ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರ ಆರೋಗ್ಯ ಸೇವೆಗೆ ಆರಂಭಿಸಿರುವ ಸಂಚಾರಿ ಆರೋಗ್ಯ ಕ್ಲಿನಿಕ್ ಅತ್ಯಾಧುನಿಕ ಸೌಲಭ್ಯ ಹೊಂದಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ಕಾರ್ಮಿಕರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಹಮ್ಮಿಕೊಂಡಿದ್ದ ಶ್ರಮಿಕ್ ಸಂಜೀವಿನಿ-ಸಂಚಾರಿ ಆರೋಗ್ಯ ಕ್ಲಿನಿಕ್ ಸೇವೆಯ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು. ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗೆ ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಕಟ್ಟಡ ನಿರ್ಮಾಣ ಮತ್ತು
ಇತರೆ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಜೊತೆಗೆ ಅವರಿದ್ದಲ್ಲಿಗೆ ಚಿಕಿತ್ಸಾಲಯವನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಕಟ್ಟಡ ಕಾರ್ಮಿಕರ ಆರೋಗ್ಯ ಕಾಳಜಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಂಚಾರಿ ಆರೋಗ್ಯ ಕ್ಲಿನಿಕ್ ವೈದ್ಯ ಡಾ| ಬಸವಕಿರಣ ಮಾತನಾಡಿ, ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚಾರಿ ಆರೋಗ್ಯ ಕ್ಲಿನಿಕ್ ಸೇವೆ ಒದಗಿಸಲು ಯುನೈಟೆಡ್ ಸೋಶಿಯಲ್ ವೆಲ್‌ಫೇರ್ ಅಸೋಶಿಯೇಷನ್ ಬೆಳಗಾವಿಗೆ ಮಂಜೂರು ಮಾಡಿ ಕಾರ್ಯಾದೇಶ ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರದ ವ್ಯಾಪ್ತಿಯಲ್ಲಿರುವ ಎಲ್ಲ ಆರೋಗ್ಯ ಸೇವೆಗಳು ಸಂಚಾರಿ ಆರೋಗ್ಯ ಕ್ಲಿನಿಕ್ ಮೂಲಕ ಸೇವೆ ನೀಡಲಾಗುವುದು. ಬಿಪಿ, ರಕ್ತ ಪರೀಕ್ಷೆ, ಇಸಿಜಿ ಪರೀಕ್ಷೆ ಹಾಗೂ ಎಲ್ಲ ರೀತಿಯ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸ್ಥಳದಲ್ಲಿಯೇ ಪರೀಕ್ಷೆಗಳನ್ನು ಕೈಗೊಂಡು ವರದಿ ಮತ್ತು ಚಿಕಿತ್ಸೆ ನೀಡಿ ಔಷಧ ವಿತರಿಸಲಾಗುವುದು ಎಂದು ವಿವರಿಸಿದರು.
ಸೋಮವಾರದಿಂದ ಶನಿವಾರದವರೆಗೆ ಸಂಚಾರಿ ಕ್ಲಿನಿಕ್ ಜಿಲ್ಲೆಯಲ್ಲಿ 2 ವರ್ಷಗಳ ಕಾಲ ಭೇಟಿ ನೀಡಲಿದೆ. ಚಿತ್ರದುರ್ಗ ತಾಲೂಕಿನಲ್ಲಿ ಸೋಮವಾರ ಬೆಳಿಗ್ಗೆ ಹೊಸ ಕಲ್ಲಹಳ್ಳಿ, ಹಳೇಕಲ್ಲಹಳ್ಳಿ, ಮಧ್ಯಾಹ್ನ ಲಿಂಗಾವರಹಟ್ಟಿ, ಮಂಗಳವಾರ ಬೆಳಿಗ್ಗೆ ಕಾಸವರಹಟ್ಟಿ, ಮಧ್ಯಾಹ್ನ ಗುಡ್ಡದರಂಗವ್ವನಹಳ್ಳಿ, ಬುಧವಾರ ಬೆಳಿಗ್ಗೆ ಮಲ್ಲಾಪುರ, ದ್ಯಾಮವ್ವನಹಳ್ಳಿ, ಮಧ್ಯಾಹ್ನ ಮದಕರಿಪುರ, ಗುರುವಾರ ಬೆಳಿಗ್ಗೆ ಬಚ್ಚಬೋರನಹಟ್ಟಿ, ಮಧ್ಯಾಹ್ನ ಮಠದಹಟ್ಟಿ, ಕಾವಡಿಗರಹಟ್ಟಿ, ಶುಕ್ರವಾರ ಬೆಳಿಗ್ಗೆ ಇಂಗಳದಾಳ್, ಕ್ಯಾದಿಗೆರೆ, ಮಧ್ಯಾಹ್ನ ದೊಡ್ಡಸಿದ್ದವ್ವನಹಳ್ಳಿ, ಶನಿವಾರ ಬೆಳಿಗ್ಗೆ ಜಾನುಕೊಂಡ, ಸಿದ್ದಾಪುರ, ಮಧ್ಯಾಹ್ನ ದಂಡಿನಕುರುಬರಹಟ್ಟಿ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದರು.
ಕಾರ್ಮಿಕ ನಿರೀಕ್ಷಕ ರಾಜಣ್ಣ, ವಿಷಯ ನಿರ್ವಾಹಕ ತೀರ್ಥಪ್ರಸಾದ್, ತಾಪಂ ಇಒ ಹನುಮಂತಪ್ಪ, ಮಂಜುನಾಥ್, ಮಹಂತೇಶ್, ಶ್ರೀನಾಥ್, ಅಂಬಿಕಾ, ಅಕ್ಷಯ್ ಇತರರು ಇದ್ದರು.
17 ಗ್ರಾಮಗಳ ಕಾರ್ಮಿಕರಿಗೆ ಅನುಕೂಲ
ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನ ಚಿತ್ರದುರ್ಗ ತಾಲೂಕು ವ್ಯಾಪ್ತಿಯ 17 ಗ್ರಾಮಗಳಿಗೆ ಕಾರ್ಮಿಕರು ಇರುವ ಸ್ಥಳಕ್ಕೆ ತೆರಳಿ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರವು ಬದ್ಧವಾಗಿದೆ. ಈ ಕ್ಲಿನಿಕ್ ಆಧುನಿಕ ಸೌಲಭ್ಯಗಳಾದ ಸ್ಟ್ರೆಚ್ಚರ್, ಬೆಡ್, ಆಕ್ಸಿಜನ್ ಪರಿಕರಗಳು, ವ್ಹೀಲ್ ಚೇರ್, ಪ್ರಯೋಗಾಲಯ ಸಲಕರಣೆಗಳು, ಸಿಬ್ಬಂದಿಗೆ ಆಸನದ ವ್ಯವಸ್ಥೆ, ಅವಶ್ಯಕ ವೈದ್ಯಕೀಯ ಪರಿಕರಗಳನ್ನು ಹೊಂದಿದೆ. ಈ ವಾಹನದಲ್ಲಿ ಓರ್ವ ವೈದ್ಯ, ನರ್ಸ್, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಎಎನ್‌ಎಂ, ಚಾಲಕ ಮತ್ತು ಸಹಾಯಕ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.