Advertisement

ಕಾನೂನು ಉಲ್ಲಂಘನೆ ಚಳವಳಿ ಎಚ್ಚರಿಕೆ

10:51 PM Sep 24, 2019 | Lakshmi GovindaRaju |

ಬೆಳಗಾವಿ: “ರಾಜ್ಯದಲ್ಲಿ ಭೀಕರ ನೆರೆಯಿಂದ ಅಪಾರ ನಷ್ಟವಾಗಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೆರವಿಗೆ ಧಾವಿಸಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ಆರಂಭವಾಗಿದೆ. ಇದಕ್ಕೂ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಕಾನೂನು ಉಲ್ಲಂಘನೆ ಚಳವಳಿ ಮಾಡಬೇಕಾಗುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Advertisement

ನೆರೆ ಸಂತ್ರಸ್ತರ ಸಮಸ್ಯೆ ಆಲಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಂಪೂರ್ಣ ನಿರ್ಲಕ್ಷ ಖಂಡಿಸಿ ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ, ವಿಜಯಪುರ, ರಾಯಚೂರು, ಬೆಂಗಳೂರು, ಕಲಬುರಗಿ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ಚಳವಳಿ ನಡೆಸಲಾಗುವುದು. ಅಗತ್ಯಬಿದ್ದರೆ ದೆಹಲಿಯಲ್ಲೂ ಹೋರಾಟ ಮಾಡುತ್ತೇವೆ ಎಂದರು.

ಈ ಹೋರಾಟ ಈಗ ಆರಂಭ ಮಾತ್ರ. ಸರಕಾರ ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ರಾಜ್ಯದ ಜನರು ನಿಮಗೆ ಪಾಠ ಕಲಿಸುತ್ತಾರೆ. ಕಾಟಾಚಾರದ ಸಮೀಕ್ಷೆ ಮಾಡುವುದು, ಕಣ್ಣೀರು ಹಾಕುವುದು ಹಾಗೂ ಅನುಕಂಪ ತೋರಿಸುವುದನ್ನು ಬಿಟ್ಟು ತಕ್ಷಣ ಸಂತ್ರಸ್ತರ ನೆರವಿಗೆ ಧಾವಿಸಬೇಕು. ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ತಮ್ಮ ಭಾಷಣದುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ವಾಗ್ಧಾಳಿ ನಡೆಸಿದ ಸಿದ್ದರಾಮಯ್ಯ, ನೆರೆ ಹಾವಳಿಯಿಂದ 22 ಜಿಲ್ಲೆಗಳ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಬೇಕಾದ ಪ್ರಧಾನಿ ಮೋದಿ ಇಲ್ಲಿಯ ಜನರನ್ನು ಮರೆತು ಅಮೆರಿಕದಲ್ಲಿ ಡೋನಾಲ್ಡ್‌ ಟ್ರಂಪ್‌ ಪರ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೂಂದಿಲ್ಲ ಎಂದು ಹೇಳಿದರು.

ಎಮ್ಮೆ ಚರ್ಮವೇ?: ಪ್ರವಾಹ ಪೀಡಿತ ಪ್ರದೇಶಗಳ ಜನರ ನೋವಿಗೆ ಮೊಸಳೆೆ ಕಣ್ಣೀರು ಹಾಕುವ ಪ್ರಧಾನಿ ಮೋದಿ ನ್ಯೂಯಾರ್ಕ್‌ನಲ್ಲಿ “ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎನ್ನುತ್ತಾರೆ. ಕರ್ನಾಟಕದಲ್ಲಿ ಸುಮಾರು 20 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. 88 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಅನಾಹುತಗಳು ಆಗಿದ್ದರೂ ರಾಜ್ಯದಲ್ಲಿ ಎಲ್ಲವೂ ಸರಿಯಿದೆ. ಏನೂ ಆಗಿಲ್ಲ ಎನ್ನುವಂತೆ ಸುಮ್ಮನಿದ್ದಾರೆ. ನಿಮ್ಮದು ದಪ್ಪ ಚರ್ಮವೇ ಅಥವಾ ಎಮ್ಮೆ ಚರ್ಮವೇ ಎಂದು ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

Advertisement

ಮನುಷ್ಯತ್ವ ಇಲ್ಲ: ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಬಂದು ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿ ಹೋದರು. ಇಷ್ಟಾದರೂ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇವರಿಗೆ ಮನುಷ್ಯತ್ವ, ಮಾನ ಮರ್ಯಾದೆ ಇದೆಯೇ? ಬಡವರ ಕಷ್ಟಕ್ಕೆ ಸ್ಪಂದಿಸಲು ಆಗದಿದ್ದರೆ ಅಧಿಕಾರದಲ್ಲಿ ಏಕೆ ಇರಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೂ ಮುನ್ನ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕಾಂಗ್ರೆಸ್‌ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅನಂತರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರ ಅನುಪಸ್ಥಿತಿ ಎದ್ದುಕಂಡಿತು.

