Advertisement

ಮೇಲುಕೋಟೆ ಮಂಜನ ನಗಿಸುವ ಆಟ

11:14 AM Feb 01, 2017 | |

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಜಗ್ಗೇಶ್‌ ಅಭಿನಯದ ಮತ್ತು ನಿರ್ದೇಶನದ “ಮೇಲುಕೋಟೆ ಮಂಜ’ ಚಿತ್ರ ಬಿಡುಗಡೆಯಾಗಿರಬೇಕಿತ್ತು. ಆದರೆ, ಚಿತ್ರ ತಡವಾಯ್ತು. ಅದರ ಹಿಂದೆ ಒಂದು ದೊಡ್ಡ ಕಥೆಯೇ ಇದೆಯಂತೆ. ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣದ ವೇಳೆ, ಜಗ್ಗೇಶ್‌ ಅವರ ಕಾಲಿಗೆ ಪೆಟ್ಟಾಯಿತಂತೆ. ಎಲ್ಲೋ ಉಳುಕಿರಬಹುದು ಎಂದು ಜಗ್ಗೇಶ್‌ ಸಹ ಉದಾಸೀನ ಮಾಡಿ, ಚಿತ್ರೀಕರಣ ಮುಂದುವರೆಸಿದರಂತೆ. ನೋವು ಇನ್ನಷ್ಟು ಜಾಸ್ತಿಯಾಯಿತಂತೆ. ಒಮ್ಮೆ ಡಾಕ್ಟರ್‌ ಹತ್ತಿರ ಹೋರಿ ಬಂದುಬಿಡೋಣ ಅಂತ ಹೋದವರು ಎಕ್ಸ್‌ರೇ ಮಾಡಿಸಿದ್ದಾರೆ.

Advertisement

ಅಲ್ಲಿ ಕಾಲು ಮುರಿದಿದ್ದು ಗೊತ್ತಾಗಿದೆ. ಆ ನಂತರ ಜಗ್ಗೇಶ್‌ ಸುಮಾರು 10 ತಿಂಗಳ ಕಾಲ ಮನೆಯಲ್ಲಿರಬೇಕಾಯಿತಂತೆ. ಅವರ ತೂಕ 94 ಕೆಜಿಯವರೆಗೂ ಏರಿತಂತೆ. ಅದರಿಂದ ಎಲ್ಲವೂ ಅಪ್‌ಸೆಟ್‌ ಆಗಿದೆ. ಕೊನೆಗೆ ಎಲ್ಲಾ ಸರಿ ಹೋಯಿತು ಎನ್ನುವಷ್ಟರಲ್ಲಿ, ಜಗ್ಗೇಶ್‌ ಅಭಿನಯದ “ನೀರ್‌ ದೋಸೆ’ ಬಿಡುಗಡೆಗೆ ಬಂದಿದೆ. ದೋಸೆಗಾಗಿ ಮಂಜ ಜಾಗ ಬಿಟ್ಟು ಕೊಟ್ಟಿದ್ದಾನೆ. ಈಗ ದೋಸೆ ಸಹ ಅರಗಿದೆ. ಈ ಸಂದರ್ಭದಲ್ಲಿ “ಮೇಲುಕೋಟೆ ಮಂಜ’ ಚಿತ್ರಮಂದಿರಗಳಿಗೆ ಬರುವುದಕ್ಕೆ ಸಜ್ಜಾಗಿದ್ದಾನೆ. ಫೆಬ್ರವರಿ 10ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಜಗ್ಗೇಶ್‌, ತಮ್ಮ ಹೊಸ ಚಿತ್ರದ ಬಗ್ಗೆ ಮಾತಾಡಿದ್ದಾರೆ.

ನಗುವಿಗೆ ಬರವಿಲ್ಲ! “ಮೇಲುಕೋಟೆ ಮಂಜ’ ಚಿತ್ರದ ಬಗ್ಗೆ ಜಗ್ಗೇಶ್‌ ಹೇಳುವುದು ಹೀಗೆ. “ಇತ್ತೀಚೆಗೆ ದ್ವಾರಕೀಶ್‌ ಅವರು ಒಂದು ಮಾತು ಹೇಳುತ್ತಿದ್ದರು. ನಗುವಿಗೆ ಕಾರಣ ಹುಡುಕಬೇಡಿ, ಲಾಜಿಕ್‌ ನೋಡಬೇಡಿ ಅಂತ. ನಾನು ಸಹ “ಮೇಲುಕೋಟೆ ಮಂಜ’ ಚಿತ್ರದಲ್ಲಿ ಇದೇ ವಿಷಯವನ್ನು ಹೇಳುವುದಕ್ಕೆ ಬಯಸುತ್ತೀನಿ. ಇಲ್ಲಿ ನಗುವಿಗೆ ಕಾರಣವನ್ನು ಹುಡುಕಬೇಡಿ. ನನ್ನ ಹಿಂದಿನ ಚಿತ್ರಗಳನ್ನು ನೋಡಿ ತೀರ್ಮಾನಕ್ಕೆ ಬರಬೇಡಿ. ಸುಮ್ಮನೆ ನಗುವುದಕ್ಕೆ ಬನ್ನಿ. ಹಾಗೆ ಬಂದರೆ ಖಂಡಿತಾ ಚೆನ್ನಾಗಿ ನಗುತ್ತೀರಿ …’ ಎನ್ನುತ್ತಾರೆ ಜಗ್ಗೇಶ್‌.

