Advertisement

4ಜಿ ಯುಗದಲ್ಲಿ ಭಾಷೆಯ ಬೆಳವಣಿಗೆ : ಕನ್ನಡದ ಹೊಸ ಸಾಧ್ಯತೆಗಳ ಅನ್ವೇಷಿಸಿ

09:58 AM Feb 06, 2020 | sudhir |

ಕಲ್ಯಾಣ ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾದ ಇತಿಹಾಸ ಪ್ರಸಿದ್ಧ ಕಲಬುರಗಿ, 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದೆ. ಕನ್ನಡದ ಹಿರಿಯ ಕವಿ, ಸಾಹಿತಿ ಎಚ್‌.ಎಸ್‌.ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಾಹಿತ್ಯ ಜಾತ್ರೆ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ, ಸಾಹಿತ್ಯ ಸಮ್ಮೇಳನ ಎಂದಾಕ್ಷಣ ಅವವೇ ನಿರ್ಣಯಗಳು, ಅವವೇ ಚರ್ಚೆಗಳು ಎಂಬ ಕ್ಲೀಷೆಯ ಭಾವನೆಯೂ ಬೆಳೆದುಬಿಟ್ಟಿದೆ.

Advertisement

ಮಾಧ್ಯಮಗಳೂ ಕೂಡ ಕನ್ನಡ-ಕನ್ನಡಿಗರ ಅಸ್ಮಿತೆಯ ಕುರಿತ ಚರ್ಚೆಗಿಂತಲೂ ಸಮ್ಮೇಳನದಲ್ಲಿ ನಡೆದ ಪ್ರಹಸನಗಳು, ಊಟೋಪಚಾರದ ವ್ಯವಸ್ಥೆ-ಅವ್ಯವಸ್ಥೆಯ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ.
ಹಾಗೆಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿಲ್ಲ ಎಂದಾಕ್ಷಣ ಕನ್ನಡಕ್ಕೆ-ಕನ್ನಡಿಗರಿಗೆ ಇರುವ ಸಮಸ್ಯೆಗಳು, ಸವಾಲುಗಳು ಕಡಿಮೆಯಾಗಿವೆ ಎಂದೇನೂ ಇದರರ್ಥವಲ್ಲ. ಸಮಸ್ಯೆಗಳು ಈಗಲೂ ಜೀವಂತವಾಗಿವೆ, ಆದರೆ ಪ್ರತಿ ಬಾರಿಯೂ ಕೈಗೊಳ್ಳುವಠರಾವುಗಳಲ್ಲಿ, ಬಹುತೇಕ ಕಾರ್ಯರೂಪಕ್ಕೆ ಬರದೇ ಹೋಗುವುದರಿಂದ, ಈ ರೀತಿಯ ಒಂದು ನಿರಾಸಕ್ತಿ ಮೂಡಿರುವುದೂ ಕಟುವಾಸ್ತವ.

ಜತೆಗೆ, ಯಾವ ಕ್ಷೇತ್ರದಲ್ಲಿ ಸಮ್ಮೇಳನ ನಡೆಯುತ್ತದೆಯೋ ಆ ಕ್ಷೇತ್ರದ ಸಮಸ್ಯೆಗಳತ್ತಲೂ ಬೆಳಕು ಚೆಲ್ಲಬೇಕಾದ ಬೃಹತ್‌ ಅವಕಾಶವೂ ಇದೆಂದು ಭಾವಿಸಬೇಕಾದುದು ಅತ್ಯಗತ್ಯ.

