ಮೊಬೈಲ್ ಫೋನಿಗೆ ಕರೆ ಬಂದಾಗ ಕಿವಿಯ ಬಳಿ ಮೊಬೈಲ್ ಹಿಡಿದೇ ಮಾತಾಡಬೇಕಾದ ಅಥವಾ ಹೆಗಲಿಗೆ ಮೊಬೈಲ್ ಒತ್ತಿಕೊಂಡು ಕತ್ತನ್ನು ವಾಲಿಸಿಕೊಂಡೇ ಮಾತಾಡಬೇಕಾದ ಅವಶ್ಯಕತೆ ಈಗ ಇಲ್ಲ. ವೈರಿನ ಇಯರ್ ಫೋನ್ ಗಳನ್ನು ಕತ್ತಿನ ಸುತ್ತ ಹಾಕಿಕೊಂಡು ಅದರ ಬಟನ್ ಒತ್ತಿ ಕರೆ ಸ್ವೀಕರಿಸುವ ವಿಧಾನ ಈಗ ಹಳೆಯದಾಯ್ತು. ಈಗ ಟ್ರೂ ವಯರ್ ಲೆಸ್ ಇಯರ್ ಬಡ್‍ಗಳ ಕಾಲ. ಎರಡು ಇಯರ್ ಬಡ್‍ಗಳ ಪೈಕಿ ಒಂದನ್ನು ಕಿವಿಯಲ್ಲಿ ಹಾಕಿಕೊಂಡು, ಕರೆ ಬಂದಾಗ ಎರಡು ಬಾರಿ ಟಕ್ ಟಕ್ ಎಂದು ಟಚ್ ಮಾಡಿ ಕರೆ ಸ್ವೀಕರಿಸಿ, ಕೈಯಲ್ಲಿ ಮೊಬೈಲ್ ಹಿಡಿಯದೇ ಫ್ರೀಯಾಗಿ ಮಾತಾಡುವ ಕಾಲ ಇದು. ಒಮ್ಮೆ ಈ ಟಿಡಬ್ಲೂಎಸ್ ಗಳು ರೂಢಿಯಾಗಿಬಿಟ್ಟರೆ ಆಯಿತು, ನಂತರ ಕಿವಿಗೆ ಮೊಬೈಲ್ ಹಿಡಿದು ಮಾತನಾಡುವುದು ರೇಜಿಗೆ ಎನಿಸಿಬಿಡುತ್ತದೆ! ಅಲ್ಲದೇ ಬೇಕೆನಿಸಿದಾಗ ಎರಡೂ ಟಿಡಬ್ಲೂಎಸ್ ಗಳನ್ನು ಹಾಕಿಕೊಂಡು ಹಾಡು ಕೇಳುತ್ತಿದ್ದರೆ ಅದರ ಮಜವೇ ಬೇರೆ!
ಇಂಥ ಟಿಡಬ್ಲೂಎಸ್‍ಗಳು ಈಗ ಒಂದು ಸಾವಿರ ರೂ. ಗಳಿಂದ ಹಿಡಿದು 25 ಸಾವಿರ ರೂ.ಗಳವರೆಗೂ ಇವೆ. ಇವುಗಳಲ್ಲಿ ನಮಗೆ ಬೇಕಾದ ಬಜೆಟ್ ನಲ್ಲಿ ಸೂಕ್ತವಾದುವುಗಳನ್ನು ಆರಿಸಿಕೊಳ್ಳಬಹುದು. ಅತ್ಯಂತ ಕಡಿಮೆ ಬಜೆಟ್ ನಲ್ಲಿ ಟಿಡಬ್ಲೂಎಸ್ ಬೇಕು ಎನ್ನುವವರಿಗಾಗಿ ಲಾವಾ ಕಂಪೆನಿ ಪ್ರೊಬಡ್ಸ್ 21 ಹೊರತಂದಿದೆ. ಇದರ ದರ ಅಮೆಜಾನ್. ಇನ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ 1599 ರೂ. ಇದೆ. ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುತ್ತದೆ.
ಇದು ಮಧ್ಯ ಕಿವಿಯೊಳಗೆ ಕುಳಿತುಕೊಳ್ಳುವಂತೆ ವಿನ್ಯಾಸಗೊಳಿಸಲಾದ ಇಯರ್ ಬಡ್. ಮೂರು ಅಳತೆಗಳ ಇಯರ್ ಟಿಪ್‍ಗಳಿವೆ. ನಿಮ್ಮ ಕಿವಿಯ ಕಿಂಡಿಯೊಳಗೆ ಸರಿಯಾಗಿ ಕುಳಿತುಕೊಳ್ಳುವ ಇಯರ್ ಟಿಪ್ ಹಾಕಿಕೊಂಡು ಬಳಸಬಹುದು. ಇಯರ್ ಬಡ್‍ನ ಕಡ್ಡಿಗಳು (ಸ್ಟೆಮ್) ಕೊಂಚ ಉದ್ದ ಇವೆ. ಈಗ ಬರುತ್ತಿರುವ ಬಡ್ ಗಳಲ್ಲಿ ಹೆಚ್ಚು ಉದ್ದದ ಕಡ್ಡಿಗಳಿರುವುದಿಲ್ಲ. ಇದರ ಕೇಸ್ ಅಂಗೈಯಲ್ಲಿ ಮುಚ್ಚಿಕೊಳ್ಳಬಹುದಾದಷ್ಟು ಪುಟ್ಟದಾಗಿದೆ. ಜೇಬಲ್ಲಿರಿಸಿಕೊಳ್ಳಲು ಸೂಕ್ತವಾಗಿದೆ. ಇದು ಐಪಿಎಕ್ಸ್ 4 ರೇಟಿಂಗ್ ಹೊಂದಿದ್ದು, ನೀರು, ಬೆವರು ನಿರೋಧಕವಾಗಿದೆ. ವಿನ್ಯಾಸದ ಗುಣಮಟ್ಟ ಈ ದರದಲ್ಲಿ ಚೆನ್ನಾಗಿದೆ.
