ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಮಹೆಬೂಬನಗರ ಮತ್ತು ತಾಳಿಕೋಟೆ ರಸ್ತೆಯಲ್ಲಿರುವ ಆಶ್ರಯ ಬಡಾವಣೆಗಳಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಡೆಂಘೀ ರೋಗ ನಿಯಂತ್ರಣ ಕುರಿತು ಈಡಿಸ್ ಲಾರ್ವಾ ಸಮೀಕ್ಷೆ ನಡೆಸಲಾಯಿತು.
ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ. ಡೆಂಘೀ ರೋಗವು ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ರೋಗವಾಗಿದೆ. ಇಂಥ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾದ ಹೂವಿನ ಕುಂಡ, ಬಿಸಾಕಿದ ಹಳೆ ಟೈರ್, ಹಳೆ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಮುಂತಾದವುಗಳನ್ನು ಸ್ವತ್ಛವಾಗಿಟ್ಟುಕೊಳ್ಳುವುದು ಸೊಳ್ಳೆ ನಿಯಂತ್ರಣಕ್ಕೆ ಇರುವ ಪರಿಹಾರವಾಗಿದೆ.
ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುವುದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು. ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬಾರದು. ಮನೆಯ ಸುತ್ತಲು ಹಾಗೂ ತಾರಸಿ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತೆಂಗಿನ ಚಿಪ್ಪು, ಡೈರ್‌ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ತೊಟ್ಟಿ, ಬಿಂದಿಗೆ, ಡ್ರಮ್ ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಬೇಕು ಎಂದು ಸಾರ್ವನಿಕರಿಗೆ ತಿಳಿಹೇಳಲಾಯಿತು.
ಸಮೀಕ್ಷೆ ಸಮಯದಲ್ಲಿ ಲಾರ್ವಾ ಕಂಡು ಬಂದ ತಾಣಗಳನ್ನು ತಕ್ಷಣ ಖಾಲಿ ಮಾಡಿಸಲಾಯಿತು. ನಿಂತ ನೀರಲ್ಲಿ ಲಾರ್ವಾನಾಶಕ ಟೇಮಿಪಾಸ್ ದ್ರಾವಣವನ್ನು ಹಾಕಲಾಯಿತು. ಸಮೀಕ್ಷೆಯ ಮೇಲ್ವಿಚಾರಣೆಯನ್ನು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ, ಎಲ್‌ಎಚ್‌ವಿ ಎಸ್.ಸಿ. ಮಾನಕರ, ಎಂಟಿಎಸ್ ಸಿ.ಎಸ್. ರುದ್ರವಾಡಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ಗೌಡರ, ವೀರೇಶ ಎಸ್.ಬಿ., ಆಶಾ ಕಾರ್ಯಕರ್ತೆಯರು ಇದ್ದರು.