Advertisement

ಕೊನೆ ಟ್ವೀಟ್ ಮಾಡಿ ಕೊನೆಯುಸಿರು ಎಳೆದ ಸುಷ್ಮಾ

09:22 AM Aug 08, 2019 | Team Udayavani |

ಹೊಸದಿಲ್ಲಿ: ಮಾಜಿ ಕೇಂದ್ರ ವಿದೇಶಾಂಗ ಸಚಿವೆ , ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಹೃದಯಾಘಾತದಿಂದ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Advertisement

ನಿಧನ ಹೊಂದುವ 3 ಗಂಟೆಗಳಿಗೆ ಮೊದಲು ಟ್ವೀಟ್ ಮಾಡಿರುವ ಸುಷ್ಮಾ ಅವರು, ನಾನು ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಎಂದಿದ್ದರು. ಟ್ವೀಟ್ ಮಾಡಿದ ಕೆಲವೇ ತಾಸುಗಳಲ್ಲಿ ನಿಧನ ಹೊಂದಿದ್ದಾರೆ.

1952ರಲ್ಲಿ ಫೆಬ್ರವರಿ 14ರಂದು ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ ಅವರ ಪುತ್ರಿಯಾಗಿ ಹರಿಯಾಣದ ಅಂಬಾಲಾದಲ್ಲಿ ಜನಿಸಿದರು. ಇಲ್ಲಿನ ಅಂಬಾಲಾ ಕಂಟೋನ್ಮೆಂಟ್ನ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಂಜಾಬ್‌ ತೆರಳಿದ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದರು. ಇದರ ಫಲವಾಗಿ 1973ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು.

ಎಬಿವಿಪಿ ಮೂಲಕ ರಾಜಕೀಯ ಪ್ರವೇಶ
1970ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯಕ್ಕೆ ಅವರು ಪಾದಾರ್ಪಣೆ ಮಾಡಿದರು. ಜಯಪ್ರಕಾಶ್ ನಾರಾಯಣರ ಅವರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸುಷ್ಮಾ ಅವರು ತುರ್ತು ಪರಿಸ್ಥಿತಿಯ ಬಳಿಕ ಬಿಜೆಪಿಗೆ ಸೇರಿದ್ದರು.

ರಾಜಕೀಯ ಜೀವನ
ಸುಷ್ಮಾ ಸ್ವರಾಜ್‌ ಅವರು ದಿಲ್ಲಿಯ ಮುಖ್ಯಮಂತ್ರಿಯಾಗಿ 13 ಅಕ್ಟೋಬರ್‌ 1998ರಿಂದ ಡಿಸೆಂಬರ್ 3, 1998ರ ವರೆಗೆ ಸೇವೆ ಸಲ್ಲಿಸಿದ್ದರು. 7 ಬಾರಿ ಸಂಸತ್ತು ಹಾಗೂ 3 ಬಾರಿ ಹರಿಯಾಣ ರಾಜ್ಯ ವಿಧಾನ ಸಭೆ ಪ್ರವೇಶಿಸಿದ್ದರು.

Advertisement

1990ರಲ್ಲಿ ಎಪ್ರಿಲ್‌ನಲ್ಲಿ ಮೊದಲ ಬಾರಿ ರಾಜ್ಯಸಭೆಯ ಮೂಲಕ ಸಂಸತ್ತು ಪ್ರವೇಶಿಸಿದ್ದರು. 1996ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಬಳಿಕ 13 ದಿನಗಳ ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಿದ್ದರು. ಬಳಿಕ ಸಚಿವ ಸ್ಥಾನ ತೊರೆದು ದಿಲ್ಲಿಯ ಮುಖ್ಯಮಂತ್ರಿಯಾದರು.

1998ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ 12ನೇ ಲೋಕಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಮಂತ್ರಿಯಾದರು. ಬಳಿಕ ಎನ್‌ಡಿಎ ಅವಧಿಯ ಕೆಲವು ಸರಕಾರಗಳಲ್ಲಿ ಕೇಂದ್ರ ಸಚಿವೆಯಾಗಿದ್ದರು. ಬಳಿಕ ಲೋಕಸಭೆಯ ವಿಪಕ್ಷ ನಾಯಕಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ವಿದೇಶಾಂಗ ಸಚಿವೆಯಾಗಿ 2014ರ ಮೋದಿ ಸಂಪುಟದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ರಾಜ್ಯದಿಂದ ಸ್ಪರ್ಧಿಸಿದ್ದ ಸುಷ್ಮಾ
ಸುಷ್ಮಾ ಸ್ವರಾಜ್ ಅವರು 1999ರಲ್ಲಿ 13ನೇ ಲೋಕಸಭೆಗೆ ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಸ್ಪರ್ಧಿಸಿದ್ದರು. ಆಂದಿನ ರಾಜಕೀಯ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿತ್ತು. ಅಂತಹ ಸಮಯದಲ್ಲೂ ರಾಜ್ಯದಿಂದ ಸ್ಪರ್ಧಿಸುವ ಧೈರ್ಯ ತೋರಿಸಿದ್ದರು.

12 ದಿನಗಳ ಕಾಲ ಪ್ರಚಾರ ನಡೆಸಿ 3.5 ಲಕ್ಷ ಮತ ಗಳಿಸುವಲ್ಲಿ ಯಶಸ್ವೀಯಾಗಿದ್ದರು. ಆದರೆ 7 ಶೇ. ಮತಗಳ ಅಂತರದಲ್ಲಿ ಸೋನಿಯಾ ಗಾಂಧಿ ವಿರುದ್ಧ ಪರಾಜಯಗೊಂಡಿದ್ದರು. ಸೋತ ಬಳಿಕವೂ ರಾಜ್ಯದ ಕುರಿತಾಗಿ ವಿಶೇಷ ಕಾಳಜಿ ಹೊಂದಿದ್ದರು. ಬಳ್ಳಾರಿ ಜಿಲ್ಲೆಯ ಕುರಿತಾಗಿ ವಿಶೇಷ ಕಾಳಜಿ ಹೊಂದಿದ್ದರು. ವರಮಹಾಲಕ್ಷೀ ಪೂಜೆಯ ಸಂದರ್ಭ ಬಳ್ಳಾರಿಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಈ ಸಂಪ್ರದಾಯವನ್ನು ಕೊನೆಗೊಳಿಸಿದ್ದರು. ಬಳ್ಳಾರಿಯ ರೆಡ್ಡಿ ಕುಟುಂಬದ ಜತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಆದರೆ ರೆಡ್ಡಿಗಳ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬಳಿಕ ಬಳ್ಳಾರಿಗೆ ಬರಲಿಲ್ಲ.

ಸುಷ್ಮಾ ಅವರು ಇನ್ನಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಸರಣಿ ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತೀಯ ರಾಜಕೀಯದ ವೈಭವಯುತ ಅಧ್ಯಾಯವೊಂದು ಮುಗಿದಿದೆ. ಸಾರ್ವಜನಿಕರ ಸೇವೆಗೆಂದೇ ಹಾಗೂ ಬಡವರ ಬದುಕು ಹಸನಾಗಿಸಲೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಬದ್ಧತೆಯುಳ್ಳ ನಾಯಕಿ ಎಂದರು.
ಒಬ್ಬ ಸಚಿವೆಯಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಿನ ಹಸ್ತ ಚಾಚುವ ಮೂಲಕ ತಮ್ಮ ಮಾನವೀಯ ಮುಖವನ್ನೂ ತೋರಿಸಿದ್ದರು ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next