ಕಲಬುರಗಿ: ಸೂರ್ಯನಗರಿ ಕಲಬುರಗಿಯಲ್ಲಿ ಫೆ.5ರಿಂದ ಮೂರು ದಿನಗಳ ಕಾಲ ನಡೆಯುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳು, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳ ನೋಂದಣಿಗೆ ಜ.14 ದಿನ. ಸುಮಾರು 20 ಸಾವಿರ ನೋಂದಾಯಿತ ಪ್ರತಿನಿಧಿಗಳ ನಿರೀಕ್ಷೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮ್ಮೇಳನದ ನೋಂದಣಿ ಸಮಿತಿ ಹೊಂದಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೆ 100 ರಶೀದಿಗಳುಳ್ಳ 200ಕ್ಕೂ ಅಧಿಕ ನೋಂದಣಿ ಪುಸ್ತಕಗಳನ್ನು ರವಾನಿಸಲಾಗಿದೆ. ನೋಂದಣಿ ಬಗ್ಗೆ ಗೊಂದಲ, ಅನುಮಾನಗಳಿಗೆ ಆಸ್ಪದಮಾಡಿಕೊಡಬಾರದು ಎಂಬ ನಿಟ್ಟಿನಲ್ಲಿ ನೋಂದಾಯಿತರಿಗೆ ಬಾರ್‌ಕೋಡ್ ಉಳ್ಳ ರಶೀದಿ ನೀಡಲಾಗುತ್ತಿದೆ. ನೋಂದಾಯಿತ ಪ್ರತಿನಿಧಿಗಳಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದ್ದು, ವಸತಿ, ಊಟ ಒದಗಿಸುವುದರೊಂದಿಗೆ ಸಮ್ಮೇಳನದ ನೆನಪಿಗಾಗಿ ಕಿಟ್ ನೀಡಲಾಗುತ್ತದೆ.
ತುಮಕೂರಿನಿಂದ ಹೆಚ್ಚು ನಿರೀಕ್ಷೆ: ತುಮಕೂರು ಜಿಲ್ಲೆಗೆ ಹೆಚ್ಚು ನೋಂದಣಿ ಪುಸ್ತಕಗಳು (15) ರವಾನಿಸಲಾಗಿದ್ದು, ಅಲ್ಲಿಂದಲೇ ಹೆಚ್ಚು ಜನ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗಿದೆ. ಉಳಿದಂತೆ ಮೈಸೂರು ಮತ್ತು ರಾಯಚೂರು ಜಿಲ್ಲೆಗೆ ತಲಾ 14, ಹಾಸನ, ಮಂಡ್ಯ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಕೊಪ್ಪಳ, ಯಾದಗಿರಿ ಜಿಲ್ಲೆಗೆ ತಲಾ 10 ಮತ್ತು ಬಾಗಲಕೋಟೆ-9, ಗದಗ, ಹಾವೇರಿ, ಬಳ್ಳಾರಿ ಜಿಲ್ಲೆಗೆ 8, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ 6 ಹಾಗೂ ರಾಮನಗರ, ದಾವಣಗೆರೆ, ವಿಜಯಪುರ ಜಿಲ್ಲೆಗೆ 5 ನೋಂದಣಿ ಪುಸ್ತಕಗಳನ್ನು ರವಾನಿಸಲಾಗಿದೆ. ಚಿಕ್ಕಬಳ್ಳಾಪುರ, ಬೀದರ ಜಿಲ್ಲೆಗೆ 4, ಕೊಡಗು, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗೆ ತಲಾ 2 ಮತ್ತು ಗಡಿ ಭಾಗದ ಕಾಸರಗೋಡು, ಮಹಾರಾಷ್ಟ್ರದ ಅಕ್ಕಲಕೋಟಕ್ಕೂ ಒಂದು ನೋಂದಣಿ ಪುಸ್ತಕಗಳನ್ನು ಕಳುಹಿಸಲಾಗಿದೆ. ಕೆಲ ಜಿಲ್ಲೆಯವರು ಎರಡನೇ ಬಾರಿ ತಾವೇ ಕೇಳಿ ನೋಂದಣಿ ಪುಸ್ತಕಗಳನ್ನು ಪಡೆದುಕೊಂಡಿದ್ದಾರೆ.
ಸಮ್ಮೇಳನದ ಆತಿಥ್ಯ ವಹಿಸಿರುವ ಕಲಬುರಗಿ ಕಸಾಪ ಘಟಕದಲ್ಲಿ ಸೋಮವಾರ ಸಂಜೆ ವೇಳೆಗೆ 700 ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ, ಜಿಲ್ಲೆಯ ಪ್ರತಿ ತಾಲೂಕು ಘಟಕಕ್ಕೂ ಒಂದು ನೋಂದಣಿ ಪುಸ್ತಕ ನೀಡಲಾಗಿದೆ. ಮಾತ್ರವಲ್ಲದೇ ಐದಾರು ಸಂಘ-ಸಂಸ್ಥೆಯವರು ತಾವೇ ಖುದ್ದು ತಲಾ ಒಂದು ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ. ಜ.14 ನೋಂದಣಿಗೆ ಕೊನೆ ದಿನವಾಗಿದ್ದು, ಎರಡು ದಿನದಲ್ಲಿ ಎಲ್ಲ ಕಡೆಗಳಿಂದ ನೋಂದಣಿದಾರರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ನೋಂದಣಿ ಸಮಿತಿಯ ಕಾಯಾಧ್ಯಕ್ಷ ರಮೇಶ ಸಂಗಾ ತಿಳಿಸಿದ್ದಾರೆ.