“ಮೇಲುಕೋಟೆ ಮಂಜ’ ಚಿತ್ರವನ್ನು ಆರ್‌. ಕೃಷ್ಣ ಎನ್ನುವ ಜಗ್ಗೇಶ್‌ ಅವರ ಅಭಿಮಾನಿ ನಿರ್ಮಿಸಿದ್ದಾರೆ. ಅವರು ಚಿಪ್ಸ್‌ ಫ್ಯಾಕ್ಟರಿವೊಂದರ ಮಾಲೀಕರು. ಅವರಿಗೆ ಜಗ್ಗೇಶ್‌ ಚಿತ್ರವೊಂದನ್ನು ನಿರ್ಮಿಸಬೇಕು ಎಂದು ಕನಸು ಕಂಡಿದ್ದರಂತೆ. ಅದು ಗೊತ್ತಾಗಿ, ಒಂದಿಷ್ಟು ಜನ ಜಗ್ಗೇಶ್‌ ಅವರ ಚಿತ್ರ ಮಾಡಿಸಿಕೊಡುವುದಾಗಿ ನಂಬಿಸಿ, ಅವರಿಂದ ಒಂದಿಷ್ಟು ದುಡ್ಡು ಕಿತ್ತಿದ್ದಾರೆ. ಟಿವಿ ರೈಟ್ಸ್‌ ಬರುತ್ತದೆ, ಇನ್ನೇನೋ ಸಿಗುತ್ತದೆ ಎಂದು ಸೈಟು ಮಾರಿಸಿ ದುಡ್ಡು ಖಾಲಿ ಮಾಡಿದ್ದಾರೆ.

ಕೊನೆಗೆ ಕೃಷ್ಣ ಅವರು ಹೋಗಿ ಜಗ್ಗೇಶ್‌ ಅವರಿಗೆ ತಮ್ಮ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಕೊನೆಗೆ ಜಗ್ಗೇಶ್‌ ತಾವೇ ಮುಂದೆ ನಿಂತು ಈ ಚಿತ್ರ ಮಾಡಿಕೊಟ್ಟಿದ್ದಾರಂತೆ. ಈ ಚಿತ್ರಕ್ಕೆ ಅವರು ಬರೀ ನಾಯಕ, ನಿರ್ದೇಶಕರಷ್ಟೇ ಅಲ್ಲ. ಕಥೆ, ಚಿತ್ರಕಥೆ ಅವರದ್ದೇ. ಜೊತೆಗೆ ಒಂದು ಹಾಡು ಬರೆಯುವುದರ ಮೂಲಕ ಅವರು ಗೀತರಚನೆಕಾರರಾಗಿಯೂ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಒಂದರ್ಥದಲ್ಲಿ ಈ ಚಿತ್ರಕ್ಕೆ ನಿರ್ಮಾಪಕರೇ ಸ್ಫೂರ್ತಿ ಎನ್ನುತ್ತಾರೆ ಜಗ್ಗೇಶ್‌. ಮುಂಚೆ ಅವರು ಬೇರೊಂದು ಚಿತ್ರವನ್ನು ಮಾಡಬೇಕು ಎಂದುಕೊಂಡಿದ್ದರಂತೆ.

Advertisement

ಆದರೆ, ನಿರ್ಮಾಪಕರು ಮೋಸ ಹೋಗಿದ್ದೆ ಕಥೆಯಾಗಿದೆ. ಯಾಮಾರೋನು, ಯಾಮಾರಿಸೋನು ಇಬ್ಬರನ್ನೂ ಇಟ್ಟುಕೊಂಡು ಒಂದು ಕಥೆ ರೆಡಿಯಾಗಿದೆ. “ಮುಂಚೆ ಒಂದು ಮರ್ಡರ್‌ ಮಿಸ್ಟ್ರಿ ಮಾಡುವ ಯೋಚನೆ ಇತ್ತು. ಆಮೇಲೆ ನಿರ್ಮಾಪಕರ ಕಥೆ ನೋಡಿ ಕಥೆ ಬದಲಾಯಿಸಲಾಯಿತು. ಇಲ್ಲಿ ಯಾಮಾರೋನು, ಯಾಮಾರಿದೋನು ಇಬ್ಬರೂ ಇದ್ದಾರೆ. ಯಾಮಾರಿಸಿದೋನ ಹತ್ತಿರ ಯಾಮಾರಿದೋನು ಏನೆಲ್ಲಾ ಮಾಡಿ, ದುಡ್ಡು ವಸೂಲಿ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ ಜಗ್ಗೇಶ್‌.

ಇಲ್ಲಿ ಅವರ ಜೊತೆಗೆ ಐಂದ್ರಿತಾ ರೇ, ರಂಗಾಯಣ ರಘು, ಶ್ರೀನಿವಾಸ ಪ್ರಭು ಮುಂತಾದವರು ನಟಿಸಿದ್ದಾರೆ. ದಾಸರಿ ಸೀನು ಛಾಯಾಗ್ರಹಣ ಮಾಡಿದರೆ, ಗಿರಿಧರ್‌ ದಿವಾನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇಲ್ಲಿ ಶ್ರೀನಿವಾಸ ಪ್ರಭು ಅವರು ಹೀರೋ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲ, ಇದು ತಮ್ಮ ಹೃದಯಕ್ಕೆ ಬಹಳ ಹತ್ತಿರವಾದ ಪಾತ್ರ ಎನ್ನುತ್ತಾರೆ ಅವರು. “ನನ್ನದು ಮೌಲ್ಯ ಮತ್ತು ಆದರ್ಶಗಳಿರುವ ಪಾತ್ರ. ಮಗ ಉಡಾಳ.

ಮಗ ಹಾಗಾಗಿದ್ದಿಕ್ಕೆ ತಂದೆಗಾಗುವ ನೋವು ಮತ್ತು ಹತಾಶೆ, ಅವನನ್ನು ಸರಿದಾರಿಗೆ ತರುವುದಕ್ಕೆ ಮಾಡುವ ಪ್ರಯತ್ನ ಹಾಗೂ ಅವನು ಸರಿದಾರಿಗೆ ಬಂದಾಗ ಅವರಿಗಾಗುವ ಸಂತೋಷ ಇವೆಲ್ಲವೂ ನನ್ನ ಪಾತ್ರದ ವಿಶೇಷತೆಗಳು. ಜಗ್ಗೇಶ್‌ ಬಹಳ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಅವರನ್ನು ಆರಂಭದ ದಿನಗಳಿಂದ ನೋಡಿಕೊಂಡು ಬಂದಿದ್ದೇನೆ. ಪ್ರತಿಭೆ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಅವರು ಒಳ್ಳೆಯ ಉದಾಹರಣೆ. ತಮ್ಮ ಇಷ್ಟು ವರ್ಷಗಳ ಚಿತ್ರಜೀವನದ ಅನುಭವವನ್ನು ಧಾರೆ ಎರೆದು ಈ ಚಿತ್ರವನ್ನು ಅವರು ಮಾಡಿದ್ದಾರೆ.

ಜಗ್ಗೇಶ್‌ ಚಿತ್ರಗಳೆಂದರೆ ಮನರಂಜನೆಗೆ ಕೊರತೆ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿಲ್ಲ. ಇಲ್ಲೂ ಮನರಂಜನೆಗೆ ಕೊರತೆ ಇಲ್ಲ. ಜೊತೆಗೆ ಹೃದಯಸ್ಪರ್ಶಿ ಸನ್ನಿವೇಶಗಳಿವೆ. ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ’ ಎನ್ನುತ್ತಾರೆ ಹಿರಿಯ ನಟ ಶ್ರೀನಿವಾಸ ಪ್ರಭು. ಹೆಸರಿಗೆ ತಕ್ಕಂತೆ ಚಿತ್ರದ ಬಹುತೇಕ ಚಿತ್ರೀಕರಣವನ್ನು ಮೇಲುಕೋಟೆಯಲ್ಲಿ ಮಾಡಲಾಗಿದೆ. ಅದರ ಜೊತೆಗೆ ಬೆಂಗಳೂರು, ಮೈಸೂರುಗಳಲ್ಲೂ ಚಿತ್ರೀಕರಣ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next