Advertisement

Special Talk: ಭಾಷೆ ಬಹಳ ದೊಡ್ಡ ದೇವರು, ಬರವಣಿಗೆ ನಿರಂತರ ಯಜ್ಞ

01:09 PM Oct 22, 2023 | Team Udayavani |

ಅಪರೂಪದ, ಅನನ್ಯ ಕಥೆ, ಕಾದಂಬರಿ ಮತ್ತು ಬರಹಗಳ ಮೂಲಕ ನಾಡಿನ ಮನೆ ಮಾತಾದವರು ವೈದೇಹಿ. ತಮ್ಮ ಕಾಲದ ಸಾಹಿತ್ಯ ಸಂದರ್ಭ ಮತ್ತು ಈ ದಿನಗಳ ಸಾಹಿತ್ಯ ಪರಿಸರ, ಬರಹಗಾರರ ಒಲವು ನಿಲುವಿನ ಕುರಿತು ಅವರಿಲ್ಲಿ ಮಾತನಾಡಿದ್ದಾರೆ…

Advertisement

1 ನೀವು ಬರೆಯಲು ಆರಂಭಿಸಿದ ದಿನಗಳಿಗೂ ಈಗಿನ ಕನ್ನಡ ಸಾಹಿತ್ಯ ಪರಿಸರಕ್ಕೂ ಏನು ಬದಲಾವಣೆಗಳನ್ನು ಗುರುತಿಸುವಿರಿ?
ಆಗ ಇಷ್ಟೆಲ್ಲ ಪತ್ರಿಕೆಗಳು ಇರಲಿಲ್ಲ. ಫೇಸ್‌ಬುಕ್‌, ಮೊಬೈಲ್‌ ಏನೆಂತದೂ ಇರಲಿಲ್ಲ. ಬರೆಯುವವರು ಕಡಿಮೆ ಇದ್ದರು. ಲೇಖಕಿಯರು ನಿಧಾನವಾಗಿ ಬರೆವ ಪ್ರಪಂಚಕ್ಕೆ ಒಳಬರುತಿದ್ದ ಕಾಲ ಅದು. ಸಾಹಿತ್ಯ ಪರಿಸರದಲ್ಲಿ ಹೆಣ್ಣುಮಕ್ಕಳು ಬರೆದಿರುವುದನ್ನು ಹೆಚ್ಚು ಗಮನಿಸುತ್ತಲೂ ಇರಲಿಲ್ಲ. ಪತ್ರಿಕೆಗಳು ಬರಹಗಾರರಿಂದ ಬಂದ ಲೇಖನ­ ಗಳನ್ನು, ಕತೆಗಳನ್ನು ಪ್ರಕಟಿಸಲಾಗದಿದ್ದರೆ ತಿಳಿಸಿ ಹಿಂದೆ ಕಳಿಸುತ್ತಿದ್ದರು. ಇದು ಒಂದು ಪರೋಕ್ಷ ವಿಮರ್ಶೆಯೂ ಆಗಿ ಯಾಕೆ ಹಿಂದೆ ಬಂತು ಅಂತ ಬರೆಯುವವರನ್ನು ತಮ್ಮದೇ ಬರಹದ ಅವಲೋಕನಕ್ಕೆ ಹಚ್ಚಿ ಬೆಳೆಸುತ್ತಿತ್ತು. ಇವತ್ತು ಬರೆಯುವವರೂ ಹೆಚ್ಚು, ಪ್ರಕಟಿಸುವ ಪತ್ರಿಕೆಗಳೂ ಇತರ ಮಾಧ್ಯಮಗಳೂ ಅನೇಕ. ಬರೆವ ತೀವ್ರತೆಗಿಂತ ಹುಮ್ಮಸ್ಸು ಜಾಸ್ತಿ ಅನಿಸುತ್ತಿದೆ. ಅದೇನು ಕೆಟ್ಟದಲ್ಲ ಎನ್ನಿ…

