Advertisement

ಅಂತರ್ಜಲ ಹೆಚ್ಚಳದಿಂದ ಭೂ ಕುಸಿತ?

02:07 PM Nov 11, 2019 | Suhan S |

ಗದಗ: ಬಯಲು ಸೀಮೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೆಲ ವರ್ಷಗಳಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗುತ್ತಿತ್ತು. ಅವಳಿ ನಗರದಲ್ಲಿನ ಐತಿಹಾಸಿಕ ಬಾವಿ, ಹೊಂಡಗಳು ಬತ್ತಿ ಹೋಗಿ ಬರಿದಾಗಿದ್ದವು.

Advertisement

ಆದರೆ, ಇತ್ತೀಚಿನ ವರ್ಷಗಳಲ್ಲಿ ನಗರದ ಐತಿಹಾಸಿಕ ಭೀಷ್ಮ ಕೆರೆಗೆ ನಿರಂತರ ನೀರು ತುಂಬಿಸುವ ಕೆಲಸವಾಗುತ್ತಿದ್ದು, ಅಂತರ್ಜಲ ಮಟ್ಟ ವಿಪರೀತವಾಗಿ ಹೆಚ್ಚಿದೆ. ಇದು ಪರೋಕ್ಷವಾಗಿ ಭೂ ಕುಸಿತಕ್ಕೆ ಕಾರಣವಾಗುತ್ತಿದೆ ಎಂಬುದು ಇದೀಗ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಶನಿವಾರ ಬೆಳಗ್ಗೆ ನಗರದ ಖಾನತೋಟದ ಮನೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಇಂಥದ್ದೊಂದು ಚರ್ಚೆ ಶುರುವಾಗಿದೆ. ಮಳೆ ಆಶ್ರಿತ ಪ್ರದೇಶವಾಗಿರುವ ನಗರ ಹಲವು ದಶಕಗಳಿಂದ ನಿರೀಕ್ಷಿತ ಮಳೆಯೂ ಇಲ್ಲದೇ ಇಲ್ಲಿನ ಐತಿಹಾಸಿಕ ಭೀಷ್ಮ ಕೆರೆ ಬರಿದಾಗಿತ್ತು. ಅದರೊಂದಿಗೆ ಕೆರೆ ಹರಿದು ಬರುವ ಮಳೆ ನೀರಿನ ಬಫರ್‌ ಪ್ರದೇಶದಲ್ಲಿ ಹೊಸ ಬಡಾವಣೆಗಳಾಗಿ, ಬೃಹತ್‌ ಕಟ್ಟಡಗಳು ತಲೆ ಎತ್ತಿವೆ. ಪರಿಣಾಮ ದಶಕಗಳಿಂದ ಭೀಷ್ಮ ಕೆರೆ ನೀರಿಲ್ಲದೇ ಖಾಲಿ ಮೈದಾನದಂತೆ ಗೋಚರಿಸುತ್ತಿತ್ತು. ಆದರೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕಳೆದ ಮೂರು ವರ್ಷಗಳಿಂದ ತುಂಗಭದ್ರಾ ನದಿ ನೀರಿನಿಂದ ನಗರದ ಭೀಷ್ಮ ಕೆರೆ ಒಡಲು ತುಂಬಿಸಲಾಗುತ್ತಿದೆ. ಅದರ ಫಲವಾಗಿ ಹಲವು ವರ್ಷಗಳಿಂದ ಬರಿದಾಗಿದ್ದ ನಗರದ ಕೊಳವೆ ಬಾವಿಗಳಲ್ಲಿ ಕಳೆದ ವರ್ಷದಿಂದ ಜೀವ ಜಲ ಜಿನುಗುತ್ತಿವೆ.

