ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ವಯಂ ನಿವೃತ್ತಿ ಪಡೆದ ಪೊಲೀಸ್ ಅಧಿಕಾರಿ ಕೆಂಪಯ್ಯರನ್ನು ಗೃಹ ಇಲಾಖೆಯ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳುವ ಮೂಲಕ ರಾಜ್ಯ ಪೊಲೀಸ್ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಗೃಹ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಕೆಂಪಯ್ಯರ ಸಲಹೆಗಳಿಗೆ ಮಣೆ ಹಾಕುತ್ತಾ ಪೊಲೀಸ್ ಹಿರಿಯ ಅಧಿಕಾರಿಗಳ ಆಡಳಿತದಲ್ಲಿ ಮೂಗು ತೂರಿಸಲಾಗುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಮುಸ್ಲಿಂ ಎಂಬ ಪದ ಬಳಸಲು ಅವರಿಗೆ ಭಯವಿದೆ, ಮುಸ್ಲಿಂ ಪದ ಬಳಸಿದರೆ ಎಲ್ಲಿ ಅವರ ಮತಗಳನ್ನು ಕಳೆದುಕೊಳ್ಳುತ್ತೇವೆಯೋ ಎಂಬ ಭೀತಿ ಸಿದ್ದರಾಮಯ್ಯರನ್ನು ಕಾಡುತ್ತಿದೆ.
ಹೀಗಾಗಿ ಅವರು ಮತಬ್ಯಾಂಕ್ ರಾಜಕಾರಣಕ್ಕೆ ಜೋತು ಬಿದ್ದು ಅವರನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ ಎಂದು ಕಿಡಿ ಕಾರಿದರು. ಕರಾವಳಿ ಪ್ರದೇಶದಲ್ಲಿ ಕೋಮು ಗಲಭೆಗಳಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿಲ್ಲ, ರಾಜ್ಯಸರ್ಕಾರದ ತುಷ್ಟೀಕರಣದಿಂದ ಹೀಗಾಗುತ್ತಿದೆ ಎಂದರು.
ತಾಯಿ ಚಾಮುಂಡೇಶ್ವರಿ ದುಷ್ಟ ಶಕ್ತಿಗಳನ್ನು ದಮನ ಮಾಡುವ ಶಕ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೀಡಲಿ, ಯಾವುದೇ ಮುಲಾಜಿಲ್ಲದೆ ಅಪರಾಧಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಅವರು ಕ್ರಮಕ್ಕೆ ಮುಂದಾಗಲಿ ಎಂದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅವ್ಯವಹಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೈಲಿನಲ್ಲಿ ಅಪರಾಧಿಗಳಿಗೆ ಶಿಕ್ಷೆ ಇರಬೇಕೇ ಹೊರತು ರಾಜಾತಿಥ್ಯವಲ್ಲ ಎಂದರು.