ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶೋಚನೀಯ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದ ಶ್ರೀಲಂಕಾ 198 ರನ್ನುಗಳ ಭಾರೀ ಸೋಲಿಗೆ ತುತ್ತಾಗಿದೆ. ಆಕ್ಲೆಂಡ್‌ನಲ್ಲಿ ಶನಿವಾರ ನಡೆದ ಮುಖಾಮುಖೀಯಲ್ಲಿ ನ್ಯೂಜಿಲೆಂಡ್ 49.3 ಓವರ್‌ಗಳಲ್ಲಿ 274 ರನ್ ಪೇರಿಸಿದರೆ, ಶ್ರೀಲಂಕಾ 19.5 ಓವರ್‌ಗಳಲ್ಲಿ 76ಕ್ಕೆ ಸರ್ವಪತನ ಕಂಡಿತು. ಇದು ಏಕದಿನದಲ್ಲಿ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ದಾಖಲಿಸಿದ ಕನಿಷ್ಠ ಗಳಿಕೆ.
ಹಾಗೆಯೇ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದ್ವೀಪರಾಷ್ಟ್ರದ 5ನೇ ಅತ್ಯಂತ ಕಡಿಮೆ ಮೊತ್ತವಾಗಿದೆ. ಕಿವೀಸ್ ದೊಡ್ಡ ಮೊತ್ತ ಗಳಿಸಿದರೂ ಅರ್ಧಶತಕ ದಾಖಲಾದದ್ದು ಒಬ್ಬರಿಂದ ಮಾತ್ರ. ಆರಂಭಕಾರ ಫಿನ್ ಅಲೆನ್ 51 ರನ್ ಹೊಡೆದರು. ರಚಿನ್ ರವೀಂದ್ರ 49 ಹಾಗೂ ಡ್ಯಾರಿಲ್ ಮಿಚೆಲ್ 47 ರನ್ ಮಾಡಿದರು. ಕಿವೀಸ್ ಮಧ್ಯಮ ವೇಗಿ ಹೆನ್ರಿ ಶಿಪ್ಲಿ 31ಕ್ಕೆ 5 ವಿಕೆಟ್ ಕೆಡವಿ ಲಂಕಾ ಬ್ಯಾಟಿಂಗ್ ಸರದಿಯನ್ನು ಸೀಳಿದರು. ಇದು ಶಿಪ್ಲಿ ಅವರ ಜೀವನಶ್ರೇಷ್ಠ ಬೌಲಿಂಗ್. 2 ವರ್ಷಗಳ ಬಳಿಕ ಏಕದಿನ ಪಂದ್ಯವಾಡಲಿಳಿದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ 18 ರನ್ ಮಾಡಿದ್ದೇ ಲಂಕಾ ಸರದಿಯ ಗರಿಷ್ಠ ಗಳಿಕೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್-49.3 ಓವರ್‌ಗಳಲ್ಲಿ 274 (ಫಿನ್ ಅಲೆನ್ 51, ರವೀಂದ್ರ 49, ಮಿಚೆಲ್ 47, ಚಮಿಕ ಕರುಣಾರತ್ನೆ 43ಕ್ಕೆ 4, ರಜಿತ 38ಕ್ಕೆ 2, ಲಹಿರು ಕುಮಾರ 46ಕ್ಕೆ 2). ಶ್ರೀಲಂಕಾ-19.5 ಓವರ್‌ಗಳಲ್ಲಿ 76 (ಮ್ಯಾಥ್ಯೂಸ್ 18, ಚಮಿಕ ಕರುಣಾರತ್ನೆ 11, ಶಿಪ್ಲಿ 31ಕ್ಕೆ 5, ಮಿಚೆಲ್ 12ಕ್ಕೆ 2, ಟಿಕ್ನರ್ 20ಕ್ಕೆ 2).