ದಾವಣಗೆರೆ: ‘ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಸಮಾಜದ ಹೋರಾಟದ ವೇಳೆ ಇಬ್ಬರು ಪೊಲೀಸರು ಗೋಲಿಬಾರ್ ಮಾಡುವ ಸಂಚು ರೂಪಿಸಿದ್ದರು. ಅವರು ಯಾರೆಂಬ ಮಾಹಿತಿ ಗೃಹ ಸಚಿವರಿಗೂ ಗೊತ್ತಿದೆ. ಕೂಡಲೇ ಆ ಇಬ್ಬರು ಪೊಲೀಸರನ್ನು ಅಮಾನತು ಮಾಡಬೇಕು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಶನಿವಾರ(ಡಿ14) ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ’ಹೋರಾಟನಿರತ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಪ್ರಹಾರ ನಡೆಸಲು ಗೃಹ ಸಚಿವರ ಕುಮ್ಮಕ್ಕು ಸಹ ಇರುವ ಶಂಕೆ ವ್ಯಕ್ತವಾಗುತ್ತಿದೆ.ಆದ್ದರಿಂದಲೇ ಅವರು ಸಾವಿರಾರು ಜನರು ನುಗ್ಗಿದರೆ ಮುತ್ತಿಡಬೇಕಿತ್ತಾ? ಎಂದು ಕೇಳಿದ್ದಾರೆ. ಘಟನೆಯನ್ನು ಸಮರ್ಥವಾಗಿ ನಿಭಾಯಿಸಲಾಗದ ಗೃಹ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಮುಖ್ಯಮಂತ್ರಿಯವರು ಪರಮೇಶ್ವರ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಯಾರೋ ಕಿಡಿಗೇಡಿಗಳು ಹೋರಾಟ ಸಂದರ್ಭದಲ್ಲಿ ಕಲ್ಲು ತೂರಿದ್ದಾರೆ. ಹೋರಾಟದ ದಿಕ್ಕು ತಪ್ಪಿಸುವ ದುರುದ್ದೇಶದಿಂದ ಸರ್ಕಾರವೇ ಕಲ್ಲು ತೂರಾಟ ಮಾಡಿಸಿದ್ದರಬಹುದು. ಕೂಡಲಸಂಗಮದ ಸ್ವಾಮೀಜಿ ಬಂಧನ ಹಾಗೂ ಲಾಠಿ ಪ್ರಹಾರ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಹ ಸಮುದಾಯದ ಮುಂದೆ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ಸಿದ್ದರಾಮಯ್ಯ ಸರ್ಕಾರ ಹಿಟ್ಲರ್ ಸರ್ಕಾರದಂತೆ ವರ್ತಿಸುತ್ತಿದೆ. ಅಧಿಕಾರ ನೆತ್ತಿಗೇರಿದೆ. ಲಾಠಿ ಪ್ರಹಾರದಲ್ಲಿ ಗಾಯಗೊಂಡವರಿಗೆ ಪರಿಹಾರ ಕೊಡಬೇಕು. ಬಂಧನಕ್ಕೊಳಪಡಿಸಿದ್ದವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ಚೆನ್ನಮ್ಮನ ನಾಡಿನಲ್ಲಿ ಚೆನ್ನಮ್ಮನ ವಂಶಸ್ಥರ (ಪಂಚಮಸಾಲಿಗಳು) ಮೇಲೆ ನಡೆದ ಲಾಠಿ ಪ್ರಹಾರ ನಡೆದಿರುವುದು ಮನುಕುಲಕ್ಕೆ ಮಾಡಿದ ಅಪಮಾನ. ಈ ಘಟನೆಯನ್ನು ಎಲ್ಲ ಮಠಾಧಿಶರು, ಮುಖಂಡರು ಖಂಡಿಸಬೇಕು. ಕೂಡಲಸ್ವಾಮೀಜಿಯವರನ್ನು ಬೆಂಬಲಿಸಬೇಕು’ ಎಂದರು.
‘ಸಿದ್ದರಾಮಯ್ಯ ಅವರು ಈ ಹಿಂದಿನ ಸಿದ್ದರಾಮಯ್ಯ ಅವರಂತಿಲ್ಲ. ಅವರು ಸಂಪೂರ್ಣ ಬದಲಾಗಿದ್ದಾರೆ. ಎಲ್ಲಿ ಅಧಿಕಾರ ತಮ್ಮಿಂದ ಕೈ ತಪ್ಪಿ ಹೋಗುತ್ತದೆಯೋ ಎಂಬ ಕಾರಣಕ್ಕಾಗಿ ದಕ್ಷತೆ ಕಳೆದುಕೊಂಡಿದ್ದಾರೆ’ ಎಂದರು.