2 ಒಂದು ಕಾಲದಲ್ಲಿ ಕನ್ನಡದ ಓದುಗ ವಲಯವನ್ನು ವಿಸ್ತರಿಸಿದ ಲೇಖಕಿಯರು ಹೊಸ ಮಾಧ್ಯಮ ಮತ್ತು ಪರಿಭಾಷೆಗಳನ್ನು ಹುಡುಕಿಕೊಳ್ಳುವಲ್ಲಿ ಸೋತರು ಎನ್ನಿಸುತ್ತದೆಯೆ?
ಅದು ಹೇಗೆ ಸೋಲಾಗುತ್ತದೆ? ಅವರ ಅಂದಂದಿನ ಸಾಧ್ಯತೆಗಳಿಗೆ ತಕ್ಕಂತೆ ಸ್ಪಂದಿಸಿ ಬರೆದರು. ಮುಂಬರುವ ಲೇಖಕಿಯರ ಬರವಣಿಗೆ ಅಲ್ಲಿಂದ ಮುಂದುವರಿಯಿತು. ಹೊಸ ಮಾಧ್ಯಮ ಮತ್ತು ಪರಿಭಾಷೆ ಹುಡುಕಿಕೊಳ್ಳಲು ಅನು­ವಾಯಿತು. ಹೀಗಾಗಬೇಕಾದರೆ ಮೊದಲ ಹೆಜ್ಜೆಯನ್ನು ಓದುಗ ವಲಯವನ್ನು ವಿಸ್ತರಿಸಿದ ಆ ಲೇಖಕಿಯರೇ ಇಟ್ಟುಕೊಟ್ಟರು. ಮಹಿಳಾ ಬರವಣಿಗೆಯ ದಾರಿಯನ್ನು ಹದಮಾಡಿ ಕೊಟ್ಟ ಪರಿ ಅದು. ಹಾಗಾಗಿ ಅದು ಅವರ ಸೋಲಲ್ಲ.. ಗೆಲುವು.

3 ಕಥೆ ಕಾದಂಬರಿಗಳನ್ನೆ ಹೆಚ್ಚಾಗಿ ಬರೆಯುತ್ತಿರುವ ಹೆಣ್ಣುಮಕ್ಕಳು ಸಂಶೋಧನೆ ಮತ್ತು ವಿಮರ್ಶೆಗಳತ್ತ ಯಾಕೆ ಗಂಭೀರವಾಗಿ ತೊಡಗಿಸಿಕೊಳ್ಳುತ್ತಿಲ್ಲ?
ಬರವಣಿಗೆಗೆ ಮೊದಲು ತೊಡಗುವುದೇ ಕಾದಂಬರಿ, ಕತೆ ಇತ್ಯಾದಿಗಳಿಂದ. ಲೇಖಕರು ಮಾಡಿದ್ದೂ ಇದೇನೇ. ಲಾಗಾಯ್ತಿನಿಂದಲೂ ಬರವಣಿಗೆ ಪ್ರಪಂಚಕ್ಕೆ ಬಂದವರು ಅವರು. ಅವರು ಸವೆಸಿದ ಕಾಲವನ್ನು ಗಣಿಸಿದಲ್ಲಿ ಸಂಖ್ಯೆಯ ದೃಷ್ಟಿಯಿಂದ ವಿಮರ್ಶಕರ ಮತ್ತು ಸಂಶೋಧಕರ ಸಂಖ್ಯೆ ಬಹಳ ಕಡಿಮೆಯೇ. ಲೇಖಕಿಯರು ಸಾಗಿ ಬಂದ ಕಾಲದ ನಿಷ್ಪತ್ತಿಯಲ್ಲಿ ವಿಮರ್ಶಕಿಯರ ಸಂಖ್ಯೆ ಅವರಿಗಿಂತ ಹೆಚ್ಚು. ಇನ್ನು, ಬದುಕಿನ ತುಂಬ ಕತೆಗಳೇ ತುಂಬಿರುತ್ತವೆಯಲ್ಲವೆ? ಗಟ್ಟಿಯಾಗಿ ಕೇಳಿದರೆ ಕತೆ, ಕಾದಂಬರಿಗಳೆಂದರೆ ಏನು? ಆ ಚೌಕಟ್ಟಿನಲ್ಲಿರುವ ವಿಭಿನ್ನ ಬಗೆಯ ಸಾಮಾಜಿಕ ವಿಮರ್ಶೆ ಮತ್ತು ಸಂಶೋಧನೆಗಳು. ಇದು ಲೇಖಕಿಯರ ಮನೋ ನೆಲೆಗೆ ಹೆಚ್ಚು ಹತ್ತಿರದ ಸಾಮಾಜಿಕ ವಿಮಶಾì ವಿಧಾನ ಕೂಡ.

4 ಒಂದೆಡೆ ನಮ್ಮ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡು ಜಗತ್ತನ್ನು ತಲುಪಬೇಕು ಎನ್ನುವ ವಾದ, ಮತ್ತೂಂದು ಕಡೆ ನಮ್ಮ ನೆಲಮೂಲ ಸಂಸ್ಕೃತಿಗಳ ಚಹರೆಗಳನ್ನು ಕಟ್ಟಿಕೊಳ್ಳಲು ದೇಶಭಾಷೆಗಳಿಗೆ ಹಿಂದಿರುಗಬೇಕೆನ್ನುವ ಅಭಿಪ್ರಾಯಗಳನ್ನು ನೀವು ಹೇಗೆ ನೋಡುವಿರಿ?
ಮೊದಲು ಒಳ್ಳೆಯ ಬರವಣಿಗೆ ಬರಬೇಕು; ಬರಲಿ. ಅಲ್ಲಿಂದ ಅದು ಎಲ್ಲಿಗೇ ಸಾಗಿ ಹೋಗಲಿ, ಅದು ಅದರ ಡೆಸ್ಟಿನಿ. ಹೋಗಿದ್ದರಿಂದ ಅದರ ನೆಲಮೂಲ ಸಂಸ್ಕೃತಿಯ ಚಹರೆಗೆ ಧಕ್ಕೆ ಆಗುವುದೂ ಇಲ್ಲ. ಹೋದ ಮಾತ್ರಕ್ಕೆ ಅದು ಜಗತ್ತನ್ನು ತಲುಪುವ ಗ್ಯಾರಂಟಿಯೂ ಇಲ್ಲ. ಒಂದು ನಿರ್ದಿಷ್ಟ ಬರವಣಿಗೆ ಎಷ್ಟರಮಟ್ಟಿಗೆ ಅನುಭವಕ್ಕೆ ನಿಷ್ಠವಾಗಿದೆ, ಎಷ್ಟರಮಟ್ಟಿನ ಅಧಿಕೃತತೆ ಅದಕ್ಕಿದೆ, ಅದೆಷ್ಟು ಪ್ರಾಮಾಣಿಕತೆ, ನವೀನತೆ ಹೊಂದಿದೆ, ಕಲೆಯಾಗಿದೆ ಎಂಬುದರ ಮೇಲೆಯೇ ತನ್ನ ನಿಜ ಚಹರೆ ಕಟ್ಟಿಕೊಳ್ಳುತ್ತದೆ.

Advertisement

5 ಸಮಕಾಲೀನ ಸಂದರ್ಭದ ಸಂಕೀರ್ಣವಾದ ಅನುಭವಗಳನ್ನು ಹಿಡಿದಿಡಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಸಾಹಿತ್ಯ ಸಶಕ್ತವಾಗಿದೆ ಎನ್ನಿಸುತ್ತಿದೆಯೆ?
ಸಮಕಾಲೀನ ಸಂದರ್ಭದ ಸಂಕೀರ್ಣ ಅನುಭವ ಹಿಡಿದಿಡಲು ಸಾಹಿತ್ಯವೇ ಮುಖ್ಯ. ಕಲಾ ಮಾಧ್ಯಮವೇನೋ ನಿಜ. ಆದರೆ, ಸಮಸ್ಯೆಗಳನ್ನು ಬಗೆಹರಿಸುವುದು ಇತ್ಯಾದಿಯೆಲ್ಲ ಹೇಳಲು ಬರುವುದಿಲ್ಲ. ಬಗೆಹರಿಸಿದ್ದೂ ಇದೆ. ಇನ್ನಷ್ಟು ಜಟಿಲಗೊಳಿಸಿದ್ದಕ್ಕೂ ಬೇಕಷ್ಟು ಉದಾಹರಣೆಗಳು ಇವೆ. ಏನೂ ಇಲ್ಲದೆ ಸುಮ್ಮನೆ ಬರಿಯ ಓದಿಗಷ್ಟೇ ಸಂದು ಸಮಸ್ಯೆಗಳು ಸಮಸ್ಯೆಗಳಾಗಿಯೇ ಶತಮಾನದಿಂದ ಉಳಿದು ಬಂದ ವರ್ತಮಾನದಲ್ಲಿಯೂ ಜೀವಂತವಿರುವ ಉದಾಹರಣೆಗಳಂತೂ ಹೇರಳ ಇವೆ. ಬಗೆಹರಿಸುವ ದೃಢ ಉದ್ದೇಶ ತೊಟ್ಟು ಸಾಹಿತ್ಯ ಹುಟ್ಟುವುದಿಲ್ಲ. ಅದೊಂದು ಹೀಗೇ ಎಂದು ಹೇಳಲಾಗದೆ ಚಿಂತನೆ, ಭಾವನೆ, ಸಂವೇದನೆಗಳ ಮಾಂತ್ರಿಕ ಸಂಗಮದಲ್ಲಿ ತೆರೆದುಕೊಳ್ಳುವ ಅಕ್ಷರ ಮಾರ್ಗ. ಅದರಿಂದ ಸಮಸ್ಯೆ ಬಗೆಹರಿಯಿತೆಂದರೆ ಅದು ಭುವನದ ಭಾಗ್ಯ.

ಸಂದರ್ಶನ: ದಿನೇಶ್‌ ಕುಮಾರ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next