Advertisement

ಕೊಯಮತ್ತೂರು-ಬೆಂಗಳೂರು ಉದಯ್‌ ಎಕ್ಸ್‌ಪ್ರೆಸ್‌ಗೆ ಚಾಲನೆ

11:57 AM Jun 09, 2018 | |

ಚೆನ್ನೈ: ಕೊಯಮತ್ತೂರು ಮತ್ತು ಬೆಂಗಳೂರು ನಡುವೆ ಸಂಚರಿಸಲಿರುವ ಉದಯ್‌ (ಉತ್ಕೃಷ್ಟ ಡಬಲ್‌ ಡೆಕರ್‌ ಏರ್‌-ಕಂಡೀಷನ್ಡ್ ಯಾತ್ರಿ) ಎಕ್ಸ್‌ಪ್ರೆಸ್‌ ರೈಲಿಗೆ ಶುಕ್ರವಾರ ಕೊಯಮತ್ತೂರಿನಲ್ಲಿ ರೈಲ್ವೆ ಖಾತೆ ಸಹಾಯಕ ಸಚಿವ ರಾಜೇನ್‌ ಗೋಹೆನ್‌ ಚಾಲನೆ ನೀಡಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕದ ನಡುವೆ ನಿತ್ಯ ಪ್ರಯಾಣಿಸುವಂಥವರಿಗೆ ಇದು ಅನುಕೂಲ ಕಲ್ಪಿಸಿದೆ.

Advertisement

ಸಂಪೂರ್ಣ ಹವಾನಿಯಂತ್ರಿತ ರೈಲು ಇದಾಗಿದ್ದು, ಇದೇ ಮೊದಲ ಬಾರಿಗೆ ಆಟೋಮ್ಯಾಟಿಕ್‌ ಫ‌ುಡ್‌ ವೆಂಡಿಂಗ್‌ ಯಂತ್ರವನ್ನು ಅಳವಡಿಸಿರುವ ರೈಲು ಎಂಬ ಖ್ಯಾತಿಗೆ ಉದಯ್‌ ಎಕ್ಸ್‌ಪ್ರೆಸ್‌ ಪಾತ್ರವಾಗಿದೆ. ಈ ರೈಲಿನಲ್ಲಿ 8 ಡಬಲ್‌ ಡೆಕರ್‌ ಬೋಗಿಗಳು ಹಾಗೂ ಎರಡು ಪವರ್‌ ಕಾರ್‌ಗಳಿರಲಿವೆ.

ಈ ಪೈಕಿ ಮೂರು ಬೋಗಿಗಳನ್ನು ಆಧುನೀಕರಣಗೊಳಿಸಿ, ಮಿನಿ-ಡೈನಿಂಗ್‌ ಏರಿಯಾ(ಭೋಜನ ಸ್ಥಳ)ವನ್ನು ನಿರ್ಮಿಸಲಾಗಿದೆ. ಇಲ್ಲಿ ಫ‌ುಡ್‌ ವೆಂಡಿಂಗ್‌ ಯಂತ್ರ ಅಳವಡಿಸಲಾಗಿದ್ದು, ಪ್ರಯಾಣಿಕರು ಕುಳಿತು ಆಹಾರ ಸವಿಯಲು ಕುರ್ಚಿ, ಮೇಜುಗಳೂ ಇರಲಿವೆ.

ಡೈನಿಂಗ್‌ ಏರಿಯಾ ಇಲ್ಲದ 5 ಬೋಗಿಗಳಲ್ಲಿ 120 ಪ್ರಯಾಣಿಕರು ಕುಳಿತುಕೊಳ್ಳಬಹುದು. ಇತರೆ 3 ಬೋಗಿಗಳಲ್ಲಿ 104 ಮಂದಿ ಆಸೀನರಾಗಬಹುದಾಗಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಉದಯ್‌ ಎಕ್ಸ್‌ಪ್ರೆಸ್‌ ಸಂಚರಿಸಲಿದೆ. ವಿಶೇಷವೆಂದರೆ, ಎಲ್ಲ ಬೋಗಿಗಳಲ್ಲೂ ಟಿಕೆಟ್‌ ಪರೀಕ್ಷಕರಾಗಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದಾರೆ. 

ರೈಲಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಗೋಹೆನ್‌, “ಭಾರತೀಯ ರೈಲ್ವೆಯು ದೇಶದ ಆರ್ಥಿಕತೆಯ ಎಂಜಿನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲೂ ದಕ್ಷಿಣ ರೈಲ್ವೆಯ ಕಾರ್ಯಕ್ಷಮತೆ ಶ್ಲಾಘನೀಯ’ ಎಂದು ಹೇಳಿದ್ದಾರೆ. ಜತೆಗೆ, ಪ್ರಸಕ್ತ ವರ್ಷದ ಡಿಸೆಂಬರ್‌ವೊಳಗೆ ದಕ್ಷಿಣ ರೈಲ್ವೆಯ ಎಲ್ಲ 6,269 ಬೋಗಿಗಳಲ್ಲೂ ಬಯೋ-ಟಾಯ್ಲೆಟ್‌ ಸೌಲಭ್ಯ ಅಳವಡಿಸಲಾಗುವುದು ಎಂದಿದ್ದಾರೆ.

Advertisement

2016ರ ರೈಲ್ವೆ ಬಜೆಟ್‌ನಲ್ಲಿ ಉದಯ್‌ ಎಕ್ಸ್‌ಪ್ರೆಸ್‌ ರೈಲನ್ನು ಘೋಷಿಸಲಾಗಿತ್ತು. ಹೆಚ್ಚು ದಟ್ಟಣೆಯಿರುವ ಮಾರ್ಗಗಳಲ್ಲಿ ಈ ರೈಲನ್ನು ಓಡಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

ರೈಲಿನ ವೈಶಿಷ್ಟಗಳೇನು?
-ಸಂಪೂರ್ಣ ಹವಾನಿಯಂತ್ರಿತ ಡಬಲ್‌ ಡೆಕರ್‌ ರೈಲು
-ಬಿಸಿ ಬಿಸಿಯಾದ ಆಹಾರ ಒದಗಿಸುವಂಥ ಅಟೋಮ್ಯಾಟಿಕ್‌ ಫ‌ುಡ್‌ ವೆಂಡಿಂಗ್‌ ಯಂತ್ರ
-ಪ್ರತಿ ಬೋಗಿಯಲ್ಲೂ ಟೀ/ಕಾಫಿ ವೆಂಡಿಂಗ್‌ ಯಂತ್ರ
-ಮನರಂಜನೆಗಾಗಿ ಬ್ಲೂಟೂಥ್‌ ಸಂಪರ್ಕವಿರುವ ಎಲ್‌ಸಿಡಿ ಪರದೆ ವ್ಯವಸ್ಥೆ 
-ರೈಲ್ವೆಯಿಂದಲೇ ಬ್ಲೂಟೂಥ್‌/ವೈಫೈ ಇಯರ್‌-ಫೋನ್‌ ಸೌಲಭ್ಯ
-ಮಾಡ್ಯುಲರ್‌ ಹಾಗೂ ಜೈವಿಕ ಶೌಚಾಲಯ ವ್ಯವಸ್ಥೆ
-ಜಿಪಿಎಸ್‌ ಆಧರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ

ಬೇರೆ ಏನೇನಿದೆ?
-ಸಿಟಿ ಜಂಕ್ಷನ್‌ನಲ್ಲಿ ಎಸ್ಕಲೇಟರ್‌ ವ್ಯವಸ್ಥೆ
-ತುಡಿಯಲೂರು ಮತ್ತು ಪೆರಿಯನೈಕೈನ್‌ಪಾಳಯಂನಲ್ಲಿ ಅತ್ಯಾಧುನಿಕ ಪ್ಲಾಟ್‌ಫಾರಂ

ರೈಲು ಸಂಚಾರದ ಸಮಯ
-22666 ಸಂಖ್ಯೆಯ ಈ ರೈಲು ಬೆಳಗ್ಗೆ 5.45 ಕ್ಕೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನ 12.40ಕ್ಕೆ ಬೆಂಗಳೂರು ತಲುಪಲಿದೆ. 
-ನಂತರ ಮಧ್ಯಾಹ್ನ 2.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 9 ಗಂಟೆಗೆ ಕೊಯಮತ್ತೂರು ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next