Advertisement

Mangaluru ಭ್ರೂಣಹತ್ಯೆಗೆ ಕಡಿವಾಣಕ್ಕಾಗಿ ಕಾನೂನು ತಿದ್ದುಪಡಿಗೆ ಚಿಂತನೆ

12:02 AM Dec 03, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ನಡೆದಿರುವ ಭ್ರೂಣ ಹತ್ಯೆ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ಸಿಐಡಿ ಮೂಲಕ ತನಿಖೆ ನಡೆಯುತ್ತಿದೆ. ಇಂತಹ ಪ್ರಕರಣ ಮತ್ತೆ ಎದುರಾಗದಂತೆ ಮಾಡಲು ಕಾನೂನಿನಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಣ್ಣು ಶಿಶುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಣ್ಣು- ಗಂಡು ಲಿಂಗಾನುಪಾತದಲ್ಲಿ ಏರುಪೇರು ಆಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು. ಹೆಣ್ಣು ಮಗು ಬೇಡ ಎನ್ನುವವರೂ ಸಮಾಜದಲ್ಲಿದ್ದಾರೆ ಎಂಬುದನ್ನು ಕೇಳುವಾಗ ನೋವಾಗುತ್ತಿದೆ. ಇದನ್ನು ನಿಲ್ಲಿಸಲು ಮತ್ತು ತಪ್ಪಿತಸ್ಥರಿಗೆ ಕಠಿನ ಶಿಕ್ಷೆಯಾಗಲೇ ಬೇಕು ಎಂದರು.

ಘಟನೆ ಹಿನ್ನೆಲೆಯಲ್ಲಿ ಮದ್ದೂರು, ಮಂಡ್ಯ, ಮೈಸೂರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆಯಲಾಗಿದೆ. ಒಂದೇ ಜಿಲ್ಲೆಯ ಪೊಲೀಸರಿಂದ ತನಿಖೆ ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಗೃಹ ಸಚಿವರ ಜತೆ ಚರ್ಚಿಸಿದ ಬಳಿಕ ಸಮಗ್ರ ತನಿಖೆಗಾಗಿ ಸಿಐಡಿ ತನಿಖೆಗೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.

ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ಡಾ| ಸತೀಶ್‌ ಬಗ್ಗೆ ಸಾಕಷ್ಟು ದೂರು ಕೇಳಿಬಂದಿದ್ದು, ಪಿರಿಯಾಪಟ್ಟಣದಲ್ಲಿ ಆಯುಷ್‌ ಅಧಿಕಾರಿಯಾಗಿದ್ದರು. ಶಿವಳ್ಳಿಗೆ ಬಂದು ಆಲೋಪತಿ ಔಷಧ ಕೊಡುತ್ತಿದ್ದರು ಎಂದು ಜನ ಹೇಳಿದ್ದರು. ಅವರೇ ಮುಖ್ಯ ಆರೋಪಿ ಎಂಬ ಆರೋಪವೂ ಕೇಳಿ ಬಂದಿತ್ತು. ಆದರೆ ಅವರ ಆತ್ಮಹತ್ಯೆ ಹಾಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದು ಗೊತ್ತಿಲ್ಲ. ಆ ಬಗ್ಗೆ ನಾನೇನೂ ಹೇಳಲಾಗದು. ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next