Advertisement

ಮತ್ತೆ ಮಳೆ ಕಣ್ಣು ಮುಚ್ಚಾಲೆ: ರೈತರಿಗೆ ಆತಂಕ

10:22 AM Jul 04, 2022 | Team Udayavani |

ಕಲಬುರಗಿ: ಕಳೆದ ವರ್ಷ ಅಂದರೆ 2021 ಹಾಗೂ ಅದರ ಹಿಂದಿನ ವರ್ಷ 2020ರಲ್ಲಿ ಎರಡು ವರ್ಷಗಳ ಕಾಲ ಕಲಬುರಗಿ ಜಿಲ್ಲೆಯಲ್ಲಿ ಸಕಾಲಕ್ಕೆ ಅಂದರೆ ಜೂನ್‌ ಪ್ರಾರಂಭದಲ್ಲೇ ಉತ್ತಮ ಮಳೆಯಾಗಿತ್ತು. ಆದರೆ ಪ್ರಸಕ್ತವಾಗಿ ಜೂನ್‌ ತಿಂಗಳು ಮುಗಿದಿದ್ದರೂ ಸಮಪರ್ಕವಾಗಿ ಮಳೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಮಳೆಗಾಲ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಸಮಪರ್ಕಕವಾಗಿ ಮಳೆಯಾಗದಿರುವುದರಿಂದ ನೇಗಿಲಯೋಗಿ ಚಿಂತೆಯಲ್ಲಿ ಮುಳುಗಿದ್ದು, ಮಳೆರಾಯ ಯಾವಾಗ? ಕೃಪೆ ತೋರುವನೆಂದು ಮುಗಿಲತ್ತ ಮುಖ ಮಾಡಿದ್ದಾನೆ. ಈ ವಾರದಲ್ಲಾದರೂ ಮಳೆಯಾಗದಿದ್ದರೆ ಇಡೀ ಕೃಷಿ ಕ್ಷೇತ್ರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಕಳೆದ ಒಂದುವರೆ ದಶಕದಿಂದ ಪರಿಸ್ಥಿತಿ ಅವಲೋಕಿಸಿದ್ದರೆ ಜುಲೈ ತಿಂಗಳಲ್ಲೇ ಸಮಪರ್ಕವಾಗಿ ಮಳೆಯಾಗಿ ಬಿತ್ತನೆಯಾಗಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ಕಳೆದೆರಡು ವರ್ಷಗಳಿಂದ ಜೂನ್‌ ಮೊದಲ ವಾರದಲ್ಲೇ ಭರ್ಜರಿ ಮಳೆಯಾಗಿ ಬಿತ್ತನೆ ಉತ್ತಮವಾಗಿ ನಡೆದಿದ್ದರಿಂದ ಪ್ರಸಕ್ತವಾಗಿ ಜೂನ್‌ ಮೊದಲ ವಾರದಿಂದಲೇ ಉತ್ತಮ ಮಳೆಯಾಗಬಹುದೆಂದು ರೈತ ಬಲವಾಗಿ ನಂಬಿದ್ದ. ಅದಲ್ಲದೇ ಮೇ ಎರಡನೇ ವಾರದಲ್ಲೇ ಉತ್ತಮ ಮಳೆಯಾಗಿದ್ದರಿಂದ ರೈತ ಹರ್ಷಗೊಂಡು ಹೊಲ ಹದ ಮಾಡಿ ಬಿತ್ತನೆಗೆ ಸಿದ್ದ ಮಾಡಿಕೊಂಡಿದ್ದಾನೆ. ಕೆಲ ಕಡೆ ಬಿತ್ತನೆ ಮಾಡಿದರೆ ಇನ್ನೂ ಹಲವು ಕಡೆ ಬಿತ್ತನೆಗೆ ಮುಂದಾಗಿದ್ದಾನೆ. ಆದರೆ ಮಳೆ ಕಣ್ಣು ಮುಚ್ಚಾಲೆ ಆಡುತ್ತಿರುವುದು ಎಲ್ಲ ನಿರೀಕ್ಷೆಗಳನ್ನು ಬುಡ ಮೇಲು ಮಾಡಿದೆ.

