ಬೈಂದೂರು: ಭಾಷೆ ಎನ್ನುವುದು ಕೇವಲ ಸಂವಹನದ ವೇದಿಕೆಯಲ್ಲ.ಬದಲಾಗಿ ನಮ್ಮ ಬದುಕು. ಈ ನೆಲದ ಪರಂಪರೆಯ ಪ್ರತೀಕ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಇಲ್ಲಿನ ಹೊಟೇಲ್ ಅಂಬಿಕಾ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಹ್ವಾಯ್ ಬನಿ ಕೂಕಣಿ -ಸ್ನೇಹ ಸಮ್ಮಿಲನ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂದಾಪ್ರ ಭಾಷೆ ತನ್ನದೇ ಆದ ಹಿರಿಮೆ ಹೊಂದಿದೆ. ಇಲ್ಲಿನ ಸಾಧಕರು ಪ್ರಪಂಚದೆಲ್ಲೆಡೆ ಊರಿನ ಹೆಸರನ್ನು ಬೆಳೆಸಿದ್ದಾರೆ. ಮೊಗೇರಿ ಅಡಿಗರು, ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಕಲೆ, ಸಾಹಿತ್ಯ ಶಿಕ್ಷಣ, ಉದ್ಯಮ, ಕ್ರೀಡೆ,ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಕುಂದಾಪುರದ ಕೊಡುಗೆ ಅಪಾರ. ನಮ್ಮ ಭಾಷೆ ನಮ್ಮ ಬದುಕಿನ ಸಂಕೇತ. ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು ಎಂದು ತಿಳಿಸಿದರು.
“ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್’ ವಿದೇಶದಲ್ಲಿರುವ ಕುಂದಾಪ್ರ ಕನ್ನಡಿಗರ ಆಸರೆಯ ಕೊಂಡಿಯಾಗಿದೆ. ಅಲ್ಲಿನ ಉದ್ಯಮಿಗಳು ಊರಿನ ಅಭಿವೃದ್ದಿ ಬಗ್ಗೆ ತೋರಿಸುವ ಕಾಳಜಿ ಮೆಚ್ಚುವಂಥದ್ದು. ನಮ್ಮ ಭಾಷೆಗೆ ಸರಕಾರದಿಂದ ಸಿಗುವ ಪ್ರಾಧಾನ್ಯತೆಯನ್ನು ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸಂಘದ ಅಧ್ಯಕ್ಷ ಸಾಧನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.ಅಂತಾರಾಷ್ಟ್ರೀಯ ಜಾದೂಗಾರ ಓಂ ಗಣೇಶ ಉಪ್ಪುಂದ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಜನಾರ್ದನ ಮರವಂತೆ, ರಾಷ್ಟ್ರಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ಮಾಪಕ ಎಸ್. ನಿತ್ಯಾನಂದ ಪೈ, ಮಾಜಿ ಜಿ.ಪಂ. ಅಧ್ಯಕ್ಷ ಎಸ್. ರಾಜು ಪೂಜಾರಿ, ತಾ.ಪಂ. ಸದಸ್ಯ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ದುಬಾೖ , ಪ್ರಕಾಶ್ ಬೊರೊಟ್ಟೋದುಬಾೖ, ಉದ್ಯಮಿ ರಿಯಾಜ್ ಅಹ್ಮದ್, ಉದ್ಯಮಿ ಜಯಾನಂದ ಹೋಬಳಿದಾರ್, ರಿಚರ್ಡ್ ರೆಬೆಲ್ಲೋ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ ಭಟ್ ಉಪ್ಪುಂದ, ಸ.ಪ್ರ.ದ. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಲತಾ ಪೂಜಾರಿ, ಜೆಸಿಐ ಅಧ್ಯಕ್ಷ ಮಣಿಕಂಠ ಉಪಸ್ಥಿತರಿದ್ದರು.
ಬಹ್ರೈನ್ ಕನ್ನಡ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಗ್ಯ ಸಾಧನದಾಸ್ ಸಮ್ಮಾನ ಪತ್ರ ವಾಚಿಸಿದರು. ಕತಾರ್ ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು ಸ್ವಾಗತಿಸಿದರು .
ಸಮ್ಮಾನ, ಪ್ರತಿಭಾ ಪುರಸ್ಕಾರ
ಬೈಂದೂರು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ, ಹಿರಿಯರಾದ ಜಗನ್ನಾಥ ಶೆಟಿಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ವಿದ್ಯಾನಿಧಿ, ದತ್ತು ಸ್ವೀಕಾರ, ಕುಂದಾಪ್ರ ಕನ್ನಡ ಹರಟೆ ಹಾಗೂ ಕುಂದಾಪ್ರ ಮನೋರಂಜನಾ ಕಾರ್ಯಕ್ರಮಗಳು ನಡೆದವು.