Advertisement

ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ಭಾಗ್ಯ

06:10 AM Jan 04, 2018 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿರುವ ಲ್ಯಾಪ್‌ಟಾಪ್‌
ಭಾಗ್ಯವನ್ನು ಇನ್ನು ಮುಂದೆ ಹಿಂದುಳಿದ ವರ್ಗ ಸೇರಿದಂತೆ ಸಾಮಾನ್ಯ ವರ್ಗದ ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಲ್ಯಾಪ್‌ಟಾಪ್‌ ನೀಡುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಪ್ರಥಮ ಪದವಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಸ್‌ಸಿ- ಎಸ್‌ಟಿ ಸಮುದಾಯದ 31,742 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗಿದ್ದು, ಇನ್ನೂ 1.50 ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಬಡ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಉಪಯೋಗವಾಗಲಿದೆ. ಅವರ ಪೋಷಕರಿಗೆ ಲ್ಯಾಪ್‌ಟಾಪ್‌ ಕೊಡಿಸುವಷ್ಟು ಆರ್ಥಿಕ ಶಕ್ತಿ ಇರುವುದಿಲ್ಲ. ಬಡ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಜೆಟ್‌ನಲ್ಲಿ ಕಾರ್ಯಕ್ರಮ ಘೋಷಿಸಿದ್ದೆ. ಅದನ್ನು ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು.

ಜ್ಞಾನ ಮತ್ತು ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ.ಅದು ಯಾರ ಸ್ವತ್ತೂ ಅಲ್ಲವೆಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ಅದನ್ನು
ಗುರುತಿಸುವ ಕೆಲಸ ಆಗಬೇಕೆಂದು ಹೇಳಿದರು.

ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ಉತ್ತಮ ಗುಣ ಮಟ್ಟದ ಬ್ರ್ಯಾಂಡೆಡ್‌ ಲ್ಯಾಪ್‌ಟಾಪ್‌ಗ್ಳನ್ನು
ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ. 22 ಸಾವಿರ ರೂ.ಬೆಲೆಬಾಳುವ ಲ್ಯಾಪ್‌ಟಾಪ್‌ಗಳನ್ನು ಟೆಂಡರ್‌ನಲ್ಲಿ 14,500 ರೂ.ಗೆ ಖರೀದಿಸಿ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳ ಪರವಾದ ಸರ್ಕಾರ ನಮ್ಮದು. ಪರಿಶಿಷ್ಟರಲ್ಲದ ಇತರೆ ವಿದ್ಯಾರ್ಥಿಗಳಿಗೂ 1.50 ಲಕ್ಷ ರೂ.ಮೌಲ್ಯದ ಲ್ಯಾಪ್‌ಟಾಪ್‌ಗ್ಳನ್ನ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಸ್‌ಸಿ, ಎಸ್‌ಟಿ ಸಮುದಾಯದ ಪ್ರಥಮ ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಉಚಿತ ಲ್ಯಾಪ್‌ಟಾಪ್‌ಗ್ಳನ್ನು ಸಿಎಂ ಸಿದ್ದರಾಮಯ್ಯ ವಿತರಿಸಿದರು. ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ನಗರಾಭಿವೃದ್ಧಿ ಸಚಿವ ರೋಷನ್‌ಬೇಗ್‌, ಸಂಸದ ಪ್ರಕಾಶ್‌ ಹುಕ್ಕೇರಿ, ಮೇಯರ್‌ ಸಂಪತ್‌ರಾಜ್‌ ಉಪಸ್ಥಿತರಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next