ಶೇ. 24ರಷ್ಟು ಮಳೆ ಕೊರತೆ
ಮಳೆಗಾಲದ ಜೂನ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಶೇ. 24ರಷ್ಟು ಮಳೆ ಕೊರತೆಯಾಗಿದೆ. 115 ಮೀ.ಮೀ ಮಳೆ ಪೈಕಿ 89 ಮೀ. ಮೀ ಮಳೆಯಾಗಿ ಶೇ. 24ರಷ್ಟು ಕೊರತೆಯಾಗಿದೆ. ಅತಿ ಹೆಚ್ಚು ಅಫ‌ಜಲಪುರ ತಾಲೂಕಿನಲ್ಲಿ ಶೇ. 35ರಷ್ಟು ಮಳೆ ಕೊರತೆಯಾಗಿದೆ. ಆಳಂದ ತಾಲೂಕಿನಲ್ಲಿ ಶೇ. 23ರಷ್ಟು, ಜೇವರ್ಗಿಯಲ್ಲಿ ಶೇ. 21ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಚಿಂಚೋಳಿ, ಸೇಡಂ ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಕೆಲವೆಡೆ ಮಳೆಯಾಗಿದ್ದರೂ ಇಲ್ಲà ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಒಣಗುತ್ತಿವೆ.

ಹೆಸರು, ಸೋಯಾ, ಉದ್ದುಗೆ ಹೊಡೆತ

Advertisement

ಕಳೆದ ವರ್ಷದಂತೆ ಈ ವರ್ಷವೂ ಜೂನ್‌ ಆರಂಭದಲ್ಲೇ ಮಳೆಯಾಗುವುದೆಂದು ರೈತ ಅಲ್ಪ ಸ್ವಲ್ಪ ಮಳೆ ನಡುವೆ ಮುಂಗಾರಿನ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು, ಅದರಲ್ಲೂ ಸೋಯಾ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಮಳೆ ಅಭಾವದಿಂದ ಈ ಬೆಳೆಗಳಲ್ಲ ಬಾಡುತ್ತಿವೆ.

ಶೇ. 24ರಷ್ಟು ಮಾತ್ರ ಬಿತ್ತನೆ

ಮೇ ತಿಂಗಳಲ್ಲಿ ಹಾಗೂ ಜೂನ್‌ ಮೊದಲ ವಾರ ಅಲ್ಲಲ್ಲಿ ಮಳೆಯಾಗಿರುವ ಹಿನ್ನೆಲಯಲ್ಲಿ ರೈತ ಮಳೆ ಬರಬಹುದೆಂದು ತಿಳಿದುಕೊಂಡು ಬಿತ್ತನೆಯಲ್ಲಿ ತೊಡಗಿದ್ದಾನೆ. ಅಲ್ಪವಾವಧಿ ಬಳೆಗಳಾದ ಹೆಸರು, ಉದ್ದು, ಸೋಯಾ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟಾರೆ ಜುಲೈ 2ನೇ ದಿನಾಂಕವರೆಗೂ ಶೇ. 24ರಷ್ಟು ಮಾತ್ರ ಬಿತ್ತನೆಯಾದಗಿದೆ. ಕಳೆದ ವರ್ಷ ಹೊತ್ತಿಗೆ. ಶೇ. 88ರಷ್ಟು ಬಿತ್ತನೆಯಾಗಿತ್ತು. ಪ್ರಮುಖವಾಗಿ ತೊಗರಿ ಬಿತ್ತನೆಯಿಂದ ರೈತ ವುಂಕನಾಗುತ್ತಿದ್ದು, ತೊಗರಿ ಬಿತ್ತನೆ ಕ್ಷೇತ್ರ ಕುಸಿಯಲಿದೆ. ತೊಗರಿ ಜಾಗದಲ್ಲಿ ಹತ್ತಿ, ಸೋಯಾ ಬೆಳೆ ಕಾಲಿಟ್ಟಿವೆ. ತೊಗರಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದಿರುವುದೇ ಬಿತ್ತನೆಯಲ್ಲಿ ಹಿನ್ನಡೆಯಾಗಿದೆ.

