ಬಳ್ಳಾರಿ: ಜಿಲ್ಲೆಯ 9 ವಿಧಾನಸಭೆ ಕ್ಷೇತ್ರಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರದು ಸರ್ವಾಧಿಕಾರಿ ಧೋರಣೆಯಾಗಿದ್ದು, ಸದ್ದಾಂ ಹುಸೇನ್ ಅವರಂತೆ ಮಾಡುತ್ತಿದ್ದಾರೆ. ಅವರ ಹಣದಿಂದ ಕೂಡಿರುವ ದುರಂಹಾರಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಮುಖಂಡ ವಿ.ಕೆ. ಬಸಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಸಾಕಷ್ಟು ಶ್ರಮಿಸಿದ್ದೇನೆ. ಜಿಲ್ಲೆಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ಉಸಿರುಗಟ್ಟುವ ವಾತಾವರಣದಲ್ಲೂ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದೇನೆ. ಆದರೆ, ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ನನಗೆ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ| ಜಿ. ಪರಮೇಶ್ವರ್, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ ಸೇರಿ ಎಲ್ಲರೂ ಭರವಸೆ ನೀಡಿ ಟಿಕೆಟ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರ ಮರುವಿಂಗಣಡೆಯಾದ 2008ರಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ನಂತರ 2009ರಲ್ಲಿ ಲೋಕಸಭೆ ಚುನಾವಣೆಗೂ ನನ್ನನ್ನು ಪರಿಗಣಿಸಿ, ಹೈಕಮಾಂಡ್‌ಗೆ ಕಳುಹಿಸಿಕೊಡಲಾಗಿತ್ತು. ಪಕ್ಷದ ವರಿಷ್ಠರು ನಿನಗೆ ಇನ್ನು ಚಿಕ್ಕವಯಸ್ಸು, ಭವಿಷ್ಯವಿದೆ ಎಂದು ಮನವೊಲಿಸಿ, ಚಿತ್ರದುರ್ಗ ಜಿಲ್ಲೆಯ ವಿಶ್ರಾಂತ ನ್ಯಾಯಾಧಿಧೀಶ ಎನ್.ವೈ. ಹನುಮಂತಪ್ಪ ಅವರಿಗೆ ಟಿಕೆಟ್ ಕೊಡಿಸಲಾಯಿತು ಎಂದರು.
2013ರ ಚುನಾವಣೆಯಲ್ಲೂ ಟಿಕೆಟ್ ಕೈ ತಪ್ಪಿತು. 2014ರ ಬೈ ಎಲೆಕ್ಷನ್‌ನಲ್ಲೂ ನನಗೆ ಟಿಕೆಟ್ ಕೊಡಬೇಕಿತ್ತು. ಆದರೆ, ಅಂದು ಸಿಎಂ, ಡಿ.ಕೆ. ಶಿವಕುಮಾರ್, ಡಾ| ಜಿ. ಪರಮೇಶ್ವರ ಅವರು ಮನವೊಲಿಸಿ, ಎನ್.ವೈ. ಗೋಪಾಲಕೃಷ್ಣ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದರು. ಅಂತಹ ಸಂದರ್ಭದಲ್ಲೂ ಪಕ್ಷದ ಪರ ಕೆಲಸ ಮಾಡಿದ್ದೇವೆ. ಆದರೆ, ರಾಜ್ಯದಲ್ಲಿ ನಮ್ಮದೇ ಆಡಳಿತವಿದ್ದಾಗ, ನಮಗೊಂದು ಅವಕಾಶ ದೊರೆಯದಿದ್ದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಇದಕ್ಕೆ ಬೇಸತ್ತು ಬಿಜೆಪಿ ಸೇರಿದ್ದೇನೆ ಎಂದು ಹೇಳಿದರು. ಲಾಡ್ ದುರಂಹಕಾರಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹಣ ಹಾಗೂ ಅಧಿಕಾರ ದರ್ಪದಿಂದ, ಜಿಲ್ಲೆಯ ಹಿರಿಯ ಮುಖಂಡರನ್ನು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊಸಪೇಟೆಯಲ್ಲಿ ಎಸ್‌ಟಿ ಸಮಾವೇಶಕ್ಕೂ ಅಡ್ಡಿಪಡಿಸಿ ಸಂತೋಷ್‌ಲಾಡ್, ಪಕ್ಷದ ವಾಲ್ಮೀಕಿ ಮುಖಂಡರು ಬೆಳೆಯುವುದನ್ನು ಸಹಿಸುತ್ತಿಲ್ಲ. ಲಾಡ್‌ರ ಕುತಂತ್ರ ರಾಜಕಾರಣದಿಂದ ಸಮಾವೇಶ ಮೊಟಕುಗೊಳಿಸಲಾಯಿತು ಎಂದು ದೂರಿದರು. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದೇನೆ. ಸದ್ಯ ಬಿಜೆಪಿ ಪಕ್ಷ ಸೇರಿದ್ದ, ಯಾವುದೇ ಸ್ಥಾನಮಾನ ಆಮಿಷವೊಡ್ಡಿಲ್ಲ. ನಿಷ್ಠಾವಂತ ಕಾರ್ಯಕರ್ತನಾಗಿರುವ ನನಗೆ ಕಾಂಗ್ರೆಸ್ ಪಕ್ಷ ದ್ರೋಹ ಎಸಗಿತು. ವಾಲ್ಮೀಕಿ ಸಮುದಾಯ ಪ್ರಬಲವಾಗಿ ಬೆಳೆಯೋದು ಜಿಲ್ಲಾ ಸಚಿವರಿಗೆ ಇಷ್ಟವಿಲ್ಲ. ಹೀಗಾಗಿ, ನಾನು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ನನಗೆ ಟಿಕೆಟ್ ತಪ್ಪಿಸಲು ಸಚಿವರು ಶತಾಯಗತಾಯ ಪ್ರಯತ್ನ ಮಾಡಿದ್ದಾರೆ. ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ವಲಸಿಗರಿಗೆ ಸಚಿವರು ಮಣೆ ಹಾಕಿದ್ದಾರೆ ಎಂದು ಆರೋಪಿಸಿದರು.
ನನ್ನ ಮುಂದಿನ ರಾಜಕೀಯ ಭವಿಷ್ಯದ ಸಲುವಾಗಿ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿರುವೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಪಕ್ಷಕ್ಕೆ ಸೇರ್ಪಡೆಗೊಂಡಿರುವೆ ಎಂದರು. ನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಜಿ. ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯರಾದ ಎಸ್. ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ಮುಖಂಡರಾದ ಈರಣ್ಣ, ಮಾಬುಸಾಬ್, ಹುಲುಗಣ್ಣ, ಶ್ರೀದೇವಿ, ಕಾರ್ಯಕರ್ತರು ಇದ್ದರು.