ ಮುನ್ನ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವದಂತಿಗಳನ್ನು ನಂಬಿ ಸಾಮೂಹಿಕವಾಗಿ ಥಳಿಸಿ ಹತ್ಯೆ ಮಾಡಿದ ಘಟನೆಗಳನ್ನು ಖಂಡಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಇಂಥ ವಿಚಾರಗಳನ್ನು ರಾಜ್ಯ ಸರ್ಕಾರಗಳೇ ಕಠಿಣವಾಗಿ ನಿಭಾಯಿಸಬೇಕು ಎಂದು ಲೋಕಸಭೆಯಲ್ಲಿ ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದರು. ವದಂತಿ ನಂಬಿ ಥಳಿಸಿ ಕೊಂದು ಹಾಕಿದ ಘಟನೆಗಳನ್ನು ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋಪಾಲ್‌ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದರು. ಜತೆಗೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ವಿರುದ್ಧ ನಡೆದ ಹಲ್ಲೆಯನ್ನೂ ಪ್ರಸ್ತಾಪ ಮಾಡಿದ್ದರು.  

ಅದಕ್ಕೆ ಉತ್ತರವಾಗಿ ಮಾತನಾಡಿದ್ದ ಸಚಿವ ರಾಜನಾಥ್‌ ಸಿಂಗ್‌, ಇದೊಂದು ಆಘಾತಕಾರಿ ವಿಚಾರ. ದೃಢಪಡದ ಸುದ್ದಿ ಮತ್ತು ವದಂತಿಗಳಿಂದ ಇಂಥ ಘಟನೆಗಳು ನಡೆದಿವೆ ಎಂದರು. ಮುಖ್ಯಮಂತ್ರಿಗಳಿಗೆ ಇಂಥ ಘಟನೆಗಳ ವಿರುದ್ಧ ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾಗಿ ತಿಳಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು.ಅಂತಿಮವಾಗಿ ಗೃಹ ಸಚಿವರ ಉತ್ತರ ತೃಪ್ತಿ ತರದ್ದರಿಂದ ಕಾಂಗ್ರೆಸ್‌ ಸಂಸದರು ಸದನದಿಂದ ಹೊರ ನಡೆದಿದ್ದರು. 

ಆರ್‌ಟಿಐ ವಿಧೇಯಕ ಮುಂದೂಡಿಕೆ: ಮಾಹಿತಿ ಹಕ್ಕು ಕಾಯ್ದೆ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಸರ್ಕಾರ ಮಣಿದಿದೆ. ಹೀಗಾಗಿ, ರಾಜ್ಯಸಭೆಯಲ್ಲಿ ಅದನ್ನು ಮಂಡಿಸದೆ ಇರಲು ನಿರ್ಧರಿಸಿದೆ. ಸರ್ಕಾರ ವಿಧೇಯಕ ಮಂಡಿಸಿ ಅದನ್ನು ಆಯ್ಕೆ ಸಮಿತಿಗೆ ವಹಿಸಲು ನಿರ್ಧರಿಸಿತ್ತು. ಸರ್ಕಾರದ ನಿಲುವು ಪ್ರಶ್ನಿಸಿ ರಾಹುಲ್‌ ಟ್ವೀಟ್‌ ಕೂಡ ಮಾಡಿದ್ದರು.

Advertisement

ಸಮಿತಿ ರಚನೆ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಯುಜಿಸಿ ಸಮಿತಿ ರಚಿಸಲಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ. 

ಆರ್ಥಿಕ ಅಪರಾಧಿಗಳ ವಿಧೇಯಕಕ್ಕೆ ಒಪ್ಪಿಗೆ
ದೇಶಭ್ರಷ್ಟ ಆರ್ಥಿಕ ಆರೋಪಿಗಳ ವಿಧೇಯಕಕ್ಕೆ ಲೋಕಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರ ನೀಡಲಾಗಿದೆ. ಅದರ ಬಗ್ಗೆ ಒಟ್ಟು ಎರಡು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ವಿಜಯ ಮಲ್ಯ ಸೇರಿದಂತೆ ಹಲವು ಮಂದಿ ದೇಶಬಿಟ್ಟು ಪರಾರಿಯಾದ ಬಳಿಕ ಸರ್ಕಾರ ಇಂಥ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಪ್ರತಿಪಕ್ಷಗಳು  ಆರೋಪಿಸಿವೆ. ಅದಕ್ಕೆ ಉತ್ತರಿಸಿದ ಕೇಂದ್ರ ವಿತ್ತ ಸಚಿವ ಯುಪಿಎ ಸರ್ಕಾರದ ಅವಧಿಯಲ್ಲಿ ಏಕೆ ಇಂಥ ಕಾನೂನು ಜಾರಿ ಮಾಡಲಿಲ್ಲ ಎಂದು ತಿರುಗೇಟು ನೀಡಿದರು. ವಿಧೇಯಕದ ಪ್ರಕಾರ ದೇಶಬಿಟ್ಟು ಪರಾರಿಯಾದ ಆರ್ಥಿಕ ಅಪರಾಧಿಗಳ ಆಸ್ತಿ ಮುಟ್ಟುಗೋಲು ಹಾಕಿಗೊಳ್ಳಲು ಸರ್ಕಾರಕ್ಕೆ ಅಧಿಕಾರವನ್ನು ನೀಡಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವ ಜನಿಕರ ಖಾಸಗಿತನದ ಮೇಲೆ ಹಸ್ತಕ್ಷೇಪ ಮಾಡುವ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲವೆಂದು ಲೋಕಸಭೆಗೆ ತಿಳಿಸಲಾಗಿದೆ. ಸರ್ಕಾರದ ಪ್ರಸ್ತಾವಿತ ಸೋಶಿಯಲ್‌ ಮೀಡಿಯಾ ಹಬ್‌ ರಚನೆಯಲ್ಲಿ ಅಂಥ ಪ್ರಸ್ತಾಪವೇ ಇಲ್ಲ ಎಂದು ಕೇಂದ್ರ ವಾರ್ತಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಉತ್ತರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next