ಹಾಸನ: ಸಕಲೇಶಪುರ ತಾಲೂಕು ಯಡಕುಮರಿ ಬಳಿ ರೈಲ್ವೆ ಹಳಿ ಮೇಲೆ ಭೂ ಕುಸಿತ ಪರಿಣಾಮ ಮಂಗಳೂರು – ಬೆಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.ಶುಕ್ರವಾರ ಸಂಜೆ ಸಂಚಾರ ಆರಂಭಿಸಿದ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿಂದ ಹೊರಟ ರೈಲುಗಳ ಪ್ರಯಾಣಿಕರನ್ನು ಕೆಎಸ್ ಆರ್ ಟಿಸಿ ಬಸ್‌ಗಳ ಮೂಲಕ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಹೊರಟ ರೈಲು ಪ್ರಯಾಣಿಕರಿಗೆ ಸುಬ್ರಹ್ಮಣ್ಯ ರೈಲು ನಿಲ್ದಾಣ ದಿಂದ ಮೈಸೂರು ಮತ್ತು ಬೆಂಗಳೂರಿಗೆ ಕೆ ಎಸ್ ಆರ್ ಟಿಸಿ ಬಸ್ ಗಳ ಮೂಲಕ ಸಂಚರುಸುವ ವ್ಯವಸ್ಥೆ ಮಾಡಲಾಗಿದೆ.
ಬಸ್ ಗಳಿಗೆ ರಾತ್ರಿ ಊಟದ ಪ್ಯಾಕೆಟ್ ಗಳನ್ನು ರೈಲ್ವೆ ಸಿಬ್ಬಂದಿ ಮೂಲಕ ತಲಪಿಸುವ ವ್ಯವಸ್ಥೆ ಮಾಡಲಾಗಿದ್ದು ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಸಿಬ್ಬಂದಿಯನ್ನೂ ಕಳುಹಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಿಂದ 4 ಬಸ್ ಗಳನ್ನು ಬೆಂಗಳೂರು ಮತ್ತು ಹಾಸನದ ಕಡೆಗೆ ಹಾಗೂ ಹಾಸನ ರೈಲು ನಿಲ್ದಾಣದಿಂದ 4. ಬಸ್‌ಗಳಲ್ಲಿ ರೈಲ್ವೆ ಪ್ರಯಾಣಿಕರನ್ನು ಮಂಗಳೂರು ಕಡೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ವಿಜಯಪುರ – ಹಾಸನ – ಮಂಗಳೂರು ರೈಲನ್ನು ಲೋಂಡಾ – ಕ್ಯಾಸಲ್ ರಾಕ್ ಮಡಗಾಂವ್ – ಕಾರವಾರ ಮಾರ್ಗ ವಾಗಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.
ಏತನ್ಮಧ್ಯೆ ರೈಲು ಹಳಿ ಮೇಲಿನ ಮಣ್ಣು ತೆರವು ಕಾರ್ಯಾಚರಣೆ ರಾತ್ರಿಯೇ ಆರಂಭವಾಗಿದ್ದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.