ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಶುಕ್ರವಾರ ಕಡೆಯ ದಿನವಾಗಿದ್ದು, ಅಂತಿಮ ಚುನಾವಣಾ ಅಖಾಡ ನಿರ್ಧಾರಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕೊನೇ ಕ್ಷಣದ ಪ್ರಯತ್ನಗಳನ್ನು ತೀವ್ರಗೊಳಿಸಿವೆ.
ಅದರಲ್ಲೂ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಎರಡೂ ಪಕ್ಷಗಳಲ್ಲಿ 20ಕ್ಕೂ ಹೆಚ್ಚು ಬಂಡಾಯ ಅಭ್ಯರ್ಥಿಗಳು ಕಾಣಿಸಿ ಕೊಳ್ಳುವ ಆತಂಕ ಎದುರಾಗಿದೆ. ಜೆಡಿಎಸ್‌ನಲ್ಲೂ ಮೂರ್ನಾಲ್ಕು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳ ಭೀತಿ ಇದೆ. ಕಳೆದೆರಡು ದಿನಗಳಿಂದ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಇವರ ಮನವೊಲಿಸುವ ಕೆಲಸ ಮಾಡುತ್ತಿರುವ ಪಕ್ಷದ ಪ್ರಮುಖರು ಇದೀಗ ಅಂತಿಮ ಹಂತದ ಕಸರತ್ತು ಆರಂಭಿಸಿದ್ದಾರೆ.
ಬಿಜೆಪಿಯಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ತಿಪ್ಪೇಸ್ವಾಮಿ, ವಿಜಯಪುರದಲ್ಲಿ ಅಪ್ಪು ಪಟ್ಟಣಶೆಟ್ಟಿ, ಶಿಗ್ಗಾವಿಯಲ್ಲಿ ಸೋಮಣ್ಣ ಬೇವಿನಮರದ, ರಾಣೆಬೆನ್ನೂರಿನಲ್ಲಿ ರುಕ್ಮಿಣಿ ಸಾಹುಕಾರ್ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಬಂಡಾಯದ ಬಾವುಟ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಮಹಾಲಕ್ಷ್ಮಿ ಲೇಔಟ್‌ನಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಮಾಜಿ ಮೇಯರ್ ಎಂ.ನಾಗರಾಜ್ ಮತ್ತು ಎಸ್.ಹರೀಶ್ ಅವರನ್ನು ಸಮಾಧಾನಪಡಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ.
ಕಾಂಗ್ರೆಸ್‌ನಲ್ಲಿ ಜಗಳೂರು ಕ್ಷೇತ್ರದಿಂದ ಪುಷ್ಪ, ತಿಪಟೂರಿನಿಂದ ನಂಜಾಮರಿ, ಸಿರಗುಪ್ಪದಿಂದ ನಾಗರಾಜ್, ಮಡಿಕೇರಿಯ ಮುತ್ತಪ್ಪ, ಮಹಾಲಕ್ಷ್ಮಿ ಲೇಔಟ್‌ನ ಗಿರೀಶ್ ನಾಶಿ ಸೇರಿ 20ಕ್ಕೂ ಹೆಚ್ಚು ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಸಮಾಧಾನಪಡಿಸುವ ಅಂತಿಮ ಹಂತದ ಪ್ರಯತ್ನ ಮುಂದುವರಿದಿದೆ.
ನೆಲಮಂಗಲ ಕ್ಷೇತ್ರದಿಂದ ಬಂಡಾಯವಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದ ಮಾಜಿ ಸಚಿವ ಅಂಜನಾಮೂರ್ತಿ ಅವರನ್ನು ಸಮಾಧಾನಪಡಿಸುವಲ್ಲಿ ಪಕ್ಷ ಯಶಸ್ವಿಯಾಗಿದ್ದು, ಶುಕ್ರವಾರ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಇನ್ನು ಜೆಡಿಎಸ್‌ನಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ ರಾಜಣ್ಣ, ಕೋಲಾರದಿಂದ ಡಾ.ರಮೇಶ್, ಕೆ.ಆರ್.ಪೇಟೆಯಿಂದ ದೇವರಾಜ್ ಪಕ್ಷೇತರರಾಗಿ ಕಣದಲ್ಲಿ ಮುಂದುವರಿಯಲು ನಿರ್ಧರಿಸಿದ್ದು, ಹಿಂದೆ ಸರಿಯುವಂತೆ ಮನವೊಲಿಸುವ ಕಾರ್ಯ ನಡೆಯುತ್ತಿದೆ.