ಮರು ಜೀವ ಪಡೆದ ನೀರಿನ ಸೆಲೆ: ಅದರಂತೆ ಸುಮಾರು ಮೂರ್‍ನಾಲ್ಕು ದಶಗಳಿಂದ ನೀರೇ ಕಂಡರಿಯದ ಕೊನೇರಿ ಹೊಂಡದಲ್ಲಿ ನೀರಿನ ಸೆಲೆಗಳು ಮರು ಜೀವ ಪಡೆದಿದ್ದು, ನೀರಿನಿಂದ ತುಂಬಿ ತುಳುಕುತ್ತಿವೆ. ನೀರಿಲ್ಲದೇ ಪಾತಾಳ ಕಂಡಿದ್ದ ಇಲ್ಲಿನ ಐತಿಹಾಸಿಕ ವೀರನಾರಾಯಣ ದೇವಸ್ಥಾನ, ಕಿಲ್ಲಾ ಓಣಿ, ಖಾನ ತೋಟದ ಹೊಸ ಬಾವಿ, ನರಿ ಬಾವಿ, ಹನುಮಾನ ದೇವಸ್ಥಾನ ಬಾವಿಗಳಿಗೆ ಇದೀಗ ಜೀವಕಳೆ ಬಂದಿರುವುದು ನಗರದಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತಿರುವುದಕ್ಕೆ ಸಾಕ್ಷಿ ಎನ್ನಲಾಗುತ್ತದೆ.

ನಗರದಲ್ಲಿ ಬಸಿ ನೀರಿನ ಸಮಸ್ಯೆ?: ನಗರದಲ್ಲಿ ಅಂತರ್ಜಲ ಹೆಚ್ಚಳದಿಂದಾಗಿ ನಗರದಲ್ಲಿ ಬಸಿ ನೀರಿನ ಸಮಸ್ಯೆ ಶುರುವಾಗಿದೆ. ಪಂಚರ ಹೊಂಡ, ನಾಮಜೋಶಿ ರೋಡ್‌ ಹಾಗೂ ಸ್ಟೇಷನ್‌ ರಸ್ತೆಯ ಹಲವು ನೆಲಮಹಡಿ (ಅಂಡರ್‌ ಗ್ರೌಂಡ್‌ ಬಿಲ್ಡಿಂಗ್‌) ಕಟ್ಟಡಗಳಲ್ಲಿ ನೆಲಹಾಸು ಹಾಗೂ ಬಿರುಕು ಬಿಟ್ಟಿರುವ ಗೋಡೆಗಳಿಂದ ನೀರು ಜಿನುಗ್ಗುತ್ತಿವೆ. ಅದರಲ್ಲೂ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಬಸಿ ನೀರಿನ ಸಮಸ್ಯೆ ಹೆಚ್ಚುತ್ತಿದೆ ಎಂಬುದು ವರ್ತಕರ ಅಳಲು.

Advertisement

1.5 ಅಡಿಗೂ ಹೆಚ್ಚು ನೀರು ಸಂಗ್ರಹ: ಕೆಲವೆಡೆ ಪ್ರತಿದಿನ ಬೆಳಗಾಗುತ್ತಿದ್ದಂತೆ ಸುಮಾರು ಒಂದೂವರೆ ಅಡಿಗೂ ಹೆಚ್ಚು ನೀರು ಸಂಗ್ರಹವಾಗುತ್ತಿವೆ. ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಒಂದೆರಡು ಗಂಟೆಗಳಲ್ಲಿ ನೀರು ಖಾಲಿಯಾದರೆ, ಇನ್ನೂ ಕೆಲವೆಡೆ ದಿನವಿಡೀ ಪಂಪ್‌ ಮಾಡಿದರೂ, ಬಸಿ ನೀರು ಬರುತ್ತಿರುವುದು ಆಯಾ ಕಟ್ಟಡಗಳ ವರ್ತಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದರಿಂದ ಭೂಮಿ ಸಡಿಲಗೊಳ್ಳುತ್ತಿದ್ದು, ಭೂ ಕುಸಿತಕ್ಕೆ ಕಾರಣವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಅಲ್ಲದೇ, ಶನಿವಾರ ಭೂ ಕುಸಿತ ಉಂಟಾಗಿರುವ ಪ್ರದೇಶದಲ್ಲಿ ದಶಕಗಳ ಹಿಂದೆ ಹಗೆಗಳು, ಬಾವಿಗಳಿದ್ದವು. ಅವುಗಳಿಗೆ ಮಣ್ಣು ತುಂಬಿ ನೆಲಸಮಗೊಳಿಸಿದ್ದು, ಇದೀಗ ಮತ್ತೆ ಅವು ಬಾಯೆ¤ರೆಯುತ್ತಿವೆ ಎಂಬ ಮಾತು ಕೇಳಿ ಬಂದಿವೆ.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next