509 ಮಳಿಗೆಗಳು ಬುಕ್ : ಪುಸ್ತಕ ಮಳಿಗೆ ಮತ್ತು ವಾಣಿಜ್ಯ ಮಳಿಗೆ ನೋಂದಣಿಗೆ ಬೆಂಗಳೂರಿನ ಕಸಾಪದ ಕೇಂದ್ರ ಘಟಕ ಮತ್ತು ಕಲಬುರಗಿ ಘಟಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಪುಸ್ತಕ ಮಳಿಗೆಗೆ 2,500 ರೂ. ಮತ್ತು ವಾಣಿಜ್ಯ ಮಳಿಗೆಗೆ 3,000 ರೂ. ಶುಲ್ಕ ಇದೆ. ಸಮ್ಮೇಳನದಲ್ಲಿ 500 ಪುಸ್ತಕ ಮಳಿಗೆಗಳು, 300 ವಾಣಿಜ್ಯ ಮಳಿಗೆಗಳು ಸೇರಿ ಒಟ್ಟು 800 ಮಳಿಗೆಗಳನ್ನು ಸ್ಥಾಪಿಸಲಾಗುವುದು, ಇದರಲ್ಲಿ ಇದುವೆರೆಗೆ ಒಟ್ಟು 509 ಮಳಿಗೆಗಳು ನೋಂದಣಿಯಾಗಿವೆ. ಕಲಬುರಗಿ ಕಸಾಪ ಕಾರ್ಯಾಲಯದಲ್ಲಿ 175 ಪುಸ್ತಕ ಮಳಿಗೆಗಳು, 94 ವಾಣಿಜ್ಯ ಮಳಿಗೆಗಳು ನೋಂದಣಿಯಾಗಿವೆ. ಬೆಂಗಳೂರಿನಲ್ಲಿ 160 ಪುಸ್ತಕ ಮಳಿಗೆಗಳು ಹಾಗೂ 80 ವಾಣಿಜ್ಯ ಮಳಿಗೆಗಳು ನೋಂದಣಿಯಾಗಿವೆ ಎಂದು ವೀರಭದ್ರ ಸಿಂಪಿ ಮಾಹಿತಿ ನೀಡಿದ್ದಾರೆ.
ಕಾಸರಗೋಡನಿಂದ ಪ್ರತಿನಿಧಿಗಳು ಇಲ್ಲ : ಕರಾವಳಿ ಗಡಿಯ ಕಾಸರಗೋಡಿನಲ್ಲಿ ಕಸಾಪ ಘಟಕ ಹೊಂದಿದ್ದು, ಅಲ್ಲಿಗೂ ನೋಂದಣಿ ಪುಸ್ತಕ ರವಾನಿಸಲಾಗಿದೆ. ಆದರೆ, ಕಲಬುರಗಿ ದೂರವಾಗುತ್ತದೆ ಮತ್ತು ಈ ಭಾಗದಲ್ಲಿ ಹೆಚ್ಚು ಬಿಸಿಲೆಂಬ ಕಾರಣ ಯಾವುದೇ ಪ್ರತಿನಿಧಿಗಳ ನೋಂದಣಿಯಾಗಿಲ್ಲ. 9 ಜನ ವಿಶೇಷ ಆಹ್ವಾನಿತರ ಹೆಸರನ್ನು ಈಗಾಗಲೇ ಕೇಂದ್ರ ಕಸಾಪಕ್ಕೆ ರವಾನಿಸಲಾಗಿದೆ ಎಂದು ಕಾಸರಗೋಡು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ವಿ.ಭಟ್ ತಿಳಿಸಿದ್ದಾರೆ.
ಸಮ್ಮೇಳದ ನೋಂದಾಯಿತ ಪ್ರತಿನಿಧಿಗಳಿಗೆ ನೆನಪಿನಲ್ಲಿ ಉಳಿಯುವಂತೆ ಸಮ್ಮೇಳನದ ಲೋಗೋ ಉಳ್ಳ ಒಳ್ಳೆಯ ಬ್ಯಾಗ್ ನೀಡಲಾಗುವುದು. ಮೂರು ದಿನಗಳ ವಾಸ್ತವ್ಯ, ಸಾರಿಗೆ, ಪ್ರತ್ಯೇಕ ಊಟದ ವ್ಯವಸ್ಥೆ, ಊಟ, ಉಪಾಹಾರದ ಟೋಕನ್, ಡೈರಿ, ಪೆನ್ ಹಾಗೂ ಸರ್ಕಾರಿ ನೌಕರರಿಗೆ ಒಂದುಒಒಡಿ ಫಾರಂ ಕೊಡಲಾಗುವುದು
.-ತಿಪ್ಪಣ್ಣಪ್ಪ ಕಮಕನೂರು, ಎಂಎಲ್‌ಸಿ, ಅಧ್ಯಕರು, ಸಮ್ಮೇಳನದ ನೋಂದಣಿ ಸಮಿತಿ
-ರಂಗಪ್ಪ ಗಧಾರ