ಹೈದ್ರಾಬಾದ್‌ ಕರ್ನಾಟಕವು ಕಲ್ಯಾಣ ಕರ್ನಾಟಕ ಎಂಬ ಹೆಸರು ಪಡೆದ ನಂತರ, ಈ ಭಾಗದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನವಿದು. ನಿಜಕ್ಕೂ ಹೆಸರಲ್ಲಷ್ಟೇ ಈ ಪ್ರದೇಶಗಳ ಕಲ್ಯಾಣವಾಗಿದೆ, ಸಮಾಜೋ- ಆರ್ಥಿಕ ಸ್ಥಿತಿಗತಿಯಲ್ಲಿ ಅಲ್ಲ ಎಂಬ ಕಟುವಾಸ್ತವ ಕಣ್ಣೆದುರಿಗಿದೆ. ಕಲ್ಯಾಣ ಕರ್ನಾಟಕದ ಜನರು ತಮ್ಮ ನೆಲೆ ತೊರೆದು ನಿರಂತರ ಗುಳೆ ಹೋಗುತ್ತಿರುವುದು ಇದಕ್ಕೆ ಸಾಕ್ಷಿ. ಈ ವಿಚಾರದಲ್ಲಿ ಆಡಳಿತದ ಕಣ್ಣು ತೆರೆಸುವ, ಬಡಿದೆಬ್ಬಿಸುವ ಕೆಲಸ ಸಮ್ಮೇಳನದಲ್ಲಿನ ಕನ್ನಡದ ಕಟ್ಟಾಳು’ಗಳಿಂದ ಆಗಬೇಕಿದೆ. ಈ ವಿಚಾರದಲ್ಲಿ ಮುದ್ರಣ, ಟಿ.ವಿ. ಮಾಧ್ಯಮದವರ ಜವಾಬ್ದಾರಿಯೂ ಅಧಿಕವಿದೆ. ಹೀಗಾಗಿ ಕಲಬುರಗಿ ಎಂದಾಕ್ಷಣ ಅದನ್ನು ಬರೀ “ಬಿಸಿಲೂರು’ ಎಂಬ ಸಂಕುಚಿತ ದೃಷ್ಟಿಯಲ್ಲಿ ನೋಡುವುದಕ್ಕೆ ಹೋಗಬಾರದು. ಅದನ್ನು ಮೀರಿದ ಮಾನವೀಯ ದೃಷ್ಟಿಯಿಂದ ಈ ಭಾಗದ ಸಮಸ್ಯೆಗಳತ್ತ ಗಮನಹರಿಸಲು ಪ್ರಯತ್ನಿಸಲಿ.

ಕೆಲ ವರ್ಷಗಳಿಂದ ಉದ್ಯೋಗ ನೀಡುವ ಭಾಷೆಯಾಗಿಯೂ ಕನ್ನಡವನ್ನು ಬೆಳೆಸಬೇಕೆಂಬ ಚರ್ಚೆ ಜೋರಾಗಿ ನಡೆಯುತ್ತಿರುವ ವೇಳೆಯಲ್ಲೇ, ಡಿಜಿಟಲ್‌ ಲೋಕವು ಹೊಸ ಉದ್ಯೋಗಾವಕಾಶಗಳ ಬಾಗಿಲನ್ನು ತೆರೆಯುತ್ತಾ ಸಾಗಿರುವುದನ್ನೂ ಗಮನಿಸಬಹುದಾಗಿದೆ. ಇಂದು ಗೂಗಲ್‌ ಸೇರಿದಂತೆ, ಅಂತಾರಾಷ್ಟ್ರೀಯ ಡಿಜಿಟಲ್‌ ವೇದಿಕೆಗಳು ವರ್ನಾಕುಲರ್‌ ಭಾಷೆಗಳತ್ತ
(ದೇಶ ಭಾಷೆ) ಹೆಚ್ಚು ದೃಷ್ಟಿ ಹರಿಸಲಾರಂಭಿಸಿದ್ದು, ಅಪಾರ ಪ್ರಮಾಣದಲ್ಲಿ ಹೂಡಿಕೆಯನ್ನೂ ಮಾಡುತ್ತಿವೆ. ತಂತ್ರಜ್ಞಾನ ಮತ್ತು ಭಾಷಾವಿಜ್ಞಾನದಲ್ಲಿ ಪರಿಣತಿ ಪಡೆಯುವವರಿಗೂ ಬೃಹತ್‌ ಬೇಡಿಕೆ ಎದುರಾಗುತ್ತಿದೆ. ಕನ್ನಡದ ಯುವ ಜನರಿಗೆ ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದಕ್ಕೆ ಸಜ್ಜುಗೊಳಿಸುವ ಪ್ರಯತ್ನದ ಬಗ್ಗೆಯೂ ಈ ಸಮ್ಮೇಳನ ಬೆಳಕು ಹರಿಸಬೇಕು.
ಈ 4ಜಿ ಯುಗದಲ್ಲಿ ಭಾಷೆಯು ಕೂಡ ಅತ್ಯಂತ ವೇಗವಾಗಿ ವಿಸ್ತರಣೆಯಾಗಬಲ್ಲದು. ಆದರೆ, ಈಗಲೂ ಈ ವಿಚಾರದಲ್ಲಿ ಕರ್ನಾಟಕದಿಂದ ಗಂಭೀರ ಪ್ರಯತ್ನಗಳು ನಡೆದೇ ಇಲ್ಲ.

Advertisement

ಕಿಂಡಲ್‌ನಂಥ ಉತ್ಪನ್ನಗಳಲ್ಲಿ ಹಿಂದಿ, ತಮಿಳು, ಮಲಯಾಳಂ, ಮರಾಠಿ ಮತ್ತು ಗುಜರಾತಿಯ ನೂರಾರು ಪುಸ್ತಕಗಳು ಬೆರಳಂಚಿಗೆ ಸಿಗುತ್ತಿವೆ. ಆದರೆ ಈಗಲೂ ಇಲ್ಲಿ ಕನ್ನಡದ ಪುಸ್ತಕಗಳು ಲಭ್ಯವಿಲ್ಲ, ಅಲ್ಲದೇ, ಆಡಿಯೋ ಬುಕ್‌ಗಳ ಅಲಭ್ಯತೆ, ವಾಯ್ಸ ಟು ಟೆಕ್ಸ್ಟ್ ತಂತ್ರಜ್ಞಾನದಲ್ಲಿ ಹಿಂದುಳಿದಿರುವಿಕೆ ಏನನ್ನು ಸೂಚಿಸುತ್ತದೆ? ಶಾಸ್ತ್ರೀಯ ಸ್ಥಾನಮಾನ ಗಳಿಸಿದ ಭಾಷೆ ಎಂಬ ಕಾರಣಕ್ಕೆ ಅದನ್ನು ಆಧುನಿಕ ಲೋಕಕ್ಕೆ ವಿಸ್ತರಿಸಬಾರದು ಎಂಬ ಸಾಂಪ್ರದಾಯಿಕ ಮನಸ್ಥಿತಿಯೇನು?

ಕಳೆದ ವರ್ಷ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಸೇರಿದಂತೆ, ಹಲವು ವರ್ಷಗಳಿಂದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುತ್ತಾ ಬರಲಾಗಿದೆ. ಅವುಗಳ ಅನುಷ್ಠಾನ ಎಷ್ಟರಮಟ್ಟಿಗೆ ಆಗಿದೆ ಎಂದೂ ಚಿಂತಿಸಲೇಬೇಕಾದ ಸಮಯವಿದು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸ್ವತಂತ್ರವಾದ ಸೃಜನಶೀಲ ಸಂಶೋಧನೆಗಳನ್ನು ನಡೆಸಲು ಅನುಕೂಲವಾಗುವಂತೆ ಕೋಶಗಳ ರಚನೆಯಾಗಬೇಕೆಂಬ ಒತ್ತಾಸೆಯಿರಲಿ, ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ವಿಚಾರವೇ ಇರಲಿ. ಈ ವಿಷಯಗಳಲ್ಲಿನ ನಿಷ್ಕರ್ಷೆಯು ಅನುಷ್ಠಾನದ ವಿಷಯದಲ್ಲಿ ಯಾವ
ಹಂತದಲ್ಲಿದೆ ಎಂಬ ಚರ್ಚೆಯೂ ಮುಖ್ಯವಲ್ಲವೇ?

ಒಟ್ಟಲ್ಲಿ ಕನ್ನಡ ಭಾಷೆ, ಕನ್ನಡ ಜನರ ಅಸ್ಮಿತೆಯನ್ನು ಮತ್ತಷ್ಟು ಸದೃಢ ಗೊಳಿಸುವ ವಿಚಾರವು ಚರ್ಚೆಯ ಹಂತ ದಾಟಿ, ಕಾರ್ಯರೂಪಕ್ಕೆ ಬರುವಂತೆ ನೋಡಿಕೊಂಡಾಗ ಮಾತ್ರ ಸಮ್ಮೇಳನದ ಆಯೋಜನೆಯು ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ನಡೆಯುತ್ತಿರುವ ನುಡಿ ಜಾತ್ರೆ ಆಶಾದಾಯಕ ದಿಕ್ಕಿನಲ್ಲಿ ಸಾಗಲಿ ಎಂದು ಶುಭಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next