ಬೆಳಗಾವಿಯಲ್ಲಿ ಅಧಿವೇಶನ: ಸಿಎಂಗೆ ಧೈರ್ಯವಿಲ್ಲ
ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನ ಸೌಧ ದಲ್ಲಿ ಅಧಿವೇಶನ ನಡೆಸುವ ಧೈರ್ಯ ಮುಖ್ಯ ಮಂತ್ರಿ ಯಡಿಯೂರಪ್ಪಗೆ ಇಲ್ಲ. ಅಧಿವೇಶನ ಕರೆದರೆ ಜನ ಎಲ್ಲಿ ಮುತ್ತಿಗೆ ಹಾಕುತ್ತಾರೆ ಎಂಬ ಭಯದಲ್ಲಿ ಇಲ್ಲಿ ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನೆರೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ಇಂತಹ ಸ್ಥಿತಿಯಲ್ಲಿ ಪ್ರಧಾನಿ ಬಳಿ ಹೋಗಿ ಪರಿಹಾರ ಕೇಳಲು ಯಡಿಯೂರಪ್ಪ ಅವರಿಗೆ ಆಗುತ್ತಿಲ್ಲ. ಹೆದರಿ ಅವರ ಬಳಿ ಬಾಯಿ ಬಿಡುತ್ತಿಲ್ಲ ಎಂದು ಟೀಕಿಸಿದರು. ಯಡಿಯೂರಪ್ಪ ಅವರಿಗೆ ಜನರ ಕಷ್ಟಕ್ಕಿಂತ ಅನರ್ಹ ಶಾಸಕರ ಚಿಂತೆ ಬಹಳ ಕಾಡುತ್ತಿದೆ. ಸರಕಾರ ಏನಾಗುತ್ತದೆ ಎಂಬ ಭಯದಲ್ಲಿ ಅವರು ಪದೇಪದೆ ದೆಹಲಿಗೆ ಓಡುತ್ತಿದ್ದಾರೆ ವಿನಃ ಕೇಂದ್ರದಿಂದ ನೆರೆ ಪರಿಹಾರ ಕೇಳುವ ಧೈರ್ಯ ಮಾಡುತ್ತಿಲ್ಲ ಎಂದು ಲೇವಡಿ ಮಾಡಿದರು.

ಇನ್ನೆರಡು ದಿನದಲ್ಲಿ ಕೈ ಅಭ್ಯರ್ಥಿ ಪಟ್ಟಿ ಬಿಡುಗಡೆ
ಹುಬ್ಬಳ್ಳಿ: ಇನ್ನೆರಡು ದಿನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಆ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 15 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕಪಾಠ ಕಲಿಸಲಾಗುವುದು ಎಂದು ಹೇಳಿದರು.

ರಾಜ್ಯದಿಂದ 25 ಜನ ಬಿಜೆಪಿ ಸಂಸದರಿದ್ದಾರೆ. ಪ್ರಭಾವಿ ಸಚಿವರೂ ಇದ್ದಾರೆ. ಆದರೆ ಯಾರಿಂದಲೂ ಕೇಂದ್ರದಿಂದ ಸಹಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಇಲ್ಲಿ ಪ್ರಹ್ಲಾದ ಜೋಶಿ ಹಾಗೂ ಸುರೇಶ ಅಂಗಡಿ ಸಚಿವರಾಗಿದ್ದಾರೆ. ಹೀಗಿದ್ದರೂ ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಇಬ್ಬರಿಗೂ ನಾಚಿಕೆ ಇಲ್ಲ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ ನೋಡಲು ಬೆಂಗಳೂರಿಗೆ ಬರುತ್ತಾರೆ. ಆದರೆ ನೆರೆ ಸಂತ್ರಸ್ತರ ಕಷ್ಟ ಕೇಳಲು ಬರುವುದಿಲ್ಲ. ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಲಿಲ್ಲ. ರಷ್ಯಾ ಪ್ರಧಾನಿಗೆ ಸಾಲ ನೀಡುವ ಮೋದಿ ಅವರಿಗೆ ಕರ್ನಾಟಕದ ಸಂತ್ರಸ್ತರಿಗೆ ಪರಿಹಾರ ಕೊಡಲು ಏಕೆ ಆಗುತ್ತಿಲ್ಲ?
-ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next