ಇದು 12 ಮಿ.ಮೀ. ಡ್ರೈವರ್ಸ್ ಹೊಂದಿದೆ. ಎರಡೂ ಬಡ್ ಗಳನ್ನು ಹಾಕಿಕೊಂಡು ಹಾಡು ಸಂಗೀತ ಕೇಳಿದಾಗ ಈ ದರಕ್ಕೆ ಉತ್ತಮವಾಗಿಯೇ ಇದೆಯಲ್ಲ ಅನಿಸುತ್ತದೆ. ಇದು ಮೀಡಿಯಂ ಬಾಸ್ ಹೊಂದಿದೆ. ನಿಮ್ಮ ಕಿವಿಯ ನಾಲೆ ಮುಚ್ಚಿಕೊಳ್ಳುವಂತೆ ಇಯರ್ ಟಿಪ್ ಹಾಕಿಕೊಂಡರೆ ಬಾಸ್ ಸಹ ಚೆನ್ನಾಗಿ ಕೇಳಿಬರುತ್ತದೆ. ಧ್ವನಿ ಮತ್ತು ಸಂಗೀತ ವಾದ್ಯಗಳ ಶಬ್ದ ಸ್ಪಷ್ಟವಾಗಿ ಕೇಳಿಬರುತ್ತದೆ. ಒಟ್ಟಾರೆಯಾಗಿ ಹಾಡು ಸಂಗೀತ ಆಲಿಸಲು ಈ ಬಡ್ಸ್ ಈ ದರಪಟ್ಟಿಯಲ್ಲಿ ಉತ್ತಮವಾಗಿಯೇ ಇದೆ ಎಂದೆನಿಸಿತು.
ಸಂಗೀತ ಆಲಿಕೆ ಅಲ್ಲದೇ, ಕರೆ ಮಾಡಲು, ಕರೆ ಸ್ವೀಕರಿಸಲು ಸಹ ಈ ಇಯರ್ ಬಡ್ ಬಳಸಬಹುದು. ಆ ಕಡೆ ಕರೆ ಆಲಿಸುವವರಿಗೆ ಸ್ವಲ್ಪ ಅಸ್ಪಷ್ಟ ಎನಿಸುತ್ತದೆ. ಒಳಾಂಗಣದಲ್ಲಿ ಮಾತನಾಡುವಾಗ ಪರವಾಗಿಲ್ಲ. ಹೊರಾಂಗಣದಲ್ಲಿ, ಗಾಳಿ ಬೀಸುವಿಕೆ ಇದ್ದಾಗ ಆ ಕಡೆ ಕರೆ ಆಲಿಸುವವರಿಗೆ ಮಾತು ಸ್ಪಷ್ಟವಾಗಿ ಕೇಳಿಬರುವುದಿಲ್ಲ. ಈ ದರಪಟ್ಟಿಯಲ್ಲಿ ಅದನ್ನು ನಿರೀಕ್ಷಿಸುವಂತೆಯೂ ಇಲ್ಲ! ಆದರೂ ಮನೆ, ಕಚೇರಿಯೊಳಗೆ ಕುಳಿತು ಮೊಬೈಲ್‍ನಲ್ಲಿ ಮಾತನಾಡಲು ಇದು ಸಾಕು.
ಈ ಇಯರ್ ಬಡ್‍ನ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇದರ ಬ್ಯಾಟರಿ. ಬಡ್‍ನಲ್ಲಿ 60 ಎಂಎಎಚ್ ಬ್ಯಾಟರಿ ಇದ್ದು, ಸುಮಾರು ಆರರಿಂದ ಏಳು ಗಂಟೆ ಕಾಲ ಬಳಸಬಹುದು. ಕೇಸ್ ಮತ್ತು ಬಡ್ಸ್ ನಿಂದ ಒಟ್ಟು ಸುಮಾರು 40 ಗಂಟೆಗಳ ಬ್ಯಾಟರಿ ಬಾಳಿಕೆ ಬರುತ್ತದೆ. ಕೇಸ್ ಅನ್ನು ಚಾರ್ಜ್ ಮಾಡಲು ಟೈಪ್ ಸಿ ಪೋರ್ಟ್ ನೀಡಲಾಗಿದೆ.
ಒಟ್ಟಾರೆ ಒಂದೂವರೆ ಸಾವಿರ ರೂ. ದರಪಟ್ಟಿಯಲ್ಲಿ ಪರಿಗಣಿಸಬಹುದಾದ ಇಯರ್ ಬಡ್ ಲಾವಾ ಪ್ರೊ ಬಡ್ಸ್ 21.
-ಕೆ.ಎಸ್. ಬನಶಂಕರ ಆರಾಧ್ಯ