ಮಲೆನಾಡಿನ ಮಳೆ ಈ ಕಡೆ ಬರಬಾರದೇ?

ಮಲೆನಾಡು ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗಿ, ನದಿ-ಹಳ್ಳ-ಕೊಳ್ಳ ಭರ್ತಿಯಾಗಿ ಹರಿಯುತ್ತಿವೆ, ಆದರೆ ಬಿಸಿಲು ನಾಡು ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಮಳೆಗಾಲ ಮಾಯವಾಗಿ ಮಳೆ ಕೊರತಯಾಗಿದೆ. ಕಳೆದ ವರ್ಷ ಮಲೆನಾಡಿಗಿಂತ ಹೆಚ್ಚಿನ ಸರಾಸರಿ ಮಳೆ ಕಲಬುರಗಿ ಜಿಲ್ಲೆಯಲ್ಲಾಗಿತ್ತು. ಪ್ರಸಕ್ತವಾಗಿ ಈಗ ಮಳೆ ನಾಪತ್ತೆಯಾಗಿ ಗಾಳಿ ಮಾತ್ರ ರಭಸವಾಗಿ ಬೀಸುತ್ತಿದೆ. ಹೀಗಾಗಿ ಬಿತ್ತೆನೆಯಾದ ಬೆಳೆ ಒಣಗಲಾರಂಭಿಸಿದೆ. ಮತ್ತೊಂದೆಡೆ ಬಿತ್ತನೆ ಮಾಡಬೇಕಿದ್ದ ರೈತನಿಗೆ ಮಳೆ ಯಾವಾಗ ಬರ್ತದ್‌ ಎಂಬದು ತಿಳಿದುಕೊಂಡು ದಿನದೂಡುತ್ತಿದ್ದಾನೆ.

ರಸಗೊಬ್ಬರ ಕೊರತೆ

ಮಳೆ ಕೊರತೆ ನಡುವೆ ರೈತನಿಗೆ ಪ್ರಸಕ್ತವಾಗಿ ರಸಗೊಬ್ಬರ ಕೊರತೆಯೂ ಪ್ರಮುಖವಾಗಿ ಕಾಡುತ್ತಿದೆ. ಡಿಎಪಿ ಗೊಬ್ಬರವಂತೂ ಎಲ್ಲೂ ಸಿಗುತ್ತಿಲ್ಲ. ಕೃಷಿ ಅಧಿಕಾರಿಗಳಂತು ಕಾಗೆ ಗುಬ್ಬಕನ ಕಥೆಯಂತೆ ಲೆಕ್ಕ ನೀಡ್ತಾರೆ. ಆದರೆ ಅವರು ನೀಡುವ ಲೆಕ್ಕದ ಕನಿಷ್ಠ ಅರ್ಧದಷ್ಟು ರಸಗೊಬ್ಬರ ಸರಬರಾಜು ಆಗಿಲ್ಲದಿರುವುದನ್ನು ಕಾಣಲಾಗುತ್ತಿದೆ. ಒಂದು ವೇಳೆ ಸಮಪರ್ಕವಾಗಿ ಮಳೆ ಬಂದಿದ್ದರೆ ರಸಗೊಬ್ಬರಕ್ಕೆ ರೈತ ಬೀದಿಗಿಳಿಯುವಲ್ಲಿ ಯಾವುದೇ ಅನುಮಾನವಿರಲಿಲ್ಲ. ಸಬ್ಸಿಡಿ ಹಿನ್ನೆಲೆಯಲ್ಲಿ ಅಗತ್ಯಗನುಗುಣವಾಗಿ ಡಿಎಪಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದೊಂದು ವಾರ ಕಾದು ಮಳೆ ಕೊರತೆ ಹಾಗೂ ಬಿತ್ತನೆ ಪ್ರಮಾಣ ಕುರಿತಾಗಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು. ಮಳೆಯಂತು ಜಿಲ್ಲೆಯಾದ್ಯಂತ ಕೊರತೆಯಾಗಿದೆ. ವಾರದೊಳಗೆ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ. -ಯಶವಂತ ಗುರುಕರ್‌, ಡಿಸಿ

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next