ಬೆಂಗಳೂರು: ಕಾಶ್ಮೀರ ರಜೌರಿಯಲ್ಲಿ ಉಗ್ರರೊಂದಿಗಿನ ಗುಂಡಿನ ಕಾದಾಟದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ಅಂತಿಮ ಯಾತ್ರೆ ಶನಿವಾರ ಸಕಲ ಮಿಲಿಟರಿ ಗೌರವದೊಂದಿಗೆ ನಡೆಯಿತು.
ಹುತಾತ್ಮ ಪ್ರಾಂಜಲ್ ಅವರಿಗೆ ಅಪಾರ ಸಂಖ್ಯೆಯ ಜನರು ಅಂತಿಮ ನಮನ ಸಲ್ಲಿಸಿದರು. ಅಂತಿಮ ಯಾತ್ರೆಯ ಮೆರವಣಿಗೆ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿ ಪುಷ್ಪ ವೃಷ್ಟಿ ಸುರಿಸಿ ಅಮರ್ ರಹೇ ..ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್ ಎಂಬ ಘೋಷಣೆ ಮೊಳಗಿಸಿ ಅಶ್ರುತರ್ಪಣ ಸಲ್ಲಿಸಿದರು.
ಶುಕ್ರವಾರ ರಾತ್ರಿ ಬೆಂಗಳೂರಿನ ಎಚ್‌ಎಲ್ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮಿಸಿದ್ದ ವೇಳೆ ಈ ಸಂದರ್ಭ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ. ಜಾರ್ಜ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ ಸಹಿತ ಗಣ್ಯರು ಉಪಸ್ಥಿತರಿದ್ದು ಗೌರವ ಸಲ್ಲಿಸಿದ್ದ ರು. ಬಳಿಕ ಜಿಗಣಿ ಸಮೀಪದ ನಂದನವನ ಲೇಔಟ್ ನಿವಾಸಕ್ಕೆ ತರಲಾಗಿತ್ತು.
ಶನಿವಾರ ಬೆಳಗ್ಗೆಯಿಂದಲೂ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು. ಆ ಬಳಿಕ ಮೆರವಣಿಗೆ ಮೂಲಕ ಕೂಡ್ಲು ಗೇಟ್ ಬಳಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರವನ್ನು ಬ್ರಾಹ್ಮಣ ವಿಧಿಯಂತೆ ನೆರವೇರಿಸಲಾಯಿತು.
29ರ ಹರೆಯದ ಪ್ರಾಂಜಲ್ ಅವರು 63 